ಪುಣೆ: ಆಸ್ಟ್ರೇಲಿಯಾದ ಫಿಲಿಪ್ ಹ್ಯೂಸ್ ಅವರು ತಲೆಗೆ ಚೆಂಡು ಬಡಿದು ಸಾವನ್ನಪ್ಪಿ ಹತ್ತು ವರ್ಷವಾದ ಸಮಯದಲ್ಲಿ ಕ್ರಿಕೆಟ್ ಲೋಕದಲ್ಲಿ ಮತ್ತೊಂದು ಬೇಸರದ ಘಟನೆ ನಡೆದಿದೆ. ಮಹಾರಾಷ್ಟ್ರದ ಪುಣೆಯ ಗರ್ವಾರೆ ಸ್ಟೇಡಿಯಂನಲ್ಲಿ ಪಂದ್ಯದ ವೇಳೆ 35 ವರ್ಷದ ಆಟಗಾರನೊಬ್ಬರು ಹೃದಯಾಘಾತದಿಂದ ಅಸುನೀಗಿದ್ದಾರೆ.
ಇಮ್ರಾನ್ ಪಟೇಲ್ ಎಂಬ ಆಟಗಾರ, ಆರಂಭಿಕರಾಗಿ ಬ್ಯಾಟಿಂಗ್ ಗೆ ಬಂದರು. ಪಿಚ್‌ನಲ್ಲಿ ಸ್ವಲ್ಪ ಸಮಯ ಕಳೆದ ನಂತರ ಎದೆ ಮತ್ತು ತೋಳಿನ ನೋವಿನ ಬಗ್ಗೆ ಅಂಪೈರ್ ಗೆ ತಿಳಿಸಿದರು. ಆದರೆ, ಪೆವಿಲಿಯನ್ ಗೆ ಹಿಂತಿರುಗುವಾಗ ಇಮ್ರಾನ್ ಕುಸಿದು ಬಿದ್ದರು.
ಪಂದ್ಯದ ನೇರಪ್ರಸಾರ ನಡೆದಿದ್ದು, ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಮ್ರಾನ್ ಕುಸಿದು ಬೀಳುತ್ತಿದ್ದಂತೆ ಮೈದಾನದಲ್ಲಿದ್ದ ಇತರ ಆಟಗಾರರು ಅವರತ್ತ ಧಾವಿಸಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಪರೀಕ್ಷಿಸಿದ ಬಳಿಕ ಇಮ್ರಾನ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಇಮ್ರಾನ್ ಅವರು ತುಂಬಾ ಆರೋಗ್ಯವಾಗಿದ್ದರು. ಅವರು ದೈಹಿಕವಾಗಿ ಸದೃಢರಾಗಿದ್ದರು, ಆದರೆ ಹೃದಯ ಸ್ತಂಭನವಾಗಿದೆ ಎಂಬುದು ಹಲವರಿಗೆ ಆಶ್ಚರ್ಯ ತಂದಿದೆ. ಆಲ್ ರೌಂಡರ್ ಆಗಿರುವ ಇಮ್ರಾನ್ ಪಂದ್ಯದುದ್ದಕ್ಕೂ ಆಕ್ಟೀವ್ ಇರುವ ಆಟಗಾರ.
“ಅವರು ಯಾವುದೇ ಆರೋಗ್ಯ ಸಮಸ್ಯೆ ಹೊಂದಿಲ್ಲ,” ಎಂದು ಪಂದ್ಯದ ಭಾಗವಾಗಿದ್ದ ಮತ್ತೊಬ್ಬ ಕ್ರಿಕೆಟಿಗ ನಸೀರ್ ಖಾನ್ ಹೇಳಿದ್ದಾರೆ. “ಅವರು ಉತ್ತಮ ದೈಹಿಕ ಸ್ಥಿತಿಯಲ್ಲಿದ್ದರು. ವಾಸ್ತವವಾಗಿ, ಅವರು ಆಲ್ರೌಂಡರ್ ಆಗಿದ್ದರು. ಅವರ ಆಟವನ್ನು ಪ್ರೀತಿಸಿದ ನಾವೆಲ್ಲರೂ ಇನ್ನೂ ಆಘಾತದಲ್ಲಿದ್ದೇವೆ” ಎಂದು ಹೇಳಿದ್ದಾರೆ.