Advertisement

Business 20: ಇಂದಿನ ಬಡವರೇ ನಾಳೆಯ ಮಧ್ಯಮ ವರ್ಗ- ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದನೆ

10:07 PM Aug 27, 2023 | |

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಬಡವರ ಪರ ಯೋಜನೆಗಳು ಮುಂದಿನ ವರ್ಷಗಳಲ್ಲಿ ದೊಡ್ಡಮಟ್ಟದ ಮಧ್ಯಮ ವರ್ಗವನ್ನು ಸೃಷ್ಟಿಸಲಿದೆ. ಅದು ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ನವದೆಹಲಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ “ಬ್ಯುಸಿನೆಸ್‌ 20′ ಸಮ್ಮೇಳನದಲ್ಲಿ ಮಾತನಾಡಿದ ಅವರು, “ಬಡ’ ವರ್ಗದಲ್ಲಿದ್ದವರು ಸರ್ಕಾರದ ಯೋಜನೆಗಳಿಂದಾಗಿ ಕೆಲವೇ ವರ್ಷಗಳಲ್ಲಿ “ಮಧ್ಯಮ ವರ್ಗ’ಕ್ಕೆ ಸೇರ್ಪಡೆಯಾಗಿ “ಹೊಸ ರೀತಿಯ ಮಧ್ಯಮ ವರ್ಗ’ (ನಿಯೋ ಮಿಡಲ್‌ ಕ್ಲಾಸ್‌) ಸೃಷ್ಟಿಯಾಗಲಿದೆ. ಅವರು ಹೊಸ ಆಶಾ ಭಾವನೆಗಳಿಂದ ಬಂದಿರುತ್ತಾರೆ ಮತ್ತು ವಿವಿಧ ಸೇವೆಗಳಿಗೆ ಅವರೇ ಖರೀದಿದಾರರು ಮತ್ತು ಅವರಿಂದಾಗಿಯೇ ದೇಶದ ಅರ್ಥ ವ್ಯವಸ್ಥೆ ಪ್ರಗತಿ ಹೊಂದಲಿದೆ ಎಂದಿದ್ದಾರೆ.

ಬಡವರ ನೆರವಿಗಾಗಿ ಮಾಡಿದ ಯೋಜನೆಗಳು ಫ‌ಲ ಕೊಟ್ಟಿವೆ. ಹೀಗಾಗಿ ಅವರೆಲ್ಲರೂ ಮಧ್ಯಮ ವರ್ಗಕ್ಕೆ ಬರುತ್ತಾರೆ ಎಂದು ಹೇಳಿದ ಪ್ರಧಾನಿ, ಇದರಿಂದಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ನೆರವು ಸಿಕ್ಕಿದಂತೆ ಆಗುತ್ತದೆ ಎಂದರು. ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಮುಂದಿನ ಐದರಿಂದ ಏಳು ವರ್ಷಗಳ ಅವಧಿಯಲ್ಲಿ ಮಧ್ಯಮ ವರ್ಗಕ್ಕೆ ಹೆಚ್ಚಿನ ಪ್ರಮಾಣದ ಜನರು ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ, ಕ್ರಿಪ್ಟೋ ಕರೆನ್ಸಿಗಳ ನಿಯಂತ್ರಣಕ್ಕಾಗಿ ಜಗತ್ತಿಗೇ ಅನ್ವಯವಾಗುವ ನಿಯಮಗಳನ್ನು ಜಾರಿಗೆ ತರಬೇಕು ಎಂದು ಸಲಹೆ ನೀಡಿದ ಪ್ರಧಾನಿ ಮೋದಿ, ಪ್ರಸ್ತುತ ಜನಪ್ರಿಯತೆಯ ಹಂತದಲ್ಲಿ ಇರುವ ಕೃತಕ ಬುದ್ಧಿಮತ್ತೆಯನ್ನು ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಬೇಕಾಗಿದೆ ಎಂದಿದ್ದಾರೆ.
ನುಡಿದಂತೆ ನಡೆದುಕೊಂಡಿದೆ:

ಜಗತ್ತಿನ ದಕ್ಷಿಣ ಭಾಗಕ್ಕೆ ಉಂಟಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ತಾನು ನೀಡಿರುವ ವಾಗ್ಧಾನಗಳಿಗೆ ಅನುಗುಣವಾಗಿ ಭಾರತ ನಡೆದುಕೊಂಡಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ. ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೊರೊನಾ ಅವಧಿಯಲ್ಲಿ ಭಾರತ ಜಗತ್ತಿಗೆ ಔಷಧೋದ್ಯಮ ಕ್ಷೇತ್ರದಲ್ಲಿ ಭಾರೀ ಪ್ರಮಾಣದ ನೆರವು ನೀಡಿದೆ. ಮೇಡ್‌ ಇನ್‌ ಇಂಡಿಯಾ ಲಸಿಕೆಯನ್ನು 100ಕ್ಕೂ ಅಧಿಕ ದೇಶಗಳಿಗೆ ರಫ್ತು ಮಾಡಲಾಯಿತು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next