Advertisement

ಶೌಚಾಲಯವೇ ಕಿಚನ್‌, ಬೆಡ್‌ ರೂಂ

01:05 AM Sep 12, 2019 | Lakshmi GovindaRaju |

ಬೆಂಗಳೂರು: “ಸಾರ್ವಜನಿಕರು ಹಣ ಪಾವತಿಸಿ ಉಪಯೋಗಿಸುವ ಶೌಚಾಲಯಗಳಲ್ಲಿ ಶುಚಿತ್ವದ ಕೊರತೆ ಹಾಗೂ ಅವ್ಯವಸ್ಥೆ. ಶೌಚಾಲಯದಲ್ಲೇ ಕಿಚನ್‌, ಬೆಡ್‌ ರೂಂ, ವಾಸ್ತವ್ಯ’. ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್‌ ಹಿರೇಮನಿ ಅವರು ಬುಧವಾರ ನಗರದ ಶೌಚಾಲಯಗಳ ತಪಾಸಣೆ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳಿವು.

Advertisement

ಗಾಂಧಿನಗರ, ಮಲ್ಲೇಶ್ವರ ಹಾಗೂ ರಾಜಾಜಿನಗರ ಸೇರಿದಂತೆ ಆರು ಕಡೆ ಸಾರ್ವಜನಿಕರು ಹಣ ಪಾವತಿಸಿ ಉಪಯೋಗಿಸುವ ಶೌಚಾಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಅಲ್ಲಿನ ಅವ್ಯವಸ್ಥೆ ಕಂಡು ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸೂಕ್ತ ದಾಖಲೆ ಇಲ್ಲದ ಹಾಗೂ ಅವ್ಯವಸ್ಥೆಯಿಂದ ಕೂಡಿದ್ದ ಮಂತ್ರಿ ಮಾಲ್‌ ಸಮೀಪದ ಸಾರ್ವಜನಿಕ ಶೌಚಾಲಯ, ಮಲ್ಲೇಶ್ವರ ಮೈದಾನ ಹಾಗೂ ಪ್ರಕಾಶ ನಗರದ ಗಾಯಿತ್ರಿದೇವಿ ಉದ್ಯಾನವನದ ಸಾರ್ವಜನಿಕ ಶೌಚಾಲಯಗಳಿಗೆ ಬೀಗ ಹಾಕಿಸಿದರು.

ಹಲವು ಶೌಚಾಲಯಗಳಲ್ಲಿ ಶುಚಿತ್ವ ಇಲ್ಲದಿರುವುದು ಹಾಗೂ ದರ ಪಟ್ಟಿಯನ್ನು ನಿಗದಿ ಮಾಡದೆ ಇರುವ ಬಗ್ಗೆ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಕರ್ತವ್ಯ ಲೋಪದ ಆರೋಪದ ಮೇಲೆ ಈ ಭಾಗದ ಎಂಜಿನಿಯರ್‌ಗಳಿಗೆ ನೋಟಿಸ್‌ ನೀಡಲು ಸೂಚನೆ ನೀಡಿದರು.

ಕೊಳ್ಳೆ ಹೊಡೆಯಲು ಬಿಟ್ಟಿದ್ದಿರೇನ್ರಿ: ಹಲವು ಶೌಚಾಲಯಗಳನ್ನು ಉಪಗುತ್ತಿಗೆ ನೀಡಿರುವುದು ಹಾಗೂ ಟೆಂಡರ್‌ ಕರೆಯದೆ ನಿರ್ವಹಣೆ ಮಾಡಲು ಮುಂದುವರಿಸಿರುವುದನ್ನು ಗಮನಿಸಿದ ಅವರು, ಬಿಬಿಎಂಪಿ ಅಧಿಕಾರಿಗಳಿಗೆ ಛೀಮಾರಿ ಹಾಕಿದರು.

Advertisement

ಯಾವುದೇ ದಾಖಲೆ ಇಲ್ಲದವರಿಗೆ ಕೊಳ್ಳೆ ಹೊಡೆಯಲು ಬಿಟ್ಟಿದ್ದಿರಾ? ಎಂದು ಪ್ರಶ್ನಿಸಿದರು. ಸಾರ್ವಜನಿಕರಿಂದ ಹೆಚ್ಚು ಹಣ ಪಡೆಯುತ್ತಿದ್ದ ಗುತ್ತಿಗೆದಾರರನ್ನೂ ತರಾಟೆಗೆ ತೆಗೆದುಕೊಂಡ ಅವರು ನಿಮಗೆ ತೋಚಿದಷ್ಟು ಹಣ ಪಡೆಯಲು ಅನುಮತಿ ಕೊಟ್ಟವರ್ಯಾರು ಎಂದು ಗರಂ ಆದರು.

ಬಹುತೇಕ ಶೌಚಾಲಯಗಳ ನಿರ್ವಹಣೆಯನ್ನು ಉತ್ತರ ಭಾರತೀಯರಿಗೆ ನೀಡಿರುವುದನ್ನು ಇದೇ ಸಂದರ್ಭದಲ್ಲಿ ಗಮನಿಸಿದ ಜಗದೀಶ್‌ ಹಿರೇಮನಿ, ಶೌಚಾಲಯಗಳ ನಿರ್ವಹಣೆಯನ್ನು ಸಫಾಯಿ ಕರ್ಮಚಾರಿಗಳಿಗೆ ನೀಡಬೇಕು ಎಂಬ ನಿಯಮವಿದೆ. ಆದರೆ, ಈ ನಿಯಮ ಪಾಲನೆಯಾಗುತ್ತಿಲ್ಲ. ಈ ಕುರಿತು ಮೇಯರ್‌ ಜತೆ ಚರ್ಚಿಸುತ್ತೇನೆ ಎಂದು ಹೇಳಿದರು.

