ಮುಂಬೈ: ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ನಡೆಯುತ್ತಿರುವ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ವಿರಾಮ ತೆಗೆದುಕೊಂಡ ಕಾರಣದ ಬಗ್ಗೆ ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ನಾನು ದೊಡ್ಡ ತಪ್ಪು ಮಾಡಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ವಿರಾಟ್ ಅಲಭ್ಯತೆಯ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ನೀಡಿದ್ದ ಮಾಹಿತಿಯು ನಿಜವಲ್ಲ ಎಂದು ಡಿವಿಲಿಯರ್ಸ್ ಹೇಳಿದರು.
ವಿರಾಟ್ ಕೊಹ್ಲಿ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಎರಡು ಟೆಸ್ಟ್‌ಗಳಿಂದ ಹಿಂದೆ ಸರಿದಿದ್ದಾರೆ. ಕೊಹ್ಲಿ ನಿರ್ಧಾರಕ್ಕೆ ಕಾರಣಗಳನ್ನು ಊಹಿಸಬೇಡಿ ಎಂದು ಅಭಿಮಾನಿಗಳು ಮತ್ತು ಮಾಧ್ಯಮಗಳನ್ನು ಬಿಸಿಸಿಐ ಕೋರಿತ್ತು. ಮೊದಲ ಎರಡು ಪಂದ್ಯಗಳಿಂದ ಹಿಂದೆ ಸರಿಯುವ ಮೊದಲು ಕೊಹ್ಲಿ ನಾಯಕ ರೋಹಿತ್ ಶರ್ಮಾ ಮತ್ತು ತಂಡದ ಮ್ಯಾನೇಜ್ ಮೆಂಟ್ ಜತೆ ಚರ್ಚಿಸಿದ್ದಾರೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ತಿಳಿಸಿತ್ತು.
ಇದಾದ ಬಳಿಕ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ್ದ ಡಿವಿಲಿಯರ್ಸ್, ವಿರಾಟ್ ಆರೋಗ್ಯವಾಗಿದ್ದು, ತನ್ನ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಅಲ್ಲದೆ ಅವರು ಮತ್ತು ಪತ್ನಿ ಅನುಷ್ಕಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿದ್ದರು.
ದೈನಿಕ್ ಭಾಸ್ಕರ್ ಜತೆಗಿನ ಸಂವಾದದಲ್ಲಿ ಡಿವಿಲಿಯರ್ಸ್ ಈಗ ಕೊಹ್ಲಿಯ ಅಲಭ್ಯತೆಯ ಬಗ್ಗೆ ಅಭಿಮಾನಿಗಳೊಂದಿಗೆ ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ದೊಡ್ಡ ತಪ್ಪು ಮಾಡಿದ್ದೇನೆ, ಈ ಸಮಯದಲ್ಲಿ ಆರ್ ಸಿಬಿ ಸ್ಟಾರ್ ಯಾಕೆ ವಿರಾಮದಲ್ಲಿದ್ದಾರೆ ಎಂದು ತಿಳಿದಿಲ್ಲ ಎಂದು ಹೇಳಿದ್ದಾರೆ.
ಕೊಹ್ಲಿ ತಂಡಕ್ಕೆ ಶೀಘ್ರ ಪುನರಾಗಮನ ಮಾಡಲಿ ಎಂದು ಹಾರೈಸುತ್ತಿದ್ದೇನೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.
“ನಿಶ್ಚಯವಾಗಿ ಕುಟುಂಬವು ಮೊದಲು ಬರುತ್ತದೆ, ನನ್ನ ಯೂಟ್ಯೂಬ್ ಶೋನಲ್ಲಿ ನಾನು ಹೇಳಿದಂತೆ ಇದು ಆದ್ಯತೆಯಾಗಿದೆ. ಅಲ್ಲದೆ, ನಾನು ಅದೇ ಸಮಯದಲ್ಲಿ ತಪ್ಪು ಮಾಡಿದ್ದೇನೆ. ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದೇನೆ, ಅದು ನಿಜವಲ್ಲ. ಏನಾಗುತ್ತಿದೆ ಎಂದು ಯಾರಿಗೂ ತಿಳಿದಿಲ್ಲ” ಎಂದು ಡಿವಿಲಿಯರ್ಸ್ ದೈನಿಕ್ ಭಾಸ್ಕರ್‌ಗೆ ತಿಳಿಸಿದರು.