Advertisement

ಎಲ್ಲಾ ಹಳ್ಳಿ ಮನೆಯಲ್ಲಿವೆಯಂತೆ ಶೌಚಾಲಯ!

01:41 PM Dec 23, 2017 | Team Udayavani |

ದಾವಣಗೆರೆ: ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ಗ್ರಾಮೀಣ ಭಾಗಗಳೀಗ ಬಯಲು ಶೌಚಮುಕ್ತ ಎಂಬುದಾಗಿ ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ. 2012ರ ಸಮೀಕ್ಷೆ ಅನ್ವಯ ಗ್ರಾಮೀಣ ಭಾಗದಲ್ಲಿದ್ದ ಶೌಚಾಲಯರಹಿತ ಮನೆಗಳೆಲ್ಲಾ ಇದೀಗ ಶೌಚಾಲಯ ಹೊಂದಿವೆ.

Advertisement

ಈ ಕುರಿತು ಶುಕ್ರವಾರ ಜಿಪಂ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌. ಅಶ್ವತಿ, ನವೆಂಬರ್‌ ನ.19ರಂದು ಕೇಂದ್ರ ಸರ್ಕಾರ ನಮ್ಮ ಜಿಲ್ಲೆಯನ್ನು ಬಯಲು ಶೌಚಮುಕ್ತ ಎಂದು ಘೋಷಿಸಿದೆ. ಜಿಲ್ಲೆಯಲ್ಲಿನ 2,60,047 ಮನೆಗಳೀಗ
ಶೌಚಾಲಯ ಹೊಂದಿವೆ. 2012ರಲ್ಲಿ ನಡೆಸಿದ ಸಮೀಕ್ಷೆ ಸಂದರ್ಭದಲ್ಲಿದ್ದ ಎಲ್ಲಾ ಮನೆಗಳು ಇದೀಗ ಶೌಚಾಲಯ ಹೊಂದಿವೆ. 2017ರ ಅಕ್ಟೋಬರ್‌ 2ರ ವೇಳೆಗೆ ದಾವಣಗೆರೆ, ಹರಿಹರ, ಹೊನ್ನಾಳಿ, ಚನ್ನಗಿರಿ ತಾಲ್ಲೂಕುಗಳ ಎಲ್ಲಾ ಮನೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿತ್ತು. ಪ್ರಸ್ತುತ ಜಿಲ್ಲೆಯ 233 ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದರು.

ಈ ವರ್ಷವೇ ಅಧಿಕ ಶೌಚಾಲಯ ನಿರ್ಮಿಸಲಾಗಿದೆ. 2017ರ ಏಪ್ರಿಲ್‌ ತಿಂಗಳಿನಿಂದ ಈವರೆಗೆ 89,262 ಶೌಚಾಲಯ ನಿರ್ಮಿಸಲಾಗಿದೆ. 2013-14ರಿಂದ ಈವರೆಗೆ ಒಂದೇ ವರ್ಷದಲ್ಲಿ ಅತಿ ಹೆಚ್ಚು ಶೌಚಾಲಯ ಕಟ್ಟಿದ ದಾಖಲೆ ಇದಾಗಿದೆ. 2103-14ರಲ್ಲಿ 24,572, 2014-15ರಲ್ಲಿ 22,665, 2015-16ರಲ್ಲಿ 10,727 ಶೌಚಾಲಯ ನಿರ್ಮಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದರು. ಈ ವರ್ಷ ನಾವು ತಂಡಗಳಾಗಿ ಗ್ರಾಮೀಣ
ಭಾಗಕ್ಕೆ ಭೇಟಿ ನೀಡಿದಾಗ ಅತ್ಯುತ್ತಮ ಸ್ಪಂದನೆ ದೊರೆಯಿತು. ಗ್ರಾಮ ಪಂಚಾಯತ್‌ ಸದಸ್ಯರು, ಅಧಿಕಾರಿಗಳು ನಮ್ಮ ಕಾರ್ಯಕ್ಕೆ ಬೆನ್ನೆಲುಬಾಗಿ 
ನಿಂತರು. ಜನರೂ ಸಹ ಮುಂದೆ ಬಂದು ಶೌಚಾಲಯ ನಿರ್ಮಿಸಿಕೊಂಡರು. ಶೌಚಾಲಯ ನಿರ್ಮಾಣಕ್ಕೆ ಒತ್ತುಕೊಡುವ ಉದ್ದೇಶದಿಂದ ಹಲವು
ಕಾರ್ಯಕ್ರಮಗಳನ್ನು ನಾವು ಆಯೋಜಿಸಿದ್ದು ಫಲ ನೀಡಿತು ಎಂದು ಅವರು ಹೇಳಿದರು.

