ಮುಂಬಯಿ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಪೂರ್ವಭಾವಿಯಾಗಿ ಅಭ್ಯಾಸ ಪಂದ್ಯವೊಂದು ಸೋಮವಾರ ಮುಂಬಯಿಯ “ವಾಂಖೇಡೆ ಸ್ಟೇಡಿಯಂ’ನಲ್ಲಿ ನಡೆಯಲಿದೆ. ಇದರಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿರುವ ತಂಡ ಮಂಡಳಿ ಅಧ್ಯಕ್ಷರ ಬಳಗ. ಆತಿಥೇಯ ತಂಡವನ್ನು ಸ್ಮತಿ ಮಂಧನಾ ಮುನ್ನಡೆಸಲಿದ್ದಾರೆ.
ಎಡಗೈ ಆರಂಭಕಾರ್ತಿ ಮಂಧನಾ ಇತ್ತೀಚೆಗಷ್ಟೇ ನ್ಯೂಜಿಲ್ಯಾಂಡ್‌ನಲ್ಲಿ ಮುಗಿದ 3 ಪಂದ್ಯಗಳ ಏಕದಿನ ಸರಣಿಯಲ್ಲಿ 196 ರನ್ ಪೇರಿಸಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದರು. ಜತೆಗೆ ಮುಂಬಯಿಯವರೇ ಆದ ಯುವ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಕೂಡ ಗಮನ ಸೆಳೆದಿದ್ದರು. ಆದರೆ ಉಳಿದ ಆಟಗಾರ್ತಿಯರು ರನ್ ಗಳಿಸಲು ವಿಫಲರಾದ್ದರಿಂದ ಭಾರತ ವೈಟ್‌ವಾಶ್ ಅನುಭವಿಸಬೇಕಾಯಿತು. ಇವರೆಲ್ಲ ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಮಿಂಚಬೇಕಾದ ಅಗತ್ಯವಿದೆ. ಆದರೆ ಅಭ್ಯಾಸ ಪಂದ್ಯದಲ್ಲಿ ಮಂಧನಾ ಹೊರತುಪಡಿಸಿ ಉಳಿದ ಪ್ರಮುಖ ಆಟಗಾರ್ತಿಯರ್ಯಾರೂ ಆಡುತ್ತಿಲ್ಲ.
ಇಂಗ್ಲೆಂಡ್ ಬಲಿಷ್ಠ ತಂಡವಾಗಿದ್ದು ಟಾಮಿ ಬೇಮಂಟ್, ಹೀತರ್ ನೈಟ್, ಡ್ಯಾನಿ ವೈಟ್ ಮೊದಲಾದ ಸ್ಟಾರ್ ಆಟಗಾರ್ತಿಯರನ್ನು ಹೊಂದಿದೆ.
ಸರಣಿಯ ಏಕದಿನ ಪಂದ್ಯಗಳು ಫೆ. 22, 23 ಮತ್ತು 28ರಂದು ವಾಂಖೇಡೆಯಲ್ಲೇ ನಡೆಯಲಿವೆ.
ಮಂಡಳಿ ಅಧ್ಯಕ್ಷರ ಇಲೆವೆನ್: ಸ್ಮತಿ ಮಂಧನಾ (ನಾಯಕಿ), ವೇದಾ ಕೃಷ್ಣಮೂರ್ತಿ, ದೇವಿಕಾ ವೈದ್ಯ, ಎಸ್. ಮೇಘನಾ, ಭಾರತಿ ಫುಲ್ಮಾಲಿ, ಕೋಮಲಾ ಜಂಜಾದ್, ಆರ್. ಕಲ್ಪನಾ, ಪ್ರಿಯಾ ಪೂನಿಯ, ಹಲೀìನ್ ಡಿಯೋಲ್, ರೀಮಾಲಕ್ಷ್ಮೀ ಎಕ್ಕಾ, ಮನಾಲಿ ದಕ್ಷಿಣಿ, ಮಿನ್ನು ಮನಿ, ತನುಜಾ ಕನ್ವರ್.