Advertisement

ಇಂದು ಸಂಭ್ರಮ ಸಡಗರದ ಕ್ರಿಸ್ಮಸ್‌

10:41 AM Dec 25, 2017 | |

ಪುತ್ತೂರು: ಅದು ಡಿಸೆಂಬರ್‌ 24ರ ಮಧ್ಯರಾತ್ರಿ. ಬೆತ್ಲೆಹೆಮ್‌ನ ಒಂದು ಗೋದಲಿ (ದನದ ಹಟ್ಟಿ)ಯಲ್ಲಿ ಏಸುಕ್ರಿಸ್ತನ ಜನನವಾಗುತ್ತದೆ. ಪಾಪವಿಮೋಚನೆಗಾಗಿ ಅವತಾರ ಎತ್ತಿದ ಈ ಮಹಾಪುರುಷನ ಹುಟ್ಟಿದ ದಿನವನ್ನು ಹಾಗೂ ಮುಂದಿನ ಎರಡು ವಾರಗಳ ಕಾಲ ಕ್ರಿಸ್ಮಸ್‌ ಹಬ್ಬವಾಗಿ ವಿಶ್ವಾದ್ಯಂತ ಆಚರಿಸಲಾಗುತ್ತಿದೆ.

Advertisement

ಎಲ್ಲ ಕಡೆಯಂತೆ ಪುತ್ತೂರಿನಲ್ಲಿಯೂ ಕ್ರಿಸ್ಮಸ್‌ ಹಬ್ಬದ ತಯಾರಿಗಳು ಭರದಿಂದಲೇ ಸಾಗಿವೆ. ವರ್ಷದ ಕೊನೆಯ ಹಬ್ಬ, ಇದರ ಜತೆಗೆ ಹೊಸವರ್ಷವನ್ನು ಎದುರುಗೊಳ್ಳುವ ಸಡಗರ. ಈ ಎರಡೂ ಕಾರ್ಯಕ್ರಮಕ್ಕೂ ಭರದ ಸಿದ್ಧತೆ ನಡೆಯುತ್ತಿದೆ.

ಕ್ರಿಸ್ಮಸ್‌ ಹಬ್ಬದ ಮುನ್ನದಿನವಾದ ಡಿ. 24ರಂದು ರಾತ್ರಿ 7 ಗಂಟೆಗೆ ಪುತ್ತೂರು ಮಾಯಿದೆ ದೇವುಸ್‌ ಚರ್ಚ್‌ನಲ್ಲಿ ಬಲಿಪೂಜೆ, ಕ್ರಿಸ್ಮಸ್‌ ಕ್ಯಾರಲ್ಸ್‌ ನಡೆಯಲಿದೆ. ಕ್ಯಾರಲ್ಸ್‌ ಎಂದರೆ ಸ್ತುತಿಗೀತೆ ಎಂದರ್ಥ. ಕ್ರಿಸ್ತ ಹುಟ್ಟಿದ ನೆನಪಿನಲ್ಲಿ ಹಾಡಿಹೊಗಳಿ ಸಂಭ್ರಮಿಸುವ ಕಾರ್ಯಕ್ರಮವಿದು.

ಡಿ. 25ರ ಮುಂಜಾನೆಯಿಂದಲೇ ಕ್ರಿಸ್ಮಸ್‌ನ ಸಡಗರ ತುಂಬಿಕೊಳ್ಳುತ್ತದೆ. ಮಾಯಿದೆ ದೇವುಸ್‌ ಚರ್ಚ್‌ನಲ್ಲಿ ಬೆಳಗ್ಗೆ
6.30, 8.15ಕ್ಕೆ ಪೂಜೆ ನಡೆಯಲಿದೆ. ಬಳಿಕ ಸಂಜೆ 4.30ಕ್ಕೆ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಬಳಿಯಿಂದ ಮೆರವಣಿಗೆ ಸಾಗಿ ಬರಲಿದೆ. ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಿ ಸಾಂತಾಕ್ಲಾಸ್‌, 6 ಟ್ಯಾಬ್ಲೋಗಳು, ಸ್ತುತಿಗೀತೆ ಹಾಡಲಾಗುವುದು.

ಮಾಯಿದೆ ದೇವುಸ್‌ ಚರ್ಚ್‌ ಮುಂಭಾಗ ಮೆರವಣಿಗೆ ಸಮಾಪನ ಗೊಳ್ಳಲಿದೆ. ಬಳಿಕ ಡಾನ್‌ಬೋಸ್ಕೋ ಕ್ಲಬ್‌ ಹಾಗೂ ವೈಎಂಸಿಎ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎರಡು ವಾರ ಅಂದರೆ ಜನವರಿ 7ರಂದು ಎಫಿಮನಿ ಹಬ್ಬ. ಅಲ್ಲಿವರೆಗೆ ಕ್ರಿಸ್ಮಸ್‌ ಹಬ್ಬವನ್ನು ಆಚರಿಸುವ ಸಂಪ್ರದಾಯ ಬೆಳೆದು ಬಂದಿದೆ.