ಗರ್ಭಿಣಿ, ಬಾಣಂತಿಯರಿರುವ ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕೆಂಬ ಒತ್ತಾಸೆ ಮುಂದಿಟ್ಟುಕೊಂಡು ಹೋದಾಗ ಕೆಲವರು
ವಿರೋಧಿಸಿದರು. ಆದರೆ, ಸಾಮೂಹಿಕ ಸೀಮಂತ, ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಇದಕ್ಕೆ ಪರಿಹಾರ ಮಾರ್ಗ ಕಲ್ಪಿಸಿತು. ಒಟ್ಟು
249 ಗರ್ಭಿಣಿ, 35 ಜನ ಬಾಣಂತಿಯರು, 176 ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವಲ್ಲಿ ಯಶಸ್ವಿಯಾದ
ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು ಎಂದು ಅವರು ತಿಳಿಸಿದರು.

2012ರ ಸಮೀಕ್ಷೆ ನಂತರ ನಿರ್ಮಾಣಗೊಂಡಿರುವ ಕೆಲವು ಮನೆಗಳಲ್ಲಿ ಶೌಚಾಲಯ ಇಲ್ಲ. ಇದರ ಜೊತೆಗೆ ಹಳೆ ಶೌಚಾಲಯಗಳು ಬಳಕೆಗೆ
ಯೋಗ್ಯವಾಗಿಲ್ಲ. ಇವುಗಳ ಸಮೀಕ್ಷೆ ಇದೀಗ ಆರಂಭ ಆಗಿದೆ. ಸಮೀಕ್ಷೆ ನಂತರ ಸರ್ಕಾರಕ್ಕೆ ಈ ಕುರಿತು ವರದಿ ಸಲ್ಲಿಸಲಾಗುವುದು. ಸರ್ಕಾರ ಅನುದಾನ ಒದಗಿಸಿದಲ್ಲಿ ಆ ಮನೆಗಳಲ್ಲೂ ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಶೌಚಾಲಯ ನಿರ್ಮಾಣ ಮಾಡಿದ್ದರೂ ಕೆಲವರು ಬಳಸುತ್ತಿಲ್ಲ. ಈ ಕುರಿತು ಅಭಿಯಾನ ಹಾಗೂ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು  ಅವರು ತಿಳಿಸಿದರು.

Advertisement

ಜಿಪಂ ಉಪ ಕಾರ್ಯದರ್ಶಿ ಷಡಾಕ್ಷರಪ್ಪ ಮಾತನಾಡಿ, ಈ ವರ್ಷ ಶೌಚಾಲಯ ನಿರ್ಮಾಣದಲ್ಲಿ ನಮ್ಮ ಜಿಲ್ಲೆ ರಾಜ್ಯಕ್ಕೆ ನಂ.1 ಆಗಿದೆ. ಜಿಲ್ಲೆಯಲ್ಲಿ 89,260 ಶೌಚಾಲಯ ನಿರ್ಮಿಸಲಾಗಿದೆ. ತುಮಕೂರಿನಲ್ಲಿ 87,885, ಚಾಮರಾಜನಗರ 77,807 ಶೌಚಾಲಯ ನಿರ್ಮಾಣ ಮಾಡಿ ನಂತರದ ಸ್ಥಾನದಲ್ಲಿವೆ ಎಂದರು. ಮುಖ್ಯ ಯೋಜನಾಧಿಕಾರಿ ಪಿ. ಬಸವನಗೌಡ, ಲೆಕ್ಕಾಧಿಕಾರಿ ಆಂಜನೇಯ, ದಾವಣಗೆರೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಎಲ್‌.ಎಸ್‌. ಪ್ರಭುದೇವ, ಸೇರಿ ವಿವಿಧ ತಾಲ್ಲೂಕುಗಳ ಕಾರ್ಯ ನಿರ್ವಾಹಕ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next