Advertisement

ಕ್ಷಯಮುಕ್ತ ಭಾರತದ ಪಣ ತೊಡೋಣ

04:29 PM Mar 24, 2017 | |

ಪ್ರತೀ ವರ್ಷ ಮಾರ್ಚ್‌ 24ನ್ನು ವಿಶ್ವ ಕ್ಷಯ ರೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ಮನುಕುಲವನ್ನು ಅನಾದಿ ಕಾಲದಿಂದಲೂ ಕಾಡುತ್ತ ಬಂದಿರುವ ಸಾಂಕ್ರಾಮಿಕ ರೋಗ ಕ್ಷಯ.ಶ್ವಾಸಕೋಶದ ಮೇಲೆ ಪ್ರಧಾನವಾಗಿ ದುಷ್ಪರಿಣಾಮ ಬೀರುವ ಈ ಕಾಯಿಲೆಯನ್ನು 2035ರ ಹೊತ್ತಿಗೆ ದೇಶದಿಂದ ನಿರ್ಮೂಲನ ಮಾಡುವ ಪಣ ತೊಡಲಾಗಿದೆ. 

Advertisement

ಪ್ರಾಯಶಃ ಭಾರತವನ್ನು ಬಹಳ ಪ್ರಾಚೀನ ಕಾಲದಿಂದಲೂ ಕಾಡಿದ ರೋಗವೆಂದರೆ ಕ್ಷಯ. ಶ್ವಾಸಕೋಶದ ಮೇಲೆ ಮುಖ್ಯ ಪರಿಣಾಮ ಬೀರುವ ಈ ಸಾಂಕ್ರಾಮಿಕ ರೋಗ ಮಾನವ ದೇಹದ ಇತರ ಅಂಗಾಂಗಗಳಿಗೂ ಬಾಧೆಯನ್ನುಂಟು ಮಾಡುತ್ತದೆ. ದೇಶದಲ್ಲಿ ಕ್ಷಯ ರೋಗದಿಂದ ಒಂದು ದಿನಕ್ಕೆ ಒಂದು ಸಾವಿರಕ್ಕಿಂತಲೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ; ಅಂದರೆ ಮೂರು ನಿಮಿಷಕ್ಕೆ ಇಬ್ಬರು ಸಾವನ್ನಪ್ಪುತ್ತಿರುವುದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. 

ಕ್ಷಯ ಮೈಕೋ ಬ್ಯಾಕ್ಟೀರಿಯಂ ಟ್ಯೂಬರ್‌ಕ್ಯೂಲೋಸಿಸ್‌ ಎಂಬ ಬ್ಯಾಕ್ಟೀರಿಯದಿಂದ ಬರುವ ಒಂದು ಸಾಂಕ್ರಾಮಿಕ ರೋಗ. ಒಬ್ಬ ಕ್ಷಯ ರೋಗಿ ಕೆಮ್ಮಿದಾಗ, ಸೀನಿದಾಗ ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಒಬ್ಬ ಕ್ಷಯ ರೋಗಿ ವರ್ಷ ಒಂದಕ್ಕೆ 13ರಿಂದ 15 ಜನರಿಗೆ ಈ ರೋಗವನ್ನು ಹರಡುತ್ತಾನೆ! 

