Advertisement

ಗ್ರಾಪಂಗಳಲ್ಲಿ ಶೌಚಾಲಯ ಕಡ್ಡಾಯ

02:11 PM Jul 29, 2018 | Team Udayavani |

ಬೀದರ: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಕಡ್ಡಾಯವಾಗಿ ಶೌಚಾಲಯಗಳು ಇರಬೇಕು. ಶೌಚಾಲಯ ಹೊಂದಿರದ ಪಂಚಾಯಿತಿ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಮಧ್ಯಾಹ್ನ ಬಿಸಿಯೂಟ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಸಂಬಳವನ್ನು ಶೌಚಾಲಯ ನಿರ್ಮಿಸಿಕೊಳ್ಳುವವರೆಗೆ ತಡೆ ಹಿಡಿಯಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಆರ್‌.ಸೆಲ್ವಮಣಿ ಎಚ್ಚರಿಸಿದರು.

Advertisement

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಸ್ವತ್ಛ ಭಾರತ ಮಿಷನ್‌ ಗ್ರಾಮೀಣ ಕಾರ್ಯಕ್ರಮದಡಿ ಸ್ವತ್ಛ ಸರ್ವೇಕ್ಷಣ ಗ್ರಾಮೀಣ-2018ರ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವು ಗ್ರಾಮ ಪಂಚಾಯತ್‌ ಸದಸ್ಯರು ಮತ್ತು ಶಾಲೆಗಳ ಎಸ್‌ಡಿಎಂಸಿ ಸದಸ್ಯರು ಈವರೆಗೆ ತಮ್ಮ ಮನೆಗಳಲ್ಲಿ ಶೌಚಾಲಯ ಕಟ್ಟಿಸಿಕೊಂಡಿಲ್ಲ ಎನ್ನುವ ದೂರುಗಳಿವೆ. ಅಂಥವರಿಗೆ ಕೂಡಲೇ ನೋಟಿಸ್‌ ಜಾರಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಕಾರ್ಯ ಚುರುಕುಗೊಳಿಸಿ ನಿಗದಿತ ಗುರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ತಾಪಂ ಇಒ ಹಾಗೂ ಪಿಡಿಒಗಳಿಗೆ ಸೂಚಿಸಿದರು.

ಈ ಕಾರ್ಯಕ್ರಮದಡಿ ಕೇಂದ್ರ ತಂಡವು ಗ್ರಾಮೀಣ ಭಾಗಗಳಲ್ಲಿ ಆಗಸ್ಟ್‌ 1ರಿಂದ 30ರ ವರೆಗೆ ಸಮೀಕ್ಷೆ ನಡೆಸಲಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯ, ಸ್ವತ್ಛತೆ ಮತ್ತು ಉತ್ತಮ ಪರಿಸರವನ್ನು ಗಣನೆಗೆ ತೆಗೆದುಕೊಂಡು ಗ್ರಾಮ, ತಾಲೂಕು ಮತ್ತು ಜಿಲ್ಲೆಗಳಿಗೆ ರ್‍ಯಾಂಕಿಂಗ್‌ ನೀಡಲಾಗುತ್ತದೆ.

ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿರುವ ಎಲ್ಲ ಶಾಲೆಗಳು, ಅಂಗನವಾಡಿ ಕಟ್ಟಡಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮುಖ್ಯ ಬೀದಿಗಳಲ್ಲಿ ಸ್ವತ್ಛತೆ ಮತ್ತು ಶುಚಿತ್ವ ಕಾಪಾಡಬೇಕು. ಅಲ್ಲದೇ ಧಾರ್ಮಿಕ ಸ್ಥಳಗಳಲ್ಲಿರುವ ಶೌಚಾಲಯಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

Advertisement

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶೌಚಾಲಯಗಳನ್ನು ನಿರ್ಮಿಸುವುದಷ್ಟೇ ಅಲ್ಲದೇ ಅವುಗಳನ್ನು ಬಳಕೆ ಮಾಡಲಾಗುತ್ತಿದೆಯೇ ಎನ್ನುವುದನ್ನು ಪರಿಶೀಲಿಸಿ, ಶೌಚಾಲಯದಲ್ಲಿ ಶುಚಿತ್ವ ಕಾಪಾಡುವಂತೆ ಜಾಗೃತಿ ಮೂಡಿಸಬೇಕು. ಜನರು ತಮ್ಮ ಮನೆಗಳ ಸುತ್ತಮುತ್ತಲು ನೀರು ನಿಲ್ಲಿಸದಂತೆ ತಿಳಿಹೇಳಬೇಕು. ಕಸ ವಿಲೇವಾರಿ ಸೂಕ್ತವಾಗಿ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಅಲ್ಲದೇ ಗ್ರಾಮದ ಎಲ್ಲಿಯೂ ಚರಂಡಿ ನೀರು ನಿಲ್ಲದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು.
 
ಡಾ| ಗೌತಮ ಅರಳಿ ಮಾತನಾಡಿ, ಸ್ವತ್ಛ ಭಾರತ ಮಿಷನ್‌ ಯೋಜನೆಯಡಿ ಅಕ್ಟೋಬರ್‌ 2ರಂದು ರಾಷ್ಟ್ರಮಟ್ಟದಲ್ಲಿ ಉತ್ತಮ ಗ್ರಾಮ ಪ್ರಶಸ್ತಿ ನೀಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲೂ ಉತ್ತಮ ಗ್ರಾಮ, ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಪ್ರಶಸ್ತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸ್ವತ್ಛತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ವತ್ಛತಾ ರಥಗಳನ್ನು ಸಿದ್ಧಪಡಿಸಿ ಗ್ರಾಮೀಣ ಭಾಗಗಳಲ್ಲಿ ಪ್ರಚಾರ ಮಾಡಲಾಗುತ್ತದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಶೌಚಾಲಯಗಳನ್ನು ಕಟ್ಟಿಸಿಕೊಳ್ಳಲು ಮುಂದೆ ಬರುವಂತೆ ಮನವೊಲಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಿಶೋರ ದುಬೆ, ಡಿಆರ್‌ಡಿಎ ಯೋಜನಾ ನಿರ್ದೇಶಕ ರಾಮಕೃಷ್ಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಐ.ಎಸ್‌. ಪಾಂಚಾಳ್‌, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಉಮೇಶ ಎಸ್‌.ಶಿರಹಟ್ಟಿಮಠ ಮಾತನಾಡಿದರು. ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next