Advertisement
ಆದರೆ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಅಸಮಾಧಾನಿತರ ಗುಂಪು ಈ ಸಭೆಗೆ ಬರುವ ಸಾಧ್ಯತೆ ಇಲ್ಲ. ಹೀಗಾಗಿ ಸಭೆ ಹೆಚ್ಚಿನ ಕಾವೇರಿಸದಿದ್ದರೂ ಸೋಲಿನ ಪರಾಮರ್ಷೆ ಸಂದರ್ಭದಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾದ ಕೆಲವೊಂದು ಅಂಶಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
Related Articles
Advertisement
ಇದರ ಮಧ್ಯೆಯೇ ನಂಜನಗೂಡು (ಮೈಸೂರು ಗ್ರಾಮಾಂತರ) ಮತ್ತು ಗುಂಡ್ಲುಪೇಟೆ (ಚಾಮರಾಜನಗರ) ಉಪ ಚುನಾವಣೆಯಲ್ಲಿ ಪಕ್ಷ ಸೋಲು ಅನುಭವಿಸಿದೆ. ಈ ಸೋಲಿಗೆ ಪಕ್ಷದ ಸಂಘಟನೆ ಸರಿಯಾಗಿ ಪಾಲ್ಗೊಳ್ಳದೇ ಇರುವುದೇ ಕಾರಣ ಎಂಬ ಮಾತನ್ನು ಯಡಿಯೂರಪ್ಪ ಹೇಳಿದ್ದರು. ಆದರೆ, ಆ ಜಿಲ್ಲೆಗಳ ಬಿಜೆಪಿ ಅಧ್ಯಕ್ಷರು ನಿಷ್ಠಾವಂತರನ್ನು ಸೌಜನ್ಯಕ್ಕಾದರೂ ಪ್ರಚಾರಕ್ಕೆ ಕರೆದಿರಲಿಲ್ಲ. ಹೀಗಿರುವಾಗ ಸಂಘಟನೆ ಬಗ್ಗೆ ಆರೋಪಿಸುವುದು ಸರಿಯಲ್ಲ ಎಂಬುದು ಅಸಮಾಧಾನಿತ ಮುಖಂಡರ ಅಭಿಪ್ರಾಯವಾಗಿದೆ. ಇದನ್ನು ಈಗಾಗಲೇ ಭಾನುವಾರದ ಸಭೆಯಲ್ಲಿ ಭಾಗವಹಿಸುತ್ತಿರುವ ಕೆಲವು ಮುಖಂಡರ ಗಮನಕ್ಕೂ ತಂದಿದ್ದಾರೆ. ಹೀಗಾಗಿ ಈ ವಿಚಾರ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.
27ರ ಸಭೆ ಕುರಿತು ಚರ್ಚೆ?: ಇದು ಉಪ ಚುನಾವಣೆ ಸೋಲಿನ ಆತ್ಮಾವಲೋಕನ ಸಭೆಯಾದರೂ ಯಡಿಯೂರಪ್ಪ ಅವರ ಮೇಲೆ ಅಸಮಾಧಾನಗೊಂಡಿರುವ ಗುಂಪು ಏ. 27ರಂದು ಬೆಂಗಳೂರಿನಲ್ಲಿ ಬಿಜೆಪಿ ಸಂಘಟನೆ ಉಳಿಸಿ ಎಂಬ ಸಭೆ ಆಯೋಜಿಸಿದ್ದು, ಈ ಬಗ್ಗೆ ಭಾನುವಾರ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಉಪ ಚುನಾವಣೆ ಸೋಲಿನ ಜತೆಗೆ ಭಿನ್ನಮತೀಯ ಚಟುವಟಿಕೆಗಳೂ ಹೆಚ್ಚಾದರೆ ಮುಂಬರುವ ವಿಧಾನಸಭೆ ಚುನಾವಣಾ ಸಿದ್ಧತೆಗೆ ಅಡ್ಡಿಯಾಗಲಿದೆ. ಆದ್ದರಿಂದ ಹೇಗಾದರೂ ಮಾಡಿ ಏ. 27ರ ಅಸಮಾಧಾನಿತ ಗುಂಪಿನ ಸಭೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಯಡಿಯೂರಪ್ಪ ಅವರ ಮೇಲೆ ಕೆಲ ಮುಖಂಡರು ಒತ್ತಡ ಹೇರಬಹುದು ಎನ್ನಲಾಗಿದೆ.
ಆದರೆ, ತಮ್ಮ ವಿರುದ್ಧ ತಿರುಗಿ ಬಿದ್ದಿರುವ ಮುಖಂಡರ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಯಡಿಯೂರಪ್ಪ, ಅವರು ಎಲ್ಲಿಗೆ ಬೇಕಾದರೂ ಹೋಗಲಿ ಎನ್ನುವ ಮೂಲಕ ಈ ರೀತಿಯ ಒತ್ತಡಗಳಿಗೆ ಮಣಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಹೀಗಿರುವಾಗ ಭಾನುವಾರದ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದರೆ ಯಡಿಯೂರಪ್ಪ ಅವರ ಪ್ರತಿಕ್ರಿಯೆ ಹೇಗಿರುತ್ತದೆ? ಅಸಮಾಧಾನ ಶಮನಕ್ಕೆ ಅವರು ಪ್ರಯತ್ನಿಸಲಿದ್ದಾರೆಯೇ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.