ಬಾಲಕ್ಷಯಕ್ಕೆ ಬಿಸಿಜಿ
Bacilli calmette Guenin ಎಂಬುದರ ಸಂಕ್ಷಿಪ್ತರೂಪ ಬಿಸಿಜಿ. ಕ್ಷಯಕಾರಕ ಸೂಕ್ಷ್ಮಜೀವಿಯನ್ನು ನಿಶ್ಶಕ್ತಗೊಳಿಸಿ, ಅದನ್ನು ಮನುಷ್ಯ ದೇಹಕ್ಕೆ ಲಸಿಕೆಯಾಗಿ ನೀಡಿ ರೋಗ ನಿರೋಧಕ ಶಕ್ತಿ ಪಡೆಯುವಂತೆ ಮಾಡಿದ ಅದೇ ಹೆಸರಿನ ವಿಜ್ಞಾನಿಗಳ ಹೆಸರನ್ನೇ ಈ ಲಸಿಕೆಗೆ ಇರಿಸಿ ಗೌರವಿಸಲಾಗಿದೆ. ರೋಮನ್‌ ಸಾಮ್ರಾಜ್ಯದ ಪತನದ ಅನಂತರ, 15ನೇ ಶತಮಾನದವರೆಗಿನ ಸುಮಾರು ಒಂದು ಸಾವಿರ ವರ್ಷಗಳ ಕಾಲಾವಧಿಯಲ್ಲಿ ವೈದ್ಯವಿಜ್ಞಾನದಲ್ಲಿ ಕ್ಷಯರೋಗವನ್ನು ತಡೆಗಟ್ಟುವ ನಿಟ್ಟಿನ ಯಾವುದೇ ಗಮನಾರ್ಹ ಸಾಧನೆ ಬೆಳವಣಿಗೆಗಳು ಕಂಡುಬಂದಿರಲಿಲ್ಲ. ಇಷ್ಟು ಸುದೀರ್ಘ‌ವಾದ ಚಾರಿತ್ರಿಕ ಹಿನ್ನೆಲೆಯುಳ್ಳ ರೋಗಕ್ಕೆ ಏನಾದರೂ ಚಿಕಿತ್ಸೆ ಇದ್ದಿರಲೇಬೇಕು. ಹಿಪೋಕ್ರಾಟಿಸ್‌ ಕ್ಷಯರೋಗಿಗಳಿಗೆ ಚಿಕಿತ್ಸೆ ನೀಡುವುದು ವ್ಯರ್ಥ ಹಾಗೂ ಕಾಲವ್ಯಯ ಎಂದು ಕೈಚೆಲ್ಲಿದ್ದರು ಮತ್ತು ಅಂಥವರು ಸಮಾಜಕ್ಕೆ ಹೊರೆ ಎಂದಿದ್ದರು. ಆದರೆ ಅರಿಸ್ಟಾಟಲ್‌ ಮಾತ್ರ ಕ್ಷಯರೋಗಿಗಳ ಬಗ್ಗೆ ಕನಿಕರ ಹೊಂದಿದ್ದರು. 15ನೇ ಶತಮಾನದವರೆಗಿನ ಕತ್ತಲ ಯುಗದಲ್ಲಿಯೂ ಅರೇಬಿಯಾದ ವೈದ್ಯರಾದ ಅವಿಸೆನ್ನಾ ಹಾಗೂ ರೇಜಸ್‌ ಎಂಬುವವರು ಕರ್ಪೂರ, ದ್ರಾಕ್ಷಿ, ಸಕ್ಕರೆ ಹಾಗೂ ಶುಷ್ಕ ಗಾಳಿಯನ್ನು ಕ್ಷಯ ರೋಗ ಚಿಕಿತ್ಸೆಗೆ ಬಳಸುತ್ತಿದ್ದರು. ಕ್ಷಯರೋಗದ ಚಿಕಿತ್ಸೆಗೆ ಶುದ್ಧ ಹವೆ, ಸತ್ವಯುತ ಆಹಾರ ಹಾಗೂ ವಿಶ್ರಾಂತಿ ಎಂಬ ಮೂರು ಅಂಶಗಳ ನಡುವೆ ರೂಪುಗೊಳ್ಳುವ ತ್ರಿಕೋನದಲ್ಲಿಯೇ ಚಿಕಿತ್ಸೆ ಅಡಗಿದೆ ಎಂಬ ಸ್ಥೂಲ ಅರಿವಿನ ಕಾರಣವಾಗಿ 1850ರ ವೇಳೆಗೆ ಸ್ಯಾನಿಟೋರಿಯಂ ಚಿಕಿತ್ಸೆ ಪದ್ಧತಿ ರೂಪು ತಳೆಯಿತು. ಈಗಲಾದರೆ, ಕ್ಷಯರೋಗ ತಡೆಗಟ್ಟಲು ಮಗು ಹುಟ್ಟಿದಾಕ್ಷಣ ಅಥವಾ ಮಗುವಿನ ಮೊದಲ ಹುಟ್ಟುಹಬ್ಬ ಆಚರಿಸುವುದರೊಳಗೆ ಬಿಸಿಜಿ ಚುಚುಮದ್ದನ್ನು ಹಾಕಲೇಬೇಕು.
 