“ಬಿಬಿಎಂಪಿ ವ್ಯಾಪ್ತಿಯಲ್ಲಿ 530 ಪಾಲಿಕೆ ಹಾಗೂ 150 ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ(ಪಿಪಿಪಿ) ಸೇರಿ ಒಟ್ಟು 680 ಸುಲಭ ಶೌಚಾಲಯಗಳಿವೆ’ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದರು. ತಪಾಸಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್‌ ಹಿರೇಮನಿ, ನಗರದಲ್ಲಿ ಬಿಬಿಎಂಪಿ ಮತ್ತು ಖಾಸಗಿ ಸಂಸ್ಥೆ ನಿರ್ವಹಣೆ ಮಾಡುವ ಎರಡು ರೀತಿಯ ಶೌಚಾಲಯಗಳಿವೆ.

ಹಲವು ಲೋಪಗಳಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಶೌಚಾಲಯ ನಿರ್ವಹಣೆ ಮಾಡುವವರು, ಬಿಬಿಎಂಪಿ ಆಯುಕ್ತರ ಜತೆ ಗುರುವಾರ ಸಭೆ ನಡೆಸಲಾಗುವುದು ಎಂದು ಹೇಳಿದರು. ಬಿಬಿಎಂಪಿಯ ಅಧಿಕಾರಿಗಳು ಹೇಳುವಂತೆ ಅಂದಾಜು 800 ಶೌಚಾಲಯಗಳಿವೆ. ಅದರ ಜತೆಗೆ ಅನಧಿಕೃತವಾಗಿ 700 ಶೌಚಾಲಯ ನಿರ್ಮಿಸಲಾಗಿದೆ.

ಯಾವುದೇ ಶೌಚಾಲಯಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುತ್ತಿಲ್ಲ. ಸಾರ್ವಜನಿಕರಿಂದ ಹಣ ವಸೂಲಿ ಮಾಡುವುದರ ಜತೆಗೆ ಪಾಲಿಕೆಯು ಸಹ ಪ್ರತಿ ಶೌಚಾಲಯದ ನಿರ್ವಹಣೆಗೆ ವಾರ್ಷಿಕ 50 ಸಾವಿರ ರೂ. ನೀಡುತ್ತಿದೆ. ಈ ಅವ್ಯವಸ್ಥೆಯನ್ನು ಕೂಡಲೇ ಸರಿ ಪಡಿಸಬೇಕಿದೆ ಎಂದು ತಿಳಿಸಿದರು.

ಟಾಯ್ಲೆಟ್ಟಲ್ಲೇ ಅಡುಗೆ, ವಾಸ್ತವ್ಯ: ಜಗದೀಶ್‌ ಹಿರೇಮನಿ ಅವರು ಬುಧವಾರ ನಗರದ ಶೌಚಾಲಯಗಳ ಸ್ವತ್ಛತೆ ಪರಿಶೀಲನೆ ನಡೆಸುವಾಗ ಶೌಚಾಲಯಗಳಲ್ಲಿನ ಹಲವು ಅಕ್ರಮಗಳು ಬೆಳಕಿಗೆ ಬಂದಿವೆ. ಪ್ರಕಾಶನಗರದ ಗಾಯಿತ್ರಿ ಉದ್ಯಾನದ ಸಾರ್ವಜನಿಕ ಶೌಚಾಲಯದಲ್ಲೇ ಗ್ಯಾಸ್‌ ಸಿಲಿಂಡರ್‌ ತರಿಸಿಕೊಂಡು ಅಡುಗೆ ಮಾಡುವುದನ್ನು ಕಂಡ ಅವರು ಗರಂ ಆದರು. “ಇಲ್ಲಿ ಅಡುಗೆ ಮಾಡಲು ನಿಮಗೆ ಅವಕಾಶ ನೀಡಿದ್ದು ಯಾರು? ಯಾವ ಶೌಚಾಲಯದಲ್ಲೂ ಸುರಕ್ಷತಾ ಸಾಧನಗಳಿಲ್ಲ. ನಿಮ್ಮನ್ನು ಪ್ರಶ್ನೆ ಮಾಡುವವರೇ ಇಲ್ಲದಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರು ಬುಧವಾರ ಸಾರ್ವಜನಿಕ ಶೌಚಾಲಯಗಳಿಗೆ ಭೇಟಿ ನೀಡಿದ್ದು, ಆಯೋಗ ನೀಡುವ ವರದಿಯನ್ನು ನೋಡಿಕೊಂಡು ಪ್ರತಿಕ್ರಿಯೆ ನೀಡುತ್ತೇನೆ.
ರಂದೀಪ್‌.ಡಿ, ವಿಶೇಷ ಆಯುಕ್ತ (ಘನತ್ಯಾಜ್ಯ)

Advertisement

Udayavani is now on Telegram. Click here to join our channel and stay updated with the latest news.

Next