Advertisement

ಇಂದಿನಿಂದ ಸಿರಿಧಾನ್ಯ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ

11:23 AM Jan 19, 2018 | Team Udayavani |

ಬೆಂಗಳೂರು: ಸಾವಯವ ಮತ್ತು ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ನಗರದ ಅರಮನೆ ಸಜ್ಜುಗೊಂಡಿದೆ. ದೇಶ-ವಿದೇಶಗಳಿಂದ ಆಹಾರ ಕಂಪನಿಗಳು, ವಿಜ್ಞಾನಿಗಳು ಆಗಮಿಸಲಿದ್ದು, ಮೂರು ದಿನಗಳ ಮೇಳದಲ್ಲಿ ಸುಮಾರು ಹತ್ತು ಸಾವಿರ ರೈತರು, 200ಕ್ಕೂ ಅಧಿಕ ಖರೀದಿದಾರರು, ಸಿರಿಧಾನ್ಯಗಳನ್ನು ಮೌಲ್ಯವರ್ಧನೆ ಮಾಡುವ ನುರಿತ ತಜ್ಞರು ಭಾಗವಹಿಸಲಿದ್ದಾರೆ.

Advertisement

ಅಂದಾಜು 500 ವ್ಯಾಪಾರಿಗಳು-ರೈತರ ನಡುವೆ ಸಭೆಗಳು ನಡೆಯಲಿದೆ ಎಂದು ಕೃಷಿ ಇಲಾಖೆ ಆಯುಕ್ತ ಜಿ. ಸತೀಶ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೇಳಕ್ಕೆ ಶುಕ್ರವಾರ ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದು, ಕೇಂದ್ರ ಕೃಷಿ ಸಚಿವ ರಾಧಾಮೋಹನ್‌ ಸಿಂಗ್‌ ವಸ್ತುಪ್ರದರ್ಶನ ಉದ್ಘಾಟಿಸುವರು.

ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ. ಸದಾನಂದಗೌಡ, ನಿರ್ಮಲಾ ಸೀತಾರಾಮನ್‌, ಹರ್‌ಸಿಮ್ರತ್‌ ಕೌರ್‌ ಬಾದಲ್‌, ಸಚಿವರಾದ ಕೃಷ್ಣ ಭೈರೇಗೌಡ, ಕೆ.ಜೆ. ಜಾರ್ಜ್‌, ಎಸ್‌.ಎಸ್‌. ಮಲ್ಲಿಕಾರ್ಜುನ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 21ರ ಸಮಾರೋಪದಲ್ಲಿ ಸಚಿವ ಆರ್‌.ವಿ. ದೇಶಪಾಂಡೆ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ವಾಣಿಜ್ಯ ಮೇಳದಲ್ಲಿ ಸುಮಾರು 350 ಮಳಿಗೆಗಳು ತಲೆಯೆತ್ತಲಿವೆ. ಈ ಪೈಕಿ ಈಗಾಗಲೇ 225 ಕಂಪನಿಗಳು ಖಚಿತಪಡಿಸಿದ್ದು, ಉಳಿದವು ಖರೀದಿದಾರರಾಗಿ ಭಾಗವಹಿಸುವ ಭರವಸೆ ನೀಡಿವೆ ಎಂದರು.  

ವ್ಯವಸ್ಥೆ: ಸಾರ್ವಜನಿಕರಿಗೆ ಮೇಳದಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗಿದೆ. ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಅರಮನೆಗೆ ಬರಲು ಪ್ರತಿ 15ರಿಂದ 20 ನಿಮಿಷಕ್ಕೊಂದು ಬಿಎಂಟಿಸಿ ಬಸ್‌ ವ್ಯವಸ್ಥೆ ಮಾಡಿದ್ದು, ಪ್ರಯಾಣ ಉಚಿತವಾಗಿದೆ ಎಂದರು. 

Advertisement

ಖಾನಾವಳಿ ಮೇಳದ ಕೇಂದ್ರ ಬಿಂದು: ಈ ಬಾರಿಯ ಮೇಳದಲ್ಲಿ ಬೃಹತ್‌ ಖಾನಾವಳಿಯನ್ನು ಪರಿಚಯಿಸಲಾಗಿದ್ದು, 20 ರೆಸ್ಟೋರೆಂಟ್‌ಗಳು ಔಟ್‌ಲೆಟ್‌ಗಳನ್ನು ಸ್ಥಾಪಿಸಿವೆ. ಕೃಷಿ ಇಲಾಖೆ, ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ನ್ಯೂಟ್ರಾಸುಟಿಕಲ್ಸ್‌ ಸಂಶೋಧನೆ ಕೇಂದ್ರದ ಸಹಯೋಗದಲ್ಲಿ ಈ “ಖಾನಾವಳಿ’ ತೆರೆಯಲಾಗಿದ್ದು,

ಸಾಂಪ್ರದಾಯಿಕ ಸಿರಿಧಾನ್ಯ ಆಹಾರದ ಟ್ರೆಂಡ್‌, ಅಡಿಗೆ ಪ್ರದರ್ಶನ, ಸ್ಪರ್ಧೆಗಳು ಇಲ್ಲಿ ನಡೆಯಲಿವೆ. ರೈತರಿಗಾಗಿ ಪ್ರತ್ಯೇಕ ಕೃಷಿ ಕಾರ್ಯಾಗಾರ ಕೂಡ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳಿಗಾಗಿ ಪೋಸ್ಟರ್‌ ಮತ್ತು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಗೂ ಇದು ವೇದಿಕೆ ಆಗಲಿದೆ ಎಂದು ಆಯುಕ್ತರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next