ಬಳ್ಳಾರಿ: ಶಿಕ್ಷಕರು ಎಂದಾಕ್ಷಣ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಪಾಠ ಮಾಡುವುದಷ್ಟೇ ಅವರಕೆಲಸ ಎಂಬುದು ಹಲವರ ಭಾವನೆ. ಆದರೆ ಇಲ್ಲೊಬ್ಬ ಶಿಕ್ಷಕ ವಿದ್ಯಾರ್ಥಿನಿಯರ ಮೂಲಸೌಕರ್ಯವನ್ನು ಅರಿತು, ಅವರಿಗೆ ತಮ್ಮ ಸ್ವಂತ ಖರ್ಚಿನಲ್ಲೇ ಶೌಚಾಲಯವನ್ನು ನಿರ್ಮಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಸಂಜೀವರಾಯನಕೋಟೆ ಗ್ರಾಮದ ಸರ್ಕಾರಿ ಪ್ರಾಥಮಿಕ ಹಿರಿಯ ಶಾಲೆ ಶಿಕ್ಷಕ ರವಿಚೇಳ್ಳಗುರ್ಕಿ, ಶೌಚಾಲಯ ಕೊರತೆ ಎದುರಿಸುತ್ತಿದ್ದ ವಿದ್ಯಾರ್ಥಿನಿಯರಿಗೆ ತಮ್ಮ ಸ್ವಂತ ಹಣದಲ್ಲೇ ಶೌಚಾಲಯವನ್ನು ನಿರ್ಮಿಸಿ ಅದಕ್ಕೆ ಬಾಗಿಲು ವ್ಯವಸ್ಥೆ ಮಾಡಿಕೊಟ್ಟಿರುವುದು ಗಮನಾರ್ಹ. ಶಾಲೆ ಆವರಣದಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಿಸಿದ್ದ ಶೌಚಾಲಯ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಬಾಗಿಲು
ಸಹ ಮುರಿದು ಬಿದ್ದಿದೆ. ಇದನ್ನು ಮನಗಂಡ ಶಾಲೆ ಶಿಕ್ಷಕ, ಕ್ರಿಯಾಶೀಲ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ ರವಿಚೇಳ್ಳಗುರ್ಕಿಯವರು,10 ಸಾವಿರ ರೂ. ವೆಚ್ಚದಲ್ಲಿ ಕಟ್ಟಡ ದುರಸ್ತಿಗೊಳಿಸಿ,ಕಬ್ಬಿಣದಬಾಗಿಲನ್ನು ನಿರ್ಮಿಸಿ ಅಳವಡಿಸಿ, ಬಣ್ಣ ಬಳಿದು ವಿದ್ಯಾರ್ಥಿನಿಯರ ಬಳಕೆಗೆ ನೀಡಿದ್ದಾರೆ. ಮೇಲಾಗಿ ಈ ಶೌಚಾಲಯವನ್ನು ಶಾಲೆ ವಿದ್ಯಾರ್ಥಿನಿಯರಿಂದಲೇ ಉದ್ಘಾಟನೆಗೊಳಿಸಿದ್ದಾರೆ.
ಇದನ್ನೂ ಓದಿ:ನಟಿ ನುಸ್ರತ್ ಮಗುವಿನ ತಂದೆ ಯಾರು ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ
ಶಾಲೆಯ ಬಗ್ಗೆ ತುಂಬ ಅಭಿಮಾನ ಹೊಂದಿರುವ ರವಿಚೇಳ್ಳಗುರ್ಕಿಯವರು, ಶಾಲೆ ಆವರಣದಲ್ಲಿ ಹಸಿರೀಕರಣಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ.
ಹಲವಾರು ಗಿಡಗಳನ್ನು ಬೆಳೆಸುವ ಮೂಲಕ ಶಾಲೆಯ ಸೌಂದರ್ಯವನ್ನು ಹೆಚ್ಚಿಸಿದ್ದಾರೆ.ಈಹಿಂದೆಯೂ ಶಾಲಾ ಕೊಠಡಿಗಳು ಶಿಥಿಲವಾದಾಗಲೂ 30 ಸಾವಿರ ರೂ. ಖರ್ಚು ಮಾಡಿ ದುರಸ್ತಿಗೊಳಿಸಿದ್ದಾರೆ.
ಶಾಲಾ ಆವರಣದಲ್ಲಿ ನಾಟಿ ಮಾಡಿದ್ದ ಗಿಡಗಳನ್ನು ರಕ್ಷಿಸಲು 20 ಸಾವಿರ ರೂ. ವೆಚ್ಚದಲ್ಲಿ ಕಬ್ಬಿಣದ ರಕ್ಷಾ ಕವಚಗಳನ್ನು ಅಳವಡಿಸಿದ್ದಾರೆ. ಶಾಲೆಯಲ್ಲಿನ ಇವರ ಅಭಿವೃದ್ಧಿ ಕಾರ್ಯವನ್ನು ಮನಗಂಡ ಸಾರ್ವಜನಿಕ ಶಿಕ್ಷಣ ಇಲಾಖೆ 2016ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಈ ವೇಳೆ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ದೊಡ್ಡ ಕುಮಾರ, ಹಿರಿಯ ಬಡ್ತಿ ಮುಖ್ಯಗುರು ಕೃಷ್ಣ ವೇಣಿ, ಶಿಕ್ಷಕರಾದ ಮುನಾವರ ಸುಲ್ತಾನ, ಮೋದಿನ್ ಸಾಬ್, ಚನ್ನಮ್ಮ, ಸುಧಾ, ವೈಶಾಲಿ, ಶ್ವೇತ, ಉಮ್ಮೇಹಾನಿ, ಶಶಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಪದ್ಮಾವತಿ, ಶ್ರೀದೇವಿ, ಯಶೋಧ, ಸುಶೀಲಾ ಇತರರು ಇದ್ದರು.