Advertisement
ಮತ್ತೊಬ್ಬರ ಸ್ವಾತಂತ್ರ್ಯವನ್ನು ಗೌರವಿಸಿ ಬದುಕುವುದೇ ಮಾನವ ಹಕ್ಕುಗಳನ್ನು ಪಾಲನೆ ಮಾಡಿದಂತೆ. ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರವಾಗಿ ಜೀವಿಸುವ ಹಕ್ಕನ್ನು ಪಡೆದಿದ್ದು, ಅವುಗಳ ರಕ್ಷಣೆ ಮಾಡುವ ಕಾರಣಕ್ಕಾಗಿ ಡಿಸೆಂಬರ್ 10ರಂದು ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತಿದೆ. ʼಉತ್ತಮವಾಗಿ ಚೇತರಿಸಿಕೊಳ್ಳಿ; ಮಾನವ ಹಕ್ಕುಗಳಿಗಾಗಿ ನಿಂತುಕೊಳ್ಳಿ’ -ಇದು ಈ ಬಾರಿಯ ಧ್ಯೇಯ ವಾಕ್ಯವಾಗಿದೆ.
ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಘೋಷಿಸಲಾದ ಮಾನವ ಹಕ್ಕುಗಳನ್ನು 1948ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿತು. ಅಂದಿನಿಂದ ಡಿ. 10 ಅನ್ನು “ವಿಶ್ವ ಮಾನವ ಹಕ್ಕುಗಳ ದಿನ’ವಾಗಿ ಆಚರಿಸಲಾಗುತ್ತದೆ. 1950ರ ಡಿಸೆಂಬರ್ 4ರಂದು ಪ್ಯಾರಿಸ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 317ನೇ ಅಧಿವೇಶನದಲ್ಲಿ ಮಾನವ ಹಕ್ಕುಗಳ ದಿನವನ್ನು ಔಪಚಾರಿಕವಾಗಿ ಅಂಗೀಕರಿಸಲಾಯಿತು. ಇದು ಮಾನವ ಹಕ್ಕುಗಳ ಕುರಿತಾದ ಮೊದಲ ಜಾಗತಿಕ ನಿರ್ಣಯ. ಭಾರತ ಮತ್ತು ಮಾನವ ಹಕ್ಕುಗಳು
ವಿಶ್ವಸಂಸ್ಥೆ ಮಾನವ ಹಕ್ಕುಗಳನ್ನು ಘೋಷಿಸಿದ ಸಂದರ್ಭ ಭಾರತದಲ್ಲಿ ಸಂವಿಧಾನ ರಚನಾ ಪ್ರಕ್ರಿಯೆ ನಡೆಯುತ್ತಿತ್ತು. ವಿಶ್ವಸಂಸ್ಥೆಯ ಈ ನಿರ್ಧಾರದಿಂದ ಪ್ರೇರಣೆ ಪಡೆದು ದೇಶದ ಸಂವಿಧಾನದ ಪ್ರಸ್ತಾವನೆ ಸಹಿತ, ಅನುಚ್ಛೇದದಲ್ಲಿಯೂ ಮಾನವ ಹಕ್ಕುಗಳ ಬಗ್ಗೆ ಉಲ್ಲೇಖೀಸಲಾಯಿತು. ಭಾರತ ಸಂವಿಧಾನದ ಅನುಚ್ಛೇದ 32ರ ಅನುಸಾರ ಮಾನವ ಹಕ್ಕುಗಳ ರಕ್ಷಣೆ ಹಾಗೂ ಅನುಚ್ಛೇದ 226ರ ಪ್ರಕಾರ ಜಾರಿಗೊಳಿಸುವ ಜವಾಬ್ದಾರಿಯನ್ನು ನ್ಯಾಯಾಂಗಕ್ಕೆ ವಹಿಸಲಾಗಿದೆ.
Related Articles
Advertisement
ಬದುಕುವ ಹಕ್ಕು ಎಲ್ಲರಿಗೂ ಇದೆಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಆಹಾರ, ವಸತಿ ಮತ್ತು ಬಟ್ಟೆ. ಇವುಗಳಿಲ್ಲದೆ ಮನುಷ್ಯನ ಜೀವನವನ್ನು ಊಹಿಸಲೂ ಅಸಾಧ್ಯ. ಈ ಮೂಲ ಸವಲತ್ತುಗಳನ್ನು ಪಡೆಯುವುದು ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಮನುಷ್ಯನ ಈ ಮೂಲಭೂತ ಹಕ್ಕುಗಳನ್ನು ದಮನಿಸುವ ಪ್ರಯತ್ನಗಳು ನಡೆಯುತ್ತವೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇತರರ ಬದುಕಿನ ಹಕ್ಕನ್ನು ಕಸಿಯುವುದು, ಹಿಂಸೆ ನೀಡುವುದು.. ಮೊದಲಾದವುಗಳು ಇದರ ವ್ಯಾಪ್ತಿಯೊಳಗೆ ಬರುತ್ತವೆ. ನಾವು ಪರರ ಸ್ವಾತಂತ್ರ್ಯವನ್ನು ಕೂಡ ಗೌರವಿಸಬೇಕಿದೆ. ಮಾನವ ಹಕ್ಕುಗಳು ಯಾವುವು?
ಮಾನವ ಹಕ್ಕುಗಳ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಮಾನವ ಹಕ್ಕುಗಳ ದಿನವನ್ನು ಘೋಷಿಸಲಾಯಿತು. ಈ ದಿನದಂದು ವ್ಯಕ್ತಿಯ ಜೀವನ, ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆಗೆ ಸಂಬಂಧಿಸಿದ ಹಕ್ಕುಗಳ ಬಗೆಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಜೀವಿಸುವುದು, ವಾಕ್ ಸ್ವಾತಂತ್ರ್ಯ, ಆಹಾರ, ಶಿಕ್ಷಣ, ಸಾಮಾಜಿಕ ಭದ್ರತೆ, ಸಂಘಟನೆ, ರಾಷ್ಟ್ರೀಯತೆ, ರಕ್ಷಣೆ, ಆರೋಗ್ಯ, ಧಾರ್ಮಿಕ ಸ್ವಾತಂತ್ರ್ಯದ ಜತೆಗೆ ದೌರ್ಜನ್ಯದ ವಿರುದ್ಧ ದನಿ ಎತ್ತುವ ಹಕ್ಕುಗಳು ಮಾನವ ಹಕ್ಕುಗಳ ವ್ಯಾಪ್ತಿಯಲ್ಲಿ ಬರುತ್ತವೆ.