ಮಕ್ಕಳ ಜಗತ್ತು ಅತಿಸೂಕ್ಷ್ಮ. ಅವು ನಮ್ಮ ಒಂದೊಂದು ಹೆಜ್ಜೆಯನ್ನೂ ಅವಲೋಕಿಸುತ್ತಾ, ಅನುಸರಿಸುತ್ತಾ ಸಾಗುವ ಪರಿಯಲ್ಲಿ ಒಂದಿಷ್ಟು ಅಚ್ಚರಿಗಳಿವೆ ಎನ್ನುವುದಕ್ಕೆ ಇದೊಂದು ಘಟನೆ ಕೈಗನ್ನಡಿ…
ಒಂದೊಂದು ಸಲ ಜಗತ್ತಿನ ಆಲಸ್ಯವೆಲ್ಲ ನನ್ನನ್ನೇ ಆವರಿಸಿಕೊಳ್ಳುವಂತೆ ಅನ್ನಿಸಿಬಿಡುತ್ತೆ. ಹಾಗಾದಾಗಲೆಲ್ಲ ಏನನ್ನೂ ಮಾಡಲು ಮನಸ್ಸಾಗದೇ, ಸೋಮಾರಿತನವನ್ನೇ ಹೊದ್ದು ಮಲಗುತ್ತೇನೆ. ಈ ಸಲ ಹಾಗೆ ಸೋಮಾರಿಯಾಗಿ ಮಲಗುವ ಮುನ್ನ ಗಂಡನಿಗೆ ಫೋನ್ ಮಾಡಿ, “ಇವತ್ತು ಏನೂ ಮಾಡೋಲ್ಲ, ಅಡುಗೆಯನ್ನು ಸಹ’ ಎಂದು ಘೋಷಿಸಿ ಕುಳಿತಿ¨ªೆ. ಇನ್ನೂ ಮೂರು ವರ್ಷದ ಮಗು “ಅಹಿ’. ತನ್ನ ಪಾಡಿಗೆ ಏನನ್ನೋ ಅಲ್ಲೇ ಕುಳಿತು ಆಡುತ್ತಿದ್ದ ಮಗು, ನನ್ನ ಮಾತು ಮುಗಿಯುತ್ತಿದ್ದಂತೆ, ಅಲ್ಲಿಂದ ಎದ್ದು “ಅಮ್ಮಾ ನಾನು ಅಗ್ಗೆ ಮಾತೀನಿ’ ಅಂತು.
ಅವಳ ಕಿಚನ್ ಸೆಟ್ ಹಿಡಿದು ಗಂಟೆಗಟ್ಟಲೆ ಆಟ ಆಡುವುದಲ್ಲದೆ, ನನಗೂ ಪುಟ್ಟ ಪ್ಲೇಟ್ ಕೊಟ್ಟು, ಒಂದು ಚಮಚ ಹಿಡಕೊಂಡು ಬಂದು, “ಅಮ್ಮಾ, ತಿನ್ನು…’ ಅಂತ ಕೊಡೋದು, ನಾನು ತಿನ್ನೋದು ಅಭ್ಯಾಸವಾಗಿದ್ದ ನನಗೆ ಅವಳ ಪಾಡಿಗೆ ಅವಳು ಆಡಲಿ ಅಂತ “ಹೂnಂ’ ಅಂದೇ. ಮಲಗಲು ಬೇಜಾರೆನ್ನಿಸಿ, ಯಾವುದೋ ಬುಕ್ ಹಿಡಿದು ಕುಳಿತ ಹತ್ತೇ ನಿಮಿಷಕ್ಕೆ ಚೇರ್ ಎಳೆಯುವ ಸದ್ದು ಕೇಳಿಸಿತು. “ಕಂದಾ… ಏನದು?’ ಎಂದು ಕುಳಿತಲ್ಲೇ ಕೇಳಿದೆ.