ಔಷಧಗಳ ಸಂಶೋಧನೆ
ಕ್ಷಯರೋಗ ಕಾರಕವಾದ ರೋಗಾಣು ಕಂಡುಹಿಡಿದಿದ್ದಾಯಿತು, ಅದರ ನಿಯಂತ್ರಣ ವಿಧಾನವನ್ನು ಆವಿಷ್ಕರಿಸಿದ್ದಾಯಿತು. ಮುಂದಿನದ್ದು ಕ್ಷಯರೋಗ ತಗಲಿದಾಗ ನೀಡಬೇಕಾದ ಔಷಧಿಗಳ ತಯಾರಿ. ಈ ಹುಡುಕಾಟದ ಫ‌ಲಶ್ರುತಿಯಾಗಿ 1944ರಲ್ಲಿ ಎಸ್‌.ಎ. ವಾಕ್‌Òಮನ್‌ ಮತ್ತು ಅಲ್ಬರ್ಟ್‌ ಶಾಝ್ ಎಂಬಿಬ್ಬರು ವಿಜ್ಞಾನಿಗಳು ಸ್ಟ್ರೆಪ್ಟೊಮೈಸಿನ್‌ ಸಂಶೋಧಿಸಿದರು. ಅನಂತರ ಕ್ಷಯಕ್ಕೆ ರಾಮಬಾಣವಾಗಿ ಮಾರುಕಟ್ಟೆಗೆ 1946ರಲ್ಲಿ ಪ್ಯಾರಾ ಅಮೈನೋ, ಸ್ಯಾಲಿಸಿಲಿಕ್‌ ಆಸಿಡ್‌, 1967ರಲ್ಲಿ ಇಥಂಬ್ಯುಟಲ್‌, 1971ರಲ್ಲಿ ರಿಫಾಂಪಿಸಿನ್‌ ಔಷಧಿಗಳು ಕಂಡುಹಿಡಿಯಲ್ಪಟ್ಟು ಕ್ಷಯ ರೋಗ ಚರಿತ್ರೆಯಲ್ಲಿ ಹೊಸ ಕ್ರಾಂತಿ ಉಂಟುಮಾಡಿದವು. ಅನೇಕ ವರ್ಷ ಈ ಮೂರು ಔಷಧಗಳನ್ನು ಬಳಸಿ 18 ತಿಂಗಳುಗಳ ಕಾಲ ಕ್ಷಯರೋಗಿಗಳನ್ನು ಚಿಕಿತ್ಸೆಗೆ ಒಳಪಡಿಸಲಾಗುತ್ತಿತ್ತು. ಅನಂತರ ವೈದ್ಯ ವಿಜ್ಞಾನ ನಿರಂತರ ಮುಂದುವರಿದದ್ದರ ಫ‌ಲವಾಗಿ ಹೊಸ ಔಷಧಿಗಳ ಸೇರ್ಪಡೆಯಿಂದ ಈಗ ಕ್ಷಯರೋಗದ ಚಿಕಿತ್ಸೆಯ ಅವಧಿ 18 ತಿಂಗಳಿನಿಂದ ಆರು ತಿಂಗಳಿಗೆ ಇಳಿದಿದೆ.
 
