Advertisement

ಶೌಚಾಲಯವಿಲ್ಲದೇ ಸಾರ್ವಜನಿಕರ ಪರದಾಟ

07:25 AM Feb 12, 2019 | Team Udayavani |

ಮಾಗಡಿ (ಕುದೂರು): ಮಾಗಡಿ ಪಟ್ಟಣದ ತಿರುಮಲೆ ರಸ್ತೆಯಲ್ಲಿರುವ ಸರ್ಕಾರಿ ಕಚೇರಿಗಳು ಇರುವ ಕಟ್ಟಡ ಸಂಕೀರ್ಣದಲ್ಲಿ ಸಮರ್ಪಕ ಶೌಚಾಲಯವಿಲ್ಲದೇ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಶೌಚಾಲಯವಿದ್ದರೂ ಪ್ರಯೋಜನವಿಲ್ಲ: ಸುಮಾರು 8 ವರ್ಷಗಳ ಹಿಂದೆ ಮಾಗಡಿ ಪಟ್ಟಣದ ತಿರುಮಲೆ ರಸ್ತೆಯಲ್ಲಿ ಸರ್ಕಾರಿ ಸಂಕೀರ್ಣಕ್ಕೆ ಚಾಲನೆ ನೀಡಲಾಗಿತ್ತು. ಈ ಸಂಕೀರ್ಣದಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಯಮದ ಇಲಾಖೆ, ಮೀನುಗಾರಿಕೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಬೆಸ್ಕಾಂ ಕಾರ್ಯಪಾಲಕ ಅಭಿಯಂತರ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಬಹಳ ವರ್ಷಗಳಿಂದ ಈ ಸಂಕೀರ್ಣವನ್ನು ಲೋಕೋಪಯೋಗ ಇಲಾಖೆ ಸಹ ನಿರ್ವಹಿಸುತ್ತಿತ್ತು.

ಕೆಲವು ತಿಂಗಳ ಹಿಂದೆ ಈ ಕಟ್ಟಡವನ್ನು ತಾಲೂಕು ಪಂಚಾಯ್ತಿಗೆ ಹಸ್ತಾಂತರಿಸಲಾಯಿತು. ಇಲ್ಲಿ ಸಮರ್ಪಕ ನೀರಿಗಾಗಿ ಕೊಳವೆ ಬಾವಿಯನ್ನು ಕೊರೆಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನೀರನ್ನು ಪೂರೈಸಲಾಗುತ್ತಿದೆ. ಸಂಕೀರ್ಣದ ಪ್ರತಿಯೊಂದು ಮಹಡಿಯಲ್ಲಿ ಒಂದೊಂದು ಶೌಚಾಲಯವಿದೆ. ಆದರೆ, ನೀರಿನ ಕೊರತೆ ಇದೆ ಎಂಬ ನೆಪವೊಡ್ಡಿ ಶೌಚಾಲಯಗಳಿಗೆ ಬೀಗ ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬಯಲಲ್ಲೇ ಮೂತ್ರ ವಿಸರ್ಜನೆ: ಸರ್ಕಾರಿ ಕಚೇರಿಗಳ ಸಂಕೀರ್ಣ ಕಟ್ಟಡದಲ್ಲಿ ಸುಮಾರು 6ಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳಿರುವುದರಿಂದ ಪ್ರತಿನಿತ್ಯ ವಿವಿಧ ಕೆಲಸಕ್ಕಾಗಿ ನೂರಾರು ಸಾರ್ವಜನಿಕರು ಬರುತ್ತಾರೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳು ಸಕಾಲಕ್ಕೆ ಪೂರ್ಣವಾಗುವುದಿಲ್ಲ. ಜನರ ಸಣ್ಣ ಪುಟ್ಟ ಕೆಲಸ- ಕಾರ್ಯಕ್ಕೂ ದಿನ ಪ್ರತಿ ಕಾಯಲೇಬೇಕಾದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಜನರು ಶೌಚಾಲಯಕ್ಕೆ ಹೋಗಲು ಜಾಗವಿಲ್ಲದೇ ಕಚೇರಿ ಆವರಣದ ಬಯಲಲ್ಲೇ ಮೂತ್ರ ವಿಸರ್ಜನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದೇ ಕಟ್ಟಡದಲ್ಲಿ ಇರುವುದರಿಂದ ಮಕ್ಕಳೊಂದಿಗೆ ಮಹಿಳೆಯರೂ ಹೆಚ್ಚಾಗಿ ಬರುತ್ತಾರೆ. ಶೌಚಾಲಯ ವ್ಯವಸ್ಥೆ ಇಲ್ಲದೇ ನರಕಯಾತನೆ ಅನುಭವಿಸುತ್ತಿದ್ದಾರೆ. ಹೀಗಾಗಿ ಜನ ಸಾಮಾನ್ಯರಿಗೆ ಸೌಲಭ್ಯ ಕಲ್ಪಿಸಿಗೊಡಬೇಕು. ಶೌಚಾಲಯವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಸ್ಥಗಿತಗೊಂಡ ಶೌಚಾಲಯವನ್ನು ಪ್ರಾರಂಭಿಸಿ ನೀರಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಸ್ವಚ್ಛತೆ ಮಾಡಲು ನೌಕರರನ್ನು ನೇಮಿಸಿಲ್ಲ: ಸಾರ್ವಜನಿಕರು ಶೌಚಾಲಯದಲ್ಲಿ ಮಲಮೂತ್ರ ಮಾಡಿ ಹೋಗುತ್ತಾರೆ. ಸ್ವಚ್ಛತೆ ಮಾಡಲು ಡಿ ಗ್ರೂಪ್‌ ನೌಕರರ ನೇಮಕ ಮಾಡಿಲ್ಲ. ಸ್ವಚ್ಛತೆ ಮಾಡಲು ನೌಕರರ ಕೊರತೆ ಇದೆ. ಇದಕ್ಕಾಗಿಯೇ ಶೌಚಾಲಯಗಳಿಗೆ ಬೀಗ ಹಾಕಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

* ಕೆ.ಎಸ್‌.ಮಂಜುನಾಥ್‌ ಕುದೂರು

Advertisement

Udayavani is now on Telegram. Click here to join our channel and stay updated with the latest news.

Next