“ಏನಿಲ್ಲ ಅಮ್ಮಾ…’ ಅಂದಳು ಅಹಿ, ಮುಗ್ಧವಾಗಿ. ಸರಿ ಎಂದುಕೊಂಡು, ಮತ್ತೆ ಪುಸ್ತಕದಲ್ಲಿ ಮುಳುಗಿದೆ. ಸ್ವಲ್ಪ ಹೊತ್ತಿಗೆ ನನ್ನೆದುರು ಬಂದ ಕೂಸು, “ಅಮ್ಮಾ ಅಗ್ಗೆ ಮಾದಿದಿನಿ, ನೀನು ಆರಾಮಾಗಿರು…’ ಅಂತು. ನಕ್ಕು ಅವಳ ಕೆನ್ನೆಗೆ ಮುತ್ತಿಟ್ಟವಳಿಗೆ ಕಾಫಿ ಕುಡಿದರೆ, ಆಲಸ್ಯ ಸ್ವಲ್ಪ ಸರಿಹೋಗಬಹುದು ಅಂತ ಒಲ್ಲದ ಮನಸ್ಸಿನಿಂದಲೇ ಎದ್ದು ಅಡುಗೆಮನೆಗೆ ಹೊರಟೆ. ಆಗಷ್ಟೇ ಯುದ್ಧ ಮುಗಿದ ರಣಾಂಗಣದಂತೆ ಅಡುಗೆ ಮನೆ ಕಂಡಿತು. ಧಾನ್ಯಗಳ ಡಬ್ಬಗಳೆಲ್ಲಾ ಖಾಲಿಯಾಗಿ ಕುಳಿತಿದ್ದವು. ಫ್ರಿಡ್ಜ್ನಲ್ಲಿದ್ದ ಹಾಲು ಹೊರಗೆ ಬಂದು ಅಮಾಯಕವಾಗಿ ಹರಿದಾಡುತ್ತಿತ್ತು. ಒಂದು ಕ್ಷಣ ಏನೂ ತೋಚದೆ, “ಕಂದಾ… ಎಲ್ಲಿ ಅಗ್ಗೆ ಮಾಡಿದ್ದು ನೀನು?’ ಅಂದೆ.
“ಅಮ್ಮಾ, ನಿಂಗೆ ಬೇಜಾರು ಅಂದ್ಯಲ್ಲ, ಅದ್ಕೆ ನಾನೇ ಸಾರು ಮಾಡಿದೆ’ ಅಂತು. “ಹೇಗೆ ಮಾಡಿದೆ, ಕಂದಾ?’ ಅಂದೆ. “ಅಮ್ಮಾ, ಆ ಪಾತ್ರೆ ತಗೊಂಡು ನೀನು ಹಾಕ್ತಾ ಇ¨ªೆಯಲ್ಲ ಆ ಪುಡೀನ ಹಾಕಿದೆ’ ಅಂತು. ಅಲ್ಲಿ ನೋಡಿದಾಗ, ಅರ್ಧ ಕೆ.ಜಿ.ಯಷ್ಟಿದ್ದ ಸಾಂಬಾರ್ ಪುಡಿ, ಕಾಫಿ ಪುಡಿ, ಸಕ್ಕರೆ, ಜೀರಿಗೆ, ಮೆಂತ್ಯೆ ಎಲ್ಲವನ್ನೂ ಪಾತ್ರೆಗೆ ಹಾಕಿ, ಒಂದಷ್ಟು ನೀರು ಸುರಿದು, ಅದನ್ನು ಕಲಕಿ, ಹಾಳಾಗಬಾರದು ಅಂತ ಫ್ರಿಡ್ಜ್ನಲ್ಲಿಡಲು ಹೋಗಿ, ಜಾಗ ಸಾಲದೇ, ಅಲ್ಲಿದ್ದ ಹಾಲಿನ ಪಾತ್ರೆಯನ್ನು ಹೊರಗಿಟ್ಟು, ಇದನ್ನು ಒಳಗಿಟ್ಟು, ಒಂದು ಪ್ಲೇಟನ್ನೂ ಮುಚ್ಚಿತ್ತು! ಇಷ್ಟೆಲ್ಲ ಹೆಲ್ಪ್ ಮಾಡಿದರೂ, ಅಮ್ಮನ ಮುಖ ಯಾಕೆ ಹೀಗೆ ಗರಬಡಿದವರ ತರಹ ಇದೆ ಅಂತ ಅದಕ್ಕೆ ಕೊನೆಗೂ ಅರ್ಥವಾಗಲೇ ಇಲ್ಲ!
– ಶೋಭಾ ರಾವ್