Advertisement
ಪ್ರೀತಿ ಸಿಗದ, ಅಸಾಧ್ಯವಾದ ಹೊರೆಯನ್ನು ಹೊರುವ ಸಾವಿರಾರು ಬಾಲ್ಯದ ಮುಖಗಳಿವೆ. ಶಾಲೆಯ ಮೆಟ್ಟಲು ಕಾಣದೆ ವಂಚನೆಗೊಳಗಾದ ಪ್ರತಿಭೆಗಳಿವೆ. ಈ ಮುಖಗಳು ಬೀದಿ, ಹೊಟೇಲ್, ಗಣಿ, ಕಾರ್ಖಾನೆ, ಅಂಗಡಿ, ಬಸ್ ನಿಲ್ದಾಣಗಳಲ್ಲಿ ದುಡಿಯುವ, ಮನೆ ಕೆಲಸ ಮತ್ತು ಭಿಕ್ಷಾಟನೆಗಳಲ್ಲಿ ತೊಡಗಿಕೊಂಡಿರುವ ದೃಶ್ಯಗಳು ಪ್ರತೀದಿನ ಕಾಣ ಸಿಗುತ್ತವೆ. ಇದು ಒಂದು ದೇಶದ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಪೂರಕವಲ್ಲ. ಬಾಲ ಕಾರ್ಮಿಕತೆ ಸಮಾಜಕ್ಕೆ ಅಂಟಿದ ಶಾಪ. ಸಶಕ್ತ ಸ್ವಾವಲಂಬಿ ಸಮಾಜದ ನಿರ್ಮಾಣಕ್ಕೆ ಆತಂಕ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಹಾನಿ ಮಾಡುವ ಮೂಲಕ ಭವಿಷ್ಯವನ್ನು ಹಾಳುಮಾಡುತ್ತದೆ. ಅವರನ್ನು ಆಟ-ಪಾಠಗಳಿಂದ ವಂಚಿತರನ್ನಾಗಿಸುತ್ತದೆ. ಅವರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ.
Related Articles
Advertisement
ಬಡತನದಿಂದ ಶಿಕ್ಷಣ ವಂಚಿತರಾಗುತ್ತಿರುವ ಮಕ್ಕಳು ಬಾಲ ಕಾರ್ಮಿಕರಾಗಿ ಮಾರ್ಪಾಡಾಗು ತ್ತಿದ್ದಾರೆ. ಮನೆಗಳಲ್ಲಿನ ಬಡತನವು ಬಾಲ ಕಾರ್ಮಿಕ ಪದ್ಧತಿಗೆ ಒಂದು ಮುಖ್ಯ ಕಾರಣವಾಗಿದೆ. ವಾಸ್ತವವಾಗಿ, ದುಡಿಯುವ ಮಕ್ಕಳಲ್ಲಿ ಹೆಚ್ಚಿನವರು ಬಡತನ ರೇಖೆಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಂದ ಬಂದವರು.ಲಿಂಗ ತಾರತಮ್ಯತೆ ಬಾಲ ಕಾರ್ಮಿಕತೆಯ ಇನ್ನೊಂದು ಕಾರಣ. ಅನೇಕ ದೇಶಗಳಲ್ಲಿ, ಹೆಣ್ಣು ಮಕ್ಕಳನ್ನು ತಮ್ಮ ಸಹೋದರರಿಗಿಂತ ಕೀಳಾಗಿ ಪರಿಗಣಿಸಲಾಗುತ್ತದೆ ಮತ್ತು ಚಿಕ್ಕ ವಯಸ್ಸಿ ನಿಂದಲೂ ಅವರನ್ನು ವಿವಿಧ ಕೆಲಸಗಳಿಗೆ ನಿಯೋಜಿಸ ಲಾಗುತ್ತದೆ. ಹೆಣ್ಣು ಮಕ್ಕಳನ್ನು ಹೆಚ್ಚಾಗಿ ಮನೆ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ. ಮಾತ್ರವಲ್ಲ ಅವರನ್ನು ವೇಶ್ಯಾವಾಟಿಕೆಗಳಂತಹ ದುಷ್ಕೃತ್ಯಗಳಿಗೆ ತಳ್ಳಲಾಗುತ್ತದೆ. 