ದುಬೈ: ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಹಿಳಾ ಬ್ಯಾಟರ್ ಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಏಕದಿನ ರ್ಯಾಂಕಿಂಗ್ ನಲ್ಲಿ ಅಗ್ರ 10 ರೊಳಗೆ ಮರಳಿದ್ದಾರೆ.
ಹರ್ಮನ್‌ಪ್ರೀತ್ ಇತ್ತೀಚೆಗಷ್ಟೇ ಟಾಪ್ 10 ರಿಂದ ಹೊರಬಿದಿದ್ದರು. ಅ. 29 ರಂದು ಅಹಮದಾಬಾದ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಅರ್ಧಶತಕದ ನಂತರ ಒಂಬತ್ತನೇ ಸ್ಥಾನಕ್ಕೆ ಮರಳಿದರು.
ಹರ್ಮನ್‌ಪ್ರೀತ್ ಕೌರ್ 63 ಎಸೆತಗಳಲ್ಲಿ ಅಜೇಯ 59 ರನ್ ಗಳಿಸಿದ ನಂತರ ಮೂರು ಸ್ಥಾನಗಳನ್ನು ಜಿಗಿದಿದ್ದಾರೆ. ಸ್ಮೃತಿ ಮಂಧಾನ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇಂಗ್ಲೆಂಡ್ ನ ನ್ಯಾಟ್-ಸ್ಕಿವರ್ ಬ್ರಂಟ್ ಮೊದಲ ಸ್ಥಾನದಲ್ಲಿದ್ದಾರೆ.
ಸ್ಮೃತಿ ಮಂಧಾನ ಅವರು ಅಗ್ರ ಶ್ರೇಯಾಂಕದ ಸ್ಕಿವರ್-ಬ್ರಂಟ್ ಗಿಂತ 32 ರೇಟಿಂಗ್ ಪಾಯಿಂಟ್ ಗಳಿಂದ ಹಿಂದಿದ್ದಾರೆ. ಮೂರನೇ ಪಂದ್ಯದ ಶತಕದ ನಂತರ ಸ್ಮೃತಿ 23 ರೇಟಿಂಗ್ ಪಾಯಿಂಟ್‌ಗಳನ್ನು ಗಳಿಸಿದರು.
ವೃತ್ತಿಜೀವನದ ಅತ್ಯಧಿಕ 687 ರೇಟಿಂಗ್ ಪಾಯಿಂಟ್ ಗಳೊಂದಿಗೆ ಬೌಲರ್ ಗಳಲ್ಲಿ ಎರಡನೇ ಸ್ಥಾನದಲ್ಲಿದ್ದ ದೀಪ್ತಿ ಶರ್ಮಾ ಇದೀಗ 703 ರೇಟಿಂಗ್ ಪಾಯಿಂಟ್ ಗಳಿಗೆ ಜಿಗಿದಿದ್ದಾರೆ.