Advertisement

ಗೋದಲಿಯಲ್ಲಿ ಕ್ರಿಸ್ತನ ಜನನ
ಗೋದಲಿ ಎಂದರೆ ಬೆತ್ಲೆಹೆಮ್‌ನಲ್ಲಿ ಏಸುಕ್ರಿಸ್ತ ಹುಟ್ಟಿದ ಒಂದು ಹಟ್ಟಿಯ ಪ್ರತಿಕೃತಿ. ಹೆರಡ್‌ ವಂಶಸ್ಥ ಕ್ವಿರಿನ್‌ ಎಂಬ ಅರಸ ಯಹೂದ್ಯರ ಜನಗಣತಿಗಾಗಿ ಕರೆ ಕೊಡುತ್ತಾನೆ. ಜನಗಣತಿ ಕಾರ್ಯಕ್ಕಾಗಿ ನಸ್ರತ್‌ನಿಂದ ಬೆತ್ಲೆಹೆಮ್‌ಗೆ ಬಂದಿದ್ದ
ಮರಿಯಮ್ಮ ತುಂಬು ಗರ್ಭಿಣಿ. ರಾತ್ರಿ ಪ್ರಸವ ನೋವು ಕಾಣಿಸಿಕೊಳ್ಳುತ್ತದೆ. ಜಾಗ ಸಿಗದೇ ಬಳಿಯಲ್ಲೇ ಇದ್ದ ಹಟ್ಟಿಯಲ್ಲಿ ಏಸುಕ್ರಿಸ್ತನ ಜನನವಾಗುತ್ತದೆ.

ಬಡವರಿಗಾಗಿ, ದೀನ ದಲಿತರಿಗಾಗಿ ಏಸು ಹುಟ್ಟುತ್ತಾನೆ ಎನ್ನುವುದೇ ಇದರ ಸಂದೇಶ. ಬಡತನದ ಪ್ರತೀಕದಂತಿರುವ
ದನದ ಹಟ್ಟಿಯನ್ನು ಪುಣ್ಯಭೂಮಿಯಾಗಿ ಪರಿವರ್ತಿಸುತ್ತಾನೆ. ಸ್ಥಳೀಯ ಕುರಿಗಾಹಿಗಳಿಗೆ, ಪಾಪ ವಿಮೋಚನೆಗಾಗಿ ಅವತಾರ ಪುರುಷ ಜನಿಸಿದ್ದಾನೆ ಎಂದು ದೇವದೂತರು ಪ್ರಥಮ ಸಂದೇಶ ನೀಡುತ್ತಾರೆ. ಸ್ವಲ್ಪ ಹೊತ್ತಿನಲ್ಲಿ ಏಸುಕ್ರಿಸ್ತನನ್ನು ಹುಡುಕಿಕೊಂಡು ಜ್ಯೋತಿಷಿಗಳು ಆಗಮಿಸುತ್ತಾರೆ. ಇವರಿಗೆ ನಕ್ಷತ್ರವೊಂದು ದಾರಿ ತೋರಿಸಿತು ಎಂದು ನಂಬಲಾಗಿದೆ. ಇದರ ಸಂಕೇತವಾಗಿ ಗೊದಲಿಯ ಮುಂಭಾಗದಲ್ಲಿ ನಕ್ಷತ್ರವನ್ನು ಇಡಲಾಗಿದೆ.

ಕ್ರಿಸ್ಮಸ್‌ ಹಬ್ಬಕ್ಕೆ ಕೆಲವು ದಿನಗಳ ಮುಂಚಿತವಾಗಿ ಗೊದಲಿ ನಿರ್ಮಾಣಕ್ಕೆ ಮುಂದಾಗುತ್ತಾರೆ. ಬಡವರ ಚಿತ್ರಣವನ್ನೇ ಹೋಲುವ ಮಾದರಿಯನ್ನು ತುಂಬಾ ಅಚ್ಚುಕಟ್ಟಾಗಿ ರೂಪಿಸಲಾಗುತ್ತದೆ. ಮಾತ್ರವಲ್ಲ ಬೆತ್ಲೆಹೆಮ್‌ನ ನೈಸರ್ಗಿಕ ಪರಿಸರವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿ ನಡೆಯುತ್ತದೆ. ಜೋರ್ದಾನ್‌ ನದಿ, ದನದ ಹಟ್ಟಿ, ಏಸು ಕ್ರಿಸ್ತ ಹಾಗೂ ಹೆತ್ತವರ ಮೂರ್ತಿ, ಸ್ಥಳೀಯವಾಗಿ ಕುರಿಗಾಹಿಗಳು ಮತ್ತು ಕುರಿ, ನಕ್ಷತ್ರ, ಪೈರು, ಮನೆ, ಕಲ್ಲು-ದಿಣ್ಣೆಗಳು, ಬೆಟ್ಟ, ಮರಳುಗಾಡು, ಒಂಟೆಗಳು ಮಾತ್ರವಲ್ಲ ಜನನದ ವಿವಿಧ ಚಿತ್ರಗಳನ್ನು ಇದರಲ್ಲಿ ಕಾಣಬಹುದು.

Advertisement

Udayavani is now on Telegram. Click here to join our channel and stay updated with the latest news.

Next