2011ರ ಜನಗಣತಿಯ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ 5-14 ವರ್ಷದೊಳಗಿನ ಒಟ್ಟು ಬಾಲ ಕಾರ್ಮಿಕರ ಸಂಖ್ಯೆ 10.11 ಮಿಲಿಯನ್ ಇದೆ. ಇತ್ತೀಚೆಗಿನ ದಶಕಗಳಲ್ಲಿ ಬಾಲ ಕಾರ್ಮಿಕರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದು ಸಮಾ ಧಾನಕರವಾದ ವಿಷಯವಾದರೂ ಸಂಪೂರ್ಣವಾಗಿ ನಿರ್ಮೂಲನವಾಗಬೇಕಿದೆ. ಬಾಲ ಕಾರ್ಮಿಕ ಪದ್ಧತಿ ತಡೆಗೆ ಬಾಲಕಾರ್ಮಿಕ (ತಡೆ ಮತ್ತು ನಿಯಂತ್ರಣ )ಕಾಯ್ದೆ 1986 ನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯಡಿ 14 ವರ್ಷದ ಒಳಗಿನ ಮಕ್ಕಳನ್ನು ದುಡಿಸಿಕೊಳ್ಳುವಂತಿಲ್ಲ. ಈ ಕಾಯ್ದೆಯ ಮೂರನೇ ಪರಿಚ್ಛೇದ, ಮಕ್ಕಳು ದುಡಿಯಬಾರದ 18 ಅಪಾಯಕಾರಿ ವೃತ್ತಿಗಳು ಮತ್ತು 65 ಸಂಸ್ಕರಣ ಘಟಕಗಳನ್ನು ಗುರುತಿಸಿದೆ. ಕಾಯ್ದೆ ಉಲ್ಲಂ ಸಿ ಬಾಲ ಕಾರ್ಮಿಕರನ್ನು ನಿಯೋ ಜಿಸಿಕೊಳ್ಳುವ ವ್ಯಕ್ತಿಗಳಿಗೆ ಮೂರು ತಿಂಗಳಿನಿಂದ ಒಂದು ವರ್ಷದ ವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಮಕ್ಕಳನ್ನು ಕಾರ್ಮಿಕರನ್ನಾಗಿ ಉಪಯೋಗಿಸಿಕೊಳ್ಳುವುದನ್ನು ತಡೆಗಟ್ಟಲು ಮತ್ತು ಅಪಾಯಕಾರಿ ಪರಿಸರ ದಲ್ಲಿ ದುಡಿಸಿಕೊಳ್ಳುವುದನ್ನು ನಿಲ್ಲಿಸಲು ಈ ಕಾಯ್ದೆ ಯನ್ನು ಜಾರಿಗೆ ತರಲಾಯಿತು. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು (ಇಂಟರ್ ನ್ಯಾಶನಲ್ ಲೇಬರ್ ಆರ್ಗನೈಸೇಶನ್) ಬಾಲಕಾರ್ಮಿಕತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಅದನ್ನು ತಡೆಯಲು ಕ್ರಿಯಾತ್ಮಕವಾಗಿ ಕೆಲಸಮಾಡುವ ಉದ್ದೇಶದಿಂದ ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನಾಗಿ ಆಚರಿಸುತ್ತಿದೆ. ಬಾಲ್ಯ ಮಾನವನ ಜೀವನದಲ್ಲಿ ಬರುವ ಬಹು ಮುಖ್ಯ ಹಂತ. ಮಕ್ಕಳು ಮನುಕುಲದ ಬಹುದೊಡ್ಡ ಕೊಡುಗೆ. ಬಾಲ ಕಾರ್ಮಿಕ ಪದ್ಧತಿಯು ಮಕ್ಕಳ ಬಾಲ್ಯವನ್ನು ಕಿತ್ತುಕೊಳ್ಳುವುದಲ್ಲದೆ ಅವರ ಸಾಮರ್ಥ್ಯ ಮತ್ತು ಘನತೆಯನ್ನು ಕಸಿದುಕೊಳ್ಳುತ್ತದೆ. ಅವರ ದೈಹಿಕ ಮತ್ತು ಮಾನಸಿಕ, ನೈತಿಕ ಬೆಳವಣಿಗೆಯನ್ನು ಹಾನಿಮಾಡುತ್ತದೆ. ಇದರಿಂದ ದೇಶವು ಉತ್ತಮ ಯುವಜನತೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಪ್ರತಿಯೊಂದು ಮಗುವು ಉತ್ತಮ ಕೌಟುಂಬಿಕ ವಾತಾವರಣದಲ್ಲಿ ಬದುಕುವ ಮತ್ತು ಬೆಳೆಯುವ ಹಕ್ಕನ್ನು ಪಡೆದಿದೆ. ಅಂದರೆ ಹಿಂಸೆಯಿಂದ ಮುಕ್ತ ವಾದ, ಸಂತೋಷವಾದ ಮತ್ತು ವಾತ್ಸಲ್ಯಪೂರ್ಣ ಕುಟುಂಬದಲ್ಲಿ ಬೆಳೆಯುವುದು ಪ್ರತೀ ಮಕ್ಕಳ ಹಕ್ಕು. ಆದ್ದರಿಂದ ಮಕ್ಕಳ ಜೀವನದಲ್ಲಿ ಬಾಲ್ಯ, ಶಿಕ್ಷಣ, ಆರೋಗ್ಯ, ಉತ್ತಮ ಪರಿಸರ, ರಕ್ಷಣೆ ಮತ್ತು ಭದ್ರತೆ ಬಹಳ ಮುಖ್ಯ. ಇವುಗಳಲ್ಲಿ ಯಾವುದೇ ಕೊರತೆಯಾದರೂ ಅವರ ಸರ್ವತೋಮುಖ ಅಭಿವೃದ್ಧಿ ಕುಂಠಿತವಾಗುತ್ತದೆ. ಅನಕ್ಷರತೆ ಮತ್ತು ಆರ್ಥಿಕ ಸಮಸ್ಯೆಯೇ ಬಾಲಕಾರ್ಮಿಕ ಪದ್ಧತಿಗೆ ಮೂಲ ಕಾರಣವಾಗಿದ್ದು, ಸರಕಾರ ಒದಗಿಸಿರುವ ಸೌಲಭ್ಯಗಳನ್ನು ವಿವಿಧ ಇಲಾಖೆಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಮೂಲಕ ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ಮಾರಕವಾಗಿರುವ ಬಾಲಕಾರ್ಮಿಕ ಪದ್ಧತಿ ನಿರ್ಮೂಲನವಾಗಬೇಕಿದೆ. ಬಡತನ ನಿವಾರಣೆ, ಸಾರ್ವತ್ರಿಕ ಶಿಕ್ಷಣ, ಉದ್ಯೋಗ ಸೃಷ್ಟಿ, ಸಾರ್ವಜನಿಕರಲ್ಲಿ ಅರಿವು, ಪೋಷಕರ ಮನಃಪರಿವರ್ತನೆ ಮತ್ತಿತರ ಕ್ರಮಗಳ ಮೂಲಕ ಬಾಲಕಾರ್ಮಿಕ ಪದ್ಧತಿಗೆ ಅಂತ್ಯ ಹಾಡಬೇಕಿದೆ. ವಿದ್ಯಾ ಅಮ್ಮಣ್ಣಾಯ, ಕಾಪು