ಬಸವಕಲ್ಯಾಣ: ಸ್ವತ್ಛ ಪರಿಸರ ನಿರ್ಮಾಣದಲ್ಲಿ ಶೌಚಾಲಯದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಪ್ರತಿ ಮನೆ, ಮನೆಯಲ್ಲೂ ಶೌಚಾಲಯ ನಿರ್ಮಿಸಿಕೊಳ್ಳುವ ಜತೆಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ| ಮಹಾದೇವ ಸಲಹೆ ನೀಡಿದರು.
ಕಿಟ್ಟಾ ಗ್ರಾಮದಲ್ಲಿ ಗ್ರಾಮ ವಿಕಾಸ ಸಮಿತಿಯಿಂದ ಆಯೋಜಿಸಲಾಗಿದ್ದ ಮನೆಗೊಂದು ಶೌಚಾಲಯ ಹಾಗೂ ಶಾಂತಿ ಮತ್ತು ಸುವ್ಯವಸ್ಥೆ ಮೂಡಿಸಲು ಜನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಆರೋಗ್ಯಕ್ಕೆ ಸ್ವತ್ಛತೆ ಅವಶ್ಯವಾಗಿದೆ ಎಂದರು.
ಅಸ್ವತ್ಛ ಪರಿಸರದಿಂದ ಹರಡುವ ಸಾಂಕ್ರಾಮಿಕ ರೋಗಗಳ ತಡೆಗೆ ಎಲ್ಲೆಡೆ ಸcತ್ಛತೆ ಅಗತ್ಯವಾಗಿದೆ. ಗ್ರಾಮದಲ್ಲಿ ಶೌಚಾಲಯ ಇಲ್ಲದ ಪ್ರತಿಯೊಬ್ಬರು ಶೌಚಾಲಯ ನಿರ್ಮಿಸಿಕೊಂಡು ಸ್ವತ್ಛ-ಸುಂದರ ಗ್ರಾಮವನ್ನಾಗಿಸಲು ಕೈ ಜೋಡಿಸಬೇಕು ಎಂದು ಹೇಳಿದರು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಸೆಲ್ವಮಣಿ ಆರ್. ಮಾತನಾಡಿ, ಸ್ವತ್ಛ ಭಾರತ ಮಿಷನ್ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಅಗತ್ಯ ಅನುದಾನ ಕಲ್ಪಿಸಲಾಗುತ್ತಿದ್ದು.
ಹಣಕಾಸಿನ ಕೊರತೆ ಇದ್ದರೆ ತಮ್ಮ ಗಮನಕ್ಕೆ ತರಬೇಕು. ಯಾವುದೇ ಸಮಸ್ಯೆ ಮತ್ತು ದೂರುಗಳು ಇದ್ದರೆ ತಮ್ಮ ಗಮನಕ್ಕೆ ತಂದರೆ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು. ಡಿಸೆಂಬರ್ ಅಂತ್ಯದ ವರೆಗೆ ಕಿಟ್ಟಾ ಗ್ರಾಪಂ ಬಯಲು ಬಹಿರ್ದೆಸೆ ಮುಕ್ತ ಗ್ರಾಪಂ ಎಂದು ಘೋಷಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ ಮಾತನಾಡಿ, ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಗ್ರಾಮಸ್ಥರ ಸಹಕಾರ ಮಹತ್ವದ್ದು. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಈ ಹಿಂದೆ ದೂರು ಬಂದಿದ್ದು, ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಅನಧಿಕೃತ ಮದ್ಯ ಮಾರಾಟ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ| ಗೌತಮ ಅರಳಿ ಮಾತನಾಡಿದರು. ವಿಕಾಸ ಸಮಿತಿ ಗೌರವಾಧ್ಯಕ್ಷ ಸೂರ್ಯಕಾಂತರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ ಜಗನ್ನಾಥ ರೆಡ್ಡಿ, ತಾಪಂ ಇಒ ವಿಜಯಕುಮಾರ ಮಡ್ಡೆ
ಉಪಸ್ಥಿತರಿದ್ದರು.
ಪಿಎಸ್‌ಐ ಹುದ್ದೆಗೆ ನೇಮಕವಾಗಿರುವ ರೋಹಿಣಿ ನಸಕಂಠೆ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ವಿಕಾಸ ಸಮಿತಿ ಅಧ್ಯಕ್ಷ ಸಂಜೀವರೆಡ್ಡಿ ಕುದಗೆ ಸ್ವಾಗತಿಸಿದರು. ಗ್ರಾಪಂ ಸದಸ್ಯ ಮಲ್ಲರೆಡ್ಡಿ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಡಾ| ಅನುಷಾ ಗೋವಿಂದರೆಡ್ಡಿ ಪಾಟೀಲ ನಿರೂಪಿಸಿದರು. ಜಗಮೋಹನ ಮೇತ್ರೆ, ಗುರುನಾಥರೆಡ್ಡಿ ಕುದಗೆ, ಶೇಖ ಫತ್ರುಸಾಬ, ವಿರಶೇಟ್ಟಿ ಪಾಟೀಲ್, ಬಸರೆಡ್ಡಿ ಪಾಟೀಲ ವಿಕಾಸ ಸಮಿತಿ ಸದಸ್ಯರು, ಗ್ರಾಮದ ಗಣ್ಯರು ಹಾಜರಿದ್ದರು.