ಬೆಂಗಳೂರು: ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸಲು ಅವಕಾಶ ಕಲ್ಪಿಸಿರುವ ರಾಷ್ಟ್ರಿಯ ಹೆದ್ದಾರಿಗಳ ಕಾಯ್ದೆ-1956ರ ಸೆಕ್ಷನ್ 8ಎ ಅನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರದ ಅಟಾರ್ನಿ ಜನರಲ್‌ಗೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತಂತೆ ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು. ವಾದ ಆಲಿಸಿದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಅಟಾರ್ನಿ ಜನರಲ್ ಅವರಿಗೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆಗಳನ್ನು ಸಲ್ಲಿಸಲು ನಿರ್ದೇಶನ ನೀಡಿ ವಿಚಾರಣೆಯನ್ನು ನ.22ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದ ಮಂಡಿಸಿ, ಕೇಂದ್ರ ಸರ್ಕಾರವು 1956ರ ಸೆ.11ರಂದು ರಾಷ್ಟ್ರೀಯ ಹೆದ್ದಾರಿಗಳ ಕಾಯ್ದೆ ರೂಪಿಸಿತ್ತು. ಅದರನ್ವಯ ರಾಷ್ಟ್ರೀಯ ಹೆದ್ದಾರಿಗಳನ್ನು ನೋಟಿಫೈ ಮಾಡಿತ್ತು. ಆ ಕಾಯ್ದೆ ಸೆಕ್ಷನ್ 7 ಅನ್ವಯ ರಾಷ್ಟ್ರೀಯ ಹೆದ್ದಾರಿಯ ಸೌಲಭ್ಯ ಪಡೆದವರಿಂದ ಶುಲ್ಕ ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿತ್ತು.
ಈ ಮಧ್ಯೆ 1995ರಲ್ಲಿ ಆ ಕಾಯ್ದೆಯ ಸೆಕ್ಷನ್ 8ಎ ತಿದ್ದುಪಡಿ ತಂದ ಕೇಂದ್ರ ಸರ್ಕಾರ, ರಾಷ್ಟ್ರೀಯ ಹೆದ್ದಾರಿ ಹಾಗೂ ಸೇತುವೆಗಳನ್ನು ನಿರ್ಮಿಸಿ, ನಿರ್ವಹಣೆ ಮಾಡುವ ಮೂಲಕ ವಾಹನಗಳಿಂದ ಟೋಲ್ ಸಂಗ್ರಹಿಸುವ ಸಂಬಂಧ ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಿಯಮ ರೂಪಿಸಿತು ಎಂದು ವಿವರಿಸಿದರು.
ನಿಯಮಗಳ ಪ್ರಕಾರ ಕೇಂದ್ರ ರಸ್ತೆ ನಿಧಿ ಹಾಗೂ ಕೇಂದ್ರ ಮೂಲಸೌಕರ್ಯ ಕಾಯ್ದೆಯಡಿ ಸಂಗ್ರಹಿಸಿದ ಸೆಸ್ ಹಾಗೂ ಸುಂಕವನ್ನು ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ನಿರ್ಮಾಣ ಹಾಗೂ ನಿರ್ವಹಣೆಗೆ ವ್ಯಯಿಸಬೇಕಿದೆ. ಇಷ್ಟು ಬೃಹತ್ ಪ್ರಮಾಣದಲ್ಲಿ ಸೆಸ್ ಸಂಗ್ರಹಿಸಿದ್ದರೂ,
ಕೇಂದ್ರ ಸರ್ಕಾರವು ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುತ್ತಿರುವುದು ಅಕ್ರಮ ಹಾಗೂ ಅಸಾಂವಿಧಾನವಾಗಿದೆ. ಹೀಗಾಗಿ, ಅರ್ಜಿ ಇತ್ಯರ್ಥವಾಗುವರೆಗೂ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳಿಂದ ಶುಲ್ಕ ಸಂಗ್ರಹಿಸದಂತೆ ಮಧ್ಯಂತರ ಆದೇಶ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.