ಟೋಕಿಯೋ : ಟೋಕಿಯೋ ಒಲಂಪಿಕ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ಪುರುಷರ ಹಾಕಿ ತಂಡ ಬ್ರಿಟನ್ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಕ್ವಾರ್ಟರ್ ಫೈನಲ್ ನಲ್ಲಿ ಗ್ರೇಟ್ ಬ್ರಿಟನ್ ತಂಡದ ಎದುರು ಭಾರತದ ಹಾಕಿ ತಂಡ ಉತ್ತಮ ಆಟವನ್ನು ಆಡಿ ಬ್ರಿಟನ್ ವಿರುದ್ಧ 3-1 ಗೋಲು ಅಂತರದಿಂದ ಗೆದ್ದು ಬೀಗಿದೆ. ಈ ಮೂಲಕ 41 ವರ್ಷಗಳ ಬಳಿಕ ಭಾರತದ ಹಾಕಿ ತಂಡ ಒಲಂಪಿಕ್ಸ್ ನಲ್ಲಿ ಸೆಮಿಫೈನಲ್ ಎಂಟ್ರಿಯನ್ನು ಪಡೆದುಕೊಂಡಿದೆ.
ಪಂದ್ಯದ ಮೊದಲ ಹಂತದಲ್ಲಿ 9 ನಿಮಿಷದಲ್ಲೇ ಪ್ರಥಮ ಗೋಲು ದಾಖಲಿಸಿ ದಿಲ್ಪ್ರೀತ್ ಸಿಂಗ್ ಭಾರತಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು. ನಂತರ ಗುಜರಂತ್ ಸಿಂಗ್ ಎರಡನೇ ಗೋಲು ದಾಖಲಿಸಿದರು.
ಕ್ವಾರ್ಟರ್ ಫೈನಲ್ ಜಯದೊಂದಿಗೆ ಭಾರತ 41 ವರ್ಷಗಳ ಬಳಿಕ ಸೆಮಿಫೈನಲ್ಗೇರಿದೆ. 1980 ರ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಭಾರತ ಕಡೆಯ ಬಾರಿ ಪದಕ ಜಯಿಸಿತ್ತು. ಆ ಬಳಿಕ ಪ್ರಮುಖ ಘಟ್ಟ ತಲುಪುವಲ್ಲಿ ಇಂಡಿಯನ್ ಹಾಕಿ ಟೀಮ್ ವಿಫಲವಾಗಿತ್ತು.
ಹಿಂದಿನ 2016ರ ರಿಯೋ ಒಲಿಂಪಿಕ್ಸ್ನಲ್ಲಿ ಕೊನೆಯ ಸ್ಥಾನ ಅಲಂಕರಿಸಿತ್ತು. ಭಾರತ ಆಗಸ್ಟ್ 3 ( ಮಂಗಳವಾರ) ಬೆಲ್ಜಿಯಂ ಎದುರು ಸೆಮಿಫೈನಲ್ ಪಂದ್ಯವನ್ನು ಆಡಲಿದೆ.