ಆತಂಕಕಾರಿ ಅಂಕಿಅಂಶ
ಇಡೀ ವಿಶ್ವದಲ್ಲಿ ಸುಮಾರು 20ರಿಂದ 30 ಮಿಲಿಯನ್‌ ಕ್ಷಯರೋಗಿಗಳಿದ್ದರೆ ಈ ರೋಗದಿಂದ ಪ್ರತಿವರ್ಷ 30 ಲಕ್ಷ ಜನರು ಮರಣ ಹೊಂದುತ್ತಾರೆ. ಭಾರತದಲ್ಲಿ 140 ಲಕ್ಷ ಜನರು ಕ್ಷಯ ರೋಗಪೀಡಿತರಾಗಿದ್ದಾರೆ. ಇವರಲ್ಲಿ 35 ಲಕ್ಷ ಜನ ರೋಗಿಗಳು ಕಫ‌ದಲ್ಲಿ ಕ್ಷಯದ ರೋಗಾಣುಗಳನ್ನು ಹೊಂದಿದ್ದಾರೆ. ಪ್ರತಿವರ್ಷ 22 ಲಕ್ಷ ಮಂದಿ ಹೊಸ ರೋಗಿಗಳು ಸೇರ್ಪಡೆಯಾಗುತ್ತಾರೆ ಹಾಗೂ ಇವರಲ್ಲಿ 10 ಲಕ್ಷ ಮಂದಿ ರೋಗಿಗಳ ಕಫ‌ದಲ್ಲಿ ರೋಗಾಣು ಕಂಡುಬರುತ್ತಿದೆ. 5 ಲಕ್ಷ ಜನರು ಪ್ರತೀವರ್ಷ ಕ್ಷಯರೋಗದಿಂದ ಮರಣ ಹೊಂದುತ್ತಿದ್ದಾರೆ. ಈ ರೋಗದಿಂದ ದೇಶಕ್ಕೆ ಪ್ರತೀ ವರ್ಷ 12,000 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಅಲ್ಲದೇ ವರ್ಷದ 15 ಕೋಟಿ ಮಾನವ ದಿನಗಳು ವ್ಯರ್ಥವಾಗುತ್ತಿದೆ. ಕ್ಷಯ ರೋಗದ ಕಾರಣದಿಂದಾಗಿ ಮೂರು ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಕ್ಷಯ ರೋಗದ ಒಟ್ಟು ಸಾವುನೋವುಗಳಲ್ಲಿ ಮಕ್ಕಳ ಪಾಲು ಶೇ.30ರಷ್ಟು.

ಪರಿಣಾಮಕಾರಿ ಚಿಕಿತ್ಸೆ 99 ಡಾಟ್ಸ್‌
ದೇಶದಲ್ಲಿ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮವು 1998ರಲ್ಲಿ ಪ್ರಾರಂಭವಾಗಿದೆ. ಕ್ಷಯರೋಗಿಗಳು ಸಂಪೂರ್ಣ ಗುಣಮುಖರನ್ನಾಗಿ ಮಾಡಲು ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸೆ ಡಾಟ್ಸ್‌. ಇದರ ಅನ್ವಯ ನೇರ ನಿಗಾ, ಅಲ್ಪಾವಧಿ ಚಿಕಿತ್ಸೆಯಡಿಯಲ್ಲಿ ಕ್ಷಯರೋಗಿ ಆರು ತಿಂಗಳು ಕಾಲ ಔಷಧಗಳನ್ನು ವಾರದ ಮೂರು ದಿನಗಳಂತೆ ಸೇವಿಸಬೇಕಾಗಿತ್ತು. ಆದರೆ ಕ್ಷಯ ರೋಗಿಯು ಒಂದೇ ಬಾರಿಗೆ ಏಳು ಮಾತ್ರೆಯನ್ನು ತೆಗೆದುಕೊಳ್ಳಬೇಕಾಗಿರುವುದರಿಂದ ಮಾತ್ರೆಯ ಸಂಖ್ಯೆ ಮತ್ತು ಗಾತ್ರ ನೋಡಿ ಭಯಪಡುವ ಸ್ಥಿತಿ ಇತ್ತು. ಇದರಿಂದ ಅನೇಕ ರೋಗಿಗಳು ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸುತ್ತಿದ್ದರು. ಇದನ್ನು ಮನಗಂಡ ಪರಿಣಿತರು ಒಂದು ಬಾರಿಗೆ ಸೇವಿಸಬೇಕಾದ ಎಲ್ಲ ಏಳು ಮಾತ್ರೆಗಳನ್ನು ಒಂದುಗೂಡಿಸಿ “ನಿಗದಿತ ಸಂಯೋಜಿತ ಔಷಧಿ’ ರೂಪಿಸಿದ್ದು, ಇದರ ಅನುಸಾರ ದೇಹದ ತೂಕಕ್ಕನುಗುಣವಾಗಿ ಕ್ರಮವಾಗಿ 2, 3, 4 ಅಥವಾ 5 ಮಾತ್ರೆಗಳನ್ನು ದಿನವೂ ಸೇವಿಸುವ ಸುಲಭ ವ್ಯವಸ್ಥೆಯನ್ನು 2017 ಜನವರಿಯಿಂದ ಆರಂಭಿಸಲಾಗಿದೆ. ಇದು ಕ್ಷಯ ಬ್ಯಾಕ್ಟೀರಿಯಾದ ಸರ್ವನಾಶಕ್ಕೆ ಅತ್ಯಂತ ಪರಿಣಾಮಕಾರಿಯೆಂದು ದೃಢಪಟ್ಟಿದೆ.

