Advertisement

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

11:56 PM Apr 28, 2024 | Team Udayavani |

ಮಡಿಕೇರಿ: ಕೊಡವ ಕೌಟುಂಬಿಕ ಹಾಕಿ ಕಪ್‌ ಅಂಗವಾಗಿ ನಡೆದ ಕುಂಡ್ಯೋಳಂಡ ಹಾಕಿ ಕೂಟ ಅಧಿಕೃತವಾಗಿ ಗಿನ್ನೆಸ್‌ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.

Advertisement

ಫೈನಲ್‌ ಪಂದ್ಯದ ದಿನವಾದ ರವಿವಾರ ನಾಪೋಕ್ಲುವಿನ ಕೆಪಿಎಸ್‌ ಶಾಲಾ ಮೈದಾನದಲ್ಲಿ ಉಪಸ್ಥಿತರಿದ್ದ ಗಿನ್ನೆಸ್‌ ಬುಕ್‌ ಆಫ್ ರೆಕಾರ್ಡ್ಸ್‌ ಅಧಿಕಾರಿಗಳು ವಿಶ್ವದಾಖಲೆ ಪ್ರಮಾಣಪತ್ರವನ್ನು ಸಂಘಟಕರಿಗೆ ಹಸ್ತಾಂತರಿಸಿದರು.

ವಿಶ್ವದ ಬೃಹತ್‌ ಫೀಲ್ಡ್‌ ಹಾಕಿ ಕೂಟ ಎಂಬ ಹೆಗ್ಗಳಿಕೆಯನ್ನು ಕುಂಡ್ಯೋಳಂಡ ಹಾಕಿ ಹಬ್ಬ ಪಡೆದುಕೊಂಡಿದೆ. ಇದುವರೆಗೆ ಫೀಲ್ಡ್‌ ಹಾಕಿಯಲ್ಲಿ ಯಾರೂ ಈ ದಾಖಲೆ ಹೊಂದಿರಲಿಲ್ಲ. ಇದೇ ಮೊದಲ ಬಾರಿಗೆ ಈ ವಿಭಾಗದಲ್ಲಿ ನಾವು ಅರ್ಜಿ ಹಾಕಿ, ದಾಖಲೆ ನಿರ್ಮಿಸಿದ್ದೇವೆ ಎಂದು ಕೂಟದ ಸಂಘಟಕರು ಹೇಳಿದ್ದಾರೆ.

ದಾಖಲೆಯೇನು?
ಕೂಟದಲ್ಲಿ ಒಟ್ಟು 360 ತಂಡಗಳು ನೋಂದಣಿ ಮಾಡಿ ಕೊಂಡಿದ್ದವು. ಅಂತಿಮವಾಗಿ 336 ತಂಡಗಳು ಆಡಿವೆ. ಇಷ್ಟು ತಂಡಗಳು ಫೀಲ್ಡ್‌ ಹಾಕಿ ಕೂಟದಲ್ಲಿ ಹಿಂದೆಂದೂ ಆಡಿರಲಿಲ್ಲ ಎಂದು ಸಂಘಟಕರು ಹೇಳಿದ್ದಾರೆ.

ಕೌಟುಂಬಿಕ ಹಾಕಿ ಕೂಟವಾಗಿರುವ ಕುಂಡ್ಯೋಳಂಡದಲ್ಲಿ ಒಟ್ಟು 4,834 ಆಟಗಾರರು ಪಾಲ್ಗೊಂಡಿದ್ದರು. ಈ ಎಲ್ಲ ಅಂಕಿಸಂಖ್ಯೆಗಳನ್ನು ಗಿನ್ನೆಸ್‌ ಅಧಿಕಾರಿಗಳು ಸ್ವಪ್ನಿಲ್‌ ನೇತೃತ್ವದಲ್ಲಿ ಪರಿಶೀಲನೆ ನಡೆಸಿದರು. ಹಲವಾರು ಮೂಲಗಳಿಂದ ಪರಿಶೀಲನೆ ನಡೆಸಿ, ದಾಖಲೆ ಸರಿ ಎಂದು ಖಚಿತವಾದ ಮೇಲೆ ಪ್ರಮಾಣಪತ್ರ ನೀಡಿದ್ದಾರೆ.

Advertisement

ಹಿನ್ನೆಲೆಯೇನು?
1997ರಲ್ಲಿ ಆರಂಭವಾದ ಕೊಡವ ಕಪ್‌ ಕೊಡಗಿನ ವಿವಿಧ ಕುಟುಂಬಗಳ ನಡುವೆ ನಡೆಯುತ್ತದೆ. ಈ ಭಾಗದಲ್ಲಿ ಹಾಕಿ ಅತ್ಯಂತ ಜನಪ್ರಿಯ ಕ್ರೀಡೆ. ಖ್ಯಾತನಾಮ ಹಾಕಿ ತಾರೆಯರು ಇಲ್ಲಿಂದ ಹುಟ್ಟಿಕೊಂಡಿದ್ದಾರೆ. ಪಂದಂಡ ಕುಟ್ಟಪ್ಪ ಮತ್ತು ಕಾಶಿ ಪೊನ್ನಪ್ಪ ಅವರೇ ಈ ಕೂಟ ಆರಂಭಿಸಲು ಕಾರಣರು.

Advertisement

Udayavani is now on Telegram. Click here to join our channel and stay updated with the latest news.

Next