Advertisement

ಶೌಚಾಲಯ ಕಾಮಗಾರಿ ವಿಳಂಬ: ಪ್ರಯಾಣಿಕರ ಪರದಾಟ

05:15 PM Nov 12, 2018 | Team Udayavani |

ಹರಿಹರ: ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಪುರುಷರ ಶೌಚಾಲಯ ದುರಸ್ತಿ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು,
ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.

Advertisement

200 ಚದುರಡಿ ವಿಸ್ತೀರ್ಣದ ಶೌಚಾಲಯಕ್ಕೆ ಟೈಲ್ಸ್‌ ಅಳವಡಿಸಲಾಗುತ್ತಿದ್ದು, 2 ದಿನಗಳಲ್ಲಿ ಮುಗಿಸಬಹುದಾದ ಕಾಮಗಾರಿ 10-12 ದಿನಗಳಾದರೂ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಪ್ರಯಾಣಿಕರ ಕ್ಷೇಮ, ಸುರಕ್ಷತೆಯೇ ತಮ್ಮ ಆದ್ಯತೆ ಎಂದು ಸಾರುವ ಸಾರಿಗೆ ಸಂಸ್ಥೆಗೆ ಮಾತ್ರ ಪ್ರಯಾಣಿಕರ ಗೋಳು ತಿಳಿಯುತ್ತಿಲ್ಲ.

ಅನಿವಾರ್ಯವಾಗಿ ಕೆಲ ಪ್ರಯಾಣಿಕರು ಆವರಣದ ಖಾಲಿ ಜಾಗ, ಕಾಂಪೌಂಡ್‌ ಆಸರೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಇಡೀ ನಿಲ್ದಾಣವು ಗಬ್ಬೆಂದು ನಾರುತ್ತಿದೆ. ಬಸ್‌ಗೆ ಕಾಯುವ, ಬಸ್‌ ನಿಂದ ಇಳಿಯುವ ಪ್ರಯಾಣಿಕರು ಮೂಗು ಮುಚ್ಚಿಕೊಳ್ಳದೆ ವಿಧಿಯಿಲ್ಲದಾಗಿದೆ.
 
ಕಾಮಗಾರಿ ವಿಳಂಬದ ಬಗ್ಗೆ ಪ್ರಶ್ನಿಸಿದರೆ ಸ್ಥಳೀಯ ಅಕಾರಗಳು ಯಾವುದೇ ಕಾರಣ ನೀಡುತ್ತಿಲ್ಲ. ಶೀಘ್ರ ಕಾಮಗಾರಿ ಮುಗಿಸುವುದಾಗಲಿ, ಅಲ್ಲಿವರೆಗೆ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆಯಾಗಲಿ ಯಾವುದೇ ಮುತುವರ್ಜಿ ವಹಿಸುತ್ತಿಲ್ಲ. ಡಿಪೋ ವ್ಯವಸ್ಥಾಪಕ ಮರುಳಸಿದ್ದಪ್ಪ, ಇಷ್ಟಕ್ಕೆಲ್ಲಾ ತಾತ್ಕಾಲಿಕ ವ್ಯವಸ್ಥೆ ಮಾಡಲಾಗದು. ಅಗತ್ಯವಿದ್ದವರು ಬಸ್‌ ನಿಲ್ದಾಣದ ಹೊರಗಿನ ಸಾರ್ವಜನಿಕ ಶೌಚಾಲಯ ಬಳಸಬಹುದು ಎನ್ನುತ್ತಾರೆ.
 
ಆದರೆ ನಿಲ್ದಾಣದ ಹೊರಗೆ ಶೌಚಾಲಯವಿರುವ ಬಗ್ಗೆ ಪರಸ್ಥಳದ ಪ್ರಯಾಣಿಕರಿಗೆ ಗೊತ್ತಿರುತ್ತಾ? ಕೇಳಿ ತಿಳಿದುಕೊಂಡರೂ ಹೊರಕ್ಕೆ ಹೋಗಿ ಬರುವವರೆಗೂ ಬಸ್‌ಗಳು ಕಾಯುತ್ತವೆಯಾ? ಎಂಬುದಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳೇ ಉತ್ತರಿಸಬೇಕು.

ಈ ಬಸ್‌ ನಿಲ್ದಾಣಕ್ಕೆ ನಿತ್ಯ 1500 ಬಸ್‌ ಗಳು ಬಂದು ಹೋಗುತ್ತಿದ್ದು, ಲಕ್ಷಾಂತರ ರೂ. ಆದಾಯ ಬರುತ್ತದೆ. ಆದರೆ ಸದ್ಯ ಸಹಸ್ರಾರು ಜನ ಶೌಚಾಲಯ ಸೌಕರ್ಯವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಶೌಚಾಲಯ ಕಾಮಗಾರಿ ಶೀಘ್ರ ಮುಗಿಸಿ ಜನರಿಗೆ ಅನುಕೂಲ ಮಾಡಿಕೊಡಲು ಸಂಸ್ಥೆ ಮುಂದಾಗಬೇಕಿದೆ. 

ರಾಯಚೂರು ಬಸ್‌ಗೆ ಅರ್ಧ ಗಂಟೆಯಿಂದ ಕಾಯುತ್ತಿದ್ದೇನೆ. ಆದರೆ ಮೂತ್ರದ ದುರ್ಗಂಧ ಕುಳಿತುಕೊಳ್ಳಲು ಬಿಡುತ್ತಿಲ್ಲ. ಸ್ವತ್ಛತೆ ಬಗ್ಗೆ ಜನ ಸಾಮಾನ್ಯರಿಗೆ ತಿಳಿವಳಿಕೆ ನೀಡುವ ಸರ್ಕಾರಿ ಅಧಿಕಾರಿಗಳು ತಮ್ಮ ಸಂಸ್ಥೆಯಿಂದಲೇ ಇಂತಹ ಲೋಪವಾಗುವುದನ್ನು ಮೊದಲು ತಡೆಯಬೇಕಲ್ಲವೆ?
 ವಸಂತಮ್ಮ, ಪ್ರಯಾಣಿಕರು.

Advertisement
Advertisement

Udayavani is now on Telegram. Click here to join our channel and stay updated with the latest news.

Next