ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಣಿಜ್ಯೇತರ ವಾಹನಗಳಿಗೆ ಟೋಲ್ ಪಾವತಿಯಿಂದ ವಿನಾಯ್ತಿ ನೀಡುವ ಕುರಿತಂತೆ ವಿವರ ಒದಗಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹೈಕೋರ್ಟ್ ಮಂಗಳವಾರ ಸೂಚಿಸಿದೆ. ಹೆದ್ದಾರಿಗಳಲ್ಲಿ ವಾಣಿಜ್ಯೇತರ ವಾಹನಗಳಿಗೆ ಟೋಲ್ ಶುಲ್ಕದಿಂದ ವಿನಾಯ್ತಿ ನೀಡುವಂತೆ ಕೋರಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಸಲ್ಲಿಸಿದ್ದ ಅರ್ಜಿಯು ಮುಖ್ಯ ನ್ಯಾಯ ಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಎಸ್. ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠದ ಎದುರು ಮಂಗಳವಾರ ವಿಚಾರಣೆ ಬಂದಿತ್ತು. ವಿಚಾರಣೆ ವೇಳೆ “ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಣಿಜ್ಯೇತರ ವಾಹನಗಳಿಗೆ ಟೋಲ್ ಶುಲ್ಕದಿಂದ ವಿನಾಯ್ತಿ ನೀಡುವ ಸಂಬಂಧದ ಕರಡು ಮಸೂದೆ ಸಂಸತ್ತಿನ ಮುಂದಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಈ ಬಗ್ಗೆ ವಿವರಣೆ ಒದಗಿಸುವಂತೆ ಸೂಚಿಸಿ ವಿಚಾರಣೆಯನ್ನು ಡಿ.19ಕ್ಕೆ ಮುಂದೂಡಿತು.