Advertisement

ಪ್ರಧಾನಿ ಮೋದಿ ಕಾಳಜಿ
ತಂತ್ರಜ್ಞಾನದಲ್ಲಿ ಭಾರೀ ಬದಲಾವಣೆ ಹಾಗೂ ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಯಲ್ಲಿ ಪ್ರಧಾನಿ ಮೋದಿಯವರಿಗಿರುವ ಕಾಳಜಿ, ಬದ್ಧತೆ ಶ್ಲಾಘನೀಯವಾದದ್ದು. ಕ್ಷಯರೋಗ ನಿವಾರಣೆಯ ವಿಚಾರದಲ್ಲಿ ಪ್ರಧಾನಿ ಮೋದಿಯವರು ವಿಶೇಷ ನಿಗಾ ವಹಿಸಿದ್ದಾರೆ, ಪ್ರತೀ ತಿಂಗಳು ಕ್ಷಯರೋಗದ ಅಂಕಿಅಂಶಗಳ ಬಗ್ಗೆ ಅವಲೋಕನ ಸಭೆಯನ್ನು ಕೇಂದ್ರದಲ್ಲಿ ನಡೆಸುತ್ತಿದ್ದಾರೆ. ಇದರಿಂದ ನಮ್ಮ ದೇಶದ ಯಾವ ರಾಜ್ಯದಲ್ಲಿ ಹೆಚ್ಚು ಕ್ಷಯರೋಗ ಕಂಡುಬರುತ್ತಿದೆ, ಅದಕ್ಕೆ ಕಾರಣವೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ನಿರ್ದಿಷ್ಟವಾದ ಉತ್ತರ ಕಂಡುಕೊಂಡು ಪರಿಹಾರಕ್ಕೆ ಮುಂದಾಗಲು ಸಾಧ್ಯವಾಗುತ್ತಿದೆ. ಕ್ಷಯರೋಗ ನಿರ್ಮೂಲನ ಅಭಿಯಾನಕ್ಕೆ ಅಗತ್ಯವಾದ ಆರ್ಥಿಕ ನೆರವು ಕೂಡ ಒದಗಿಸಲಾಗುತ್ತಿದೆ. 

ಕ್ಷಯ ರೋಗವನ್ನು ಅತಿ ಕ್ಷಿಪ್ರವಾಗಿ ಕಂಡುಹುಡುಕಿ ಸಕಾಲದಲ್ಲಿ 99 ಡಾಟ್ಸ್‌ ಚಿಕಿತ್ಸೆಯನ್ನು ಪಡೆದುಕೊಂಡರೆ ಈ ರೋಗ ವ್ಯಕ್ತಿಯಿಂದಲೂ ಸಮಾಜದಿಂದಲೂ ದೂರ ಸರಿಯುವುದರಲ್ಲಿ ಎರಡು ಮಾತಿಲ್ಲ. 2035ರ ಹೊತ್ತಿಗೆ ಭಾರತವನ್ನು ಕ್ಷಯಮುಕ್ತ ರಾಷ್ಟ್ರವನ್ನಾಗಿ ಮಾಡಲು ಪಣ ತೊಡಲಾಗಿದೆ. ಆ ನಿಟ್ಟಿನಲ್ಲಿ ಮುನ್ನಡೆಯುವುದು ನಮ್ಮೆಲ್ಲರ ಹೊಣೆಗಾರಿಕೆ.

– ಆಲಂದೂರು ಮಂಜುನಾಥ

Advertisement

Udayavani is now on Telegram. Click here to join our channel and stay updated with the latest news.

Next