Advertisement

ಇಂದು ಸಂಭ್ರಮದ ಗಣರಾಜ್ಯೋತ್ಸವ

11:10 AM Jan 26, 2018 | |

ಮಹಾನಗರ: ಇಂದು ನಡೆಯುವ ಗಣರಾಜ್ಯೋತ್ಸವ ಆಚರಣೆಗೆ ಮಂಗಳೂರು ನಗರ ಸಂಪೂರ್ಣವಾಗಿ ಸಿದ್ಧಗೊಂಡಿದೆ. ಈಗಾಗಲೇ ನಗರದ ನೆಹರೂ ಮೈದಾನದಲ್ಲಿ ಸರ್ವ ರೀತಿಯ ತಯಾರಿ ನಡೆಸಲಾಗಿದ್ದು, ಜ. 26ರಂದು ಬೆಳಗ್ಗೆ 8.30ರಿಂದ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ.

Advertisement

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಧ್ವಜಾರೋಹಣ ನೆರವೇರಿಸಲಿದ್ದಾರೆ. 9 ಗಂಟೆಗೆ ಉಸ್ತುವಾರಿ ಸಚಿವ ರಿಂದ ಭಾಷಣ, ಬಳಿಕ ಗೌರವ ವಂದನೆ ಸ್ವೀಕಾರ, ಅನಂತರ ಆಕರ್ಷಕ ಪಥ ಸಂಚಲನ ಜರಗಲಿದೆ. ಸರಕಾರಿ ಹುದ್ದೆಯಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ಆರು ಮಂದಿಯನ್ನು ‘ಸರ್ವೋತ್ತಮ ಸೇವಾ ಪುರಸ್ಕಾರ’ ನೀಡಿ ಈ ವೇಳೆ ಸಮ್ಮಾನಿಸಲಾಗುತ್ತದೆ.

ಪಥ ಸಂಚಲನದಲ್ಲಿ ಪೊಲೀಸ್‌ ಇಲಾಖೆ, ಕೆಎಸ್‌ಆರ್‌ಪಿ ತುಕಡಿ, ಮಹಿಳಾ ಪೊಲೀಸ್‌ ತಂಡ, ಅಗ್ನಿಶಾಮಕ ದಳ, ಗಾರ್ಡ್ಸ್‌, ಎನ್‌ ಸಿಸಿ ಆರ್ಮಿ, ನೇವಿ, ಏರ್‌ಫೋರ್ಸ್‌, ಭಾರತ ಸೇವಾದಳ, ಅರಣ್ಯ ಇಲಾಖೆ ತಂಡ, ಪೊಲೀಸ್‌ ಬ್ಯಾಂಡ್‌ ಸಹಿತ ವಿವಿಧ ತಂಡಗಳು ಭಾಗವಹಿಸಲಿವೆ. ಈಗಾಗಲೇ ಎಲ್ಲ ತಂಡಗಳೂ ಪಥಸಂಚಲನದ ನಿಟ್ಟಿನಲ್ಲಿ ಭರದ ಸಿದ್ಧತೆ ನಡೆಸಿವೆ.

ವಿಂಟೇಜ್‌ ಕಾರು ಪ್ರದರ್ಶನ
ಪ್ರತಿ ಬಾರಿಯ ಗಣರಾಜ್ಯೋತ್ಸವಕ್ಕೂ ವಿಂಟೇಜ್‌ ಕಾರು ಪ್ರದರ್ಶನ ಮಂಗಳೂರಿನಲ್ಲಿ ಪ್ರಮುಖ ಆಕರ್ಷಣೆಯಾಗಿರುತ್ತದೆ. ದೇಶದಲ್ಲೇ ಮಂಗಳೂರಿನಲ್ಲಿ ಮಾತ್ರ ಈ ಪ್ರದರ್ಶನ ನಡೆಯುತ್ತಿದ್ದು, ಎರಡು, ಮೂರು ಶತಮಾನಗಳಷ್ಟು ಹಿಂದಿನ ವಾಹನಗಳನ್ನು ಪ್ರದರ್ಶಿಸಲಾಗುತ್ತಿದೆ. ಮೋಟಾರು ಸೈಕಲ್‌, ಸ್ಕೂಟರ್‌, ಜೀಪು, ಕಾರುಗಳು ಈ ಪ್ರದರ್ಶನದಲ್ಲಿ ಗಮನ ಸೆಳೆಯಲಿವೆ. ಸುಮಾರು 100ಕ್ಕೂ ಹೆಚ್ಚು ವಾಹನಗಳು ಪ್ರದರ್ಶನದಲ್ಲಿರುತ್ತವೆ.

ಸಾಂಸ್ಕೃತಿಕ ವೈಭವ
ಪ್ರತಿ ವರ್ಷದಂತೆ ಈ ಬಾರಿಯೂ ಶಾಲಾ ಮಕ್ಕಳಿಂದ ನೆಹರೂ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಸುಮಾರು ಐದು ಶಾಲೆಗಳ 1,000 ಮಕ್ಕಳಿಂದ ನಡೆಯುವ ದೇಶ, ನಾಡು-ನುಡಿಗೆ ಸಂಬಂಧಿಸಿದ ನೃತ್ಯ ಕಾರ್ಯಕ್ರಮ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ. ಅಲ್ಲದೆ ಮಧ್ಯಾಹ್ನದ ಬಳಿಕ ಪುರಭವದಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

Advertisement

ಸರಕಾರಿ ಕಾರ್ಯಕ್ರಮ ಪ್ರದರ್ಶನ
ನಗರದ ಕದ್ರಿ ಪಾರ್ಕ್‌ನಲ್ಲಿ ಈಗಾಗಲೇ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆಗಳಾಗಿದ್ದು, 26ರಂದು ಬೆಳಗ್ಗೆ 11.30ಕ್ಕೆ ಉದ್ಘಾಟನೆ ಗೊಳ್ಳಲಿದೆ. ಮಂಗಳೂರು ಕ್ಲಾಕ್‌ ಟವರ್‌ ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆ. ಸಾವಯವ ಕೃಷಿಕರಿಗೆ ಪ್ರೋತ್ಸಾಹ ಕೊಡುವ ದೃಷ್ಟಿಯಿಂದ ಸಾವಯವ ಬೀಜ, ತರಕಾರಿಗಳ ಪ್ರದರ್ಶನ-ಮಾರಾಟವೂ ಇರಲಿದೆ. ಕಳೆದ ವರ್ಷ ಮೂರು ದಿನಗಳ ಕಾಲ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 3 ಲಕ್ಷ ಮಂದಿ ಭಾಗವಹಿಸಿದ್ದು, ಈ ಬಾರಿಯೂ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆಯಿದೆ. ಜತೆಗೆ ವಾರ್ತಾ ಇಲಾಖೆ ಆಶ್ರಯದಲ್ಲಿ ಸರಕಾರಿ ಕಾರ್ಯಕ್ರಮಗಳ ವಸ್ತು ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next