Advertisement

ಭಾರತಕ್ಕೆ ಮತ್ತೂಂದು ಗೆಲುವಿನ ನಿರೀಕ್ಷೆ

06:00 AM Feb 04, 2018 | Team Udayavani |

ಸೆಂಚುರಿಯನ್‌: ಭಾರತ-ದ.ಆಫ್ರಿಕಾ ಎರಡನೇ ಏಕದಿನ ಪಂದ್ಯ ಭಾನುವಾರ ಸೆಂಚುರಿಯನ್‌ನಲ್ಲಿ ನಡೆಯಲಿದೆ.
ಮೊದಲ ಪಂದ್ಯದಲ್ಲಿ ಗೆದ್ದ ಭಾರತವೀಗ ಗೆಲುವಿನ ಅಮಲಿನಲ್ಲಿದೆ. ಆಫ್ರಿಕಾಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹರಿಣಗಳ ತಂಡದಲ್ಲಿನ ಪ್ರಮುಖರ ಗಾಯಾಳುಗಳ ಪಟ್ಟಿಯಲ್ಲೀಗ ಏರಿಕೆಯಾಗಿದೆ. ಇದು ಹರಿಣಗಳ ಸಂಕಟಕ್ಕೆ ಕಾರಣವಾಗಿದೆ.

Advertisement

ಪ್ಲೆಸಿಸ್‌ ಔಟ್‌, ಮಾಕ್ರìಮ್‌ ನಾಯಕ: ನಾಯಕ ಡು ಪ್ಲೆಸಿಸ್‌ಗೆ ಬೆರಳು ಗಾಯಕ್ಕೆ ತುತ್ತಾಗಿ ಪೂರ್ತಿ ಸರಣಿಯಿಂದ ಹೊರ ಬಿದ್ದಿದ್ದಾರೆ, ಜೊತೆಗೆ ಡಿವಿಲಿಯರ್ಸ್‌ ಕೂಡ ಇಲ್ಲ, ಆಫ್ರಿಕಾ ಸಂಕಷ್ಟಗಳ ಸರಮಾಲೆಗೆ ಸಿಲುಕಿದೆ. ಮೊದಲ ಏಕದಿನ ಪಂದ್ಯದ ವೇಳೆ ನಾಯಕ ಪ್ಲೆಸಿಸ್‌ ಗಾಯಗೊಂಡಿದ್ದರು. ಹೀಗಿದ್ದರೂ ಪಂದ್ಯ ಪೂರ್ಣಗೊಳಿಸಿದರು. ಆದರೆ ಪಂದ್ಯದ ಬಳಿಕ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಂಭೀರ ಗಾಯಗೊಂಡಿರುವುದು ತಿಳಿದು ಬಂದಿದೆ. ಮುಂದಿನ ಮೂರು ವಾರ ವಿಶ್ರಾಂತಿ ಪಡೆದುಕೊಳ್ಳಬೇಕಿದೆ. ಇವರು ಏಕದಿನದ ಜತೆಗೆ ಟಿ20 ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ. ಎಬಿಡಿ ವಿಲಿಯರ್ಸ್‌ ಟೆಸ್ಟ್‌ ಪಂದ್ಯದ ವೇಳೆ ಗಾಯಗೊಂಡಿದ್ದರು. ಹೀಗಾಗಿ ಮೊದಲ 3 ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಅಗ್ರ ಆಟಗಾರರ ಅನುಪಸ್ಥಿತಿಯಲ್ಲಿ 23 ವರ್ಷದ ಐಡೆನ್‌ ಮಾಕ್ರìಮ್‌ ಆಫ್ರಿಕಾ ತಂಡವನ್ನು ಮುಂದಿನ ಪಂದ್ಯಗಳಲ್ಲಿ ಮುನ್ನಡೆಸಲಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅಗ್ರಸ್ಥಾನದಲ್ಲಿದೆ ಭಾರತ ತಂಡ: ಭಾರತ ಐಸಿಸಿ ಏಕದಿನ ತಂಡ ಶ್ರೇಯಾಂಕದಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿದೆ. ಮೊದಲ ಏಕದಿನ ಪಂದ್ಯದಲ್ಲಿ ಆಫ್ರಿಕಾಕ್ಕೆ ಸೋಲುಣಿಸಿದ ಬೆನ್ನಲ್ಲೇ ಭಾರತ ತಂಡ ಅಗ್ರಸ್ಥಾನಕ್ಕೆ ಏರಿದೆ. ಭಾರತ 2ನೇ ಏಕದಿನ ಪಂದ್ಯದಲ್ಲೂ ಗೆದ್ದರೆ ಆತಿಥೇಯ ದಕ್ಷಿಣ ಆಫ್ರಿಕಾ ಅಗ್ರಸ್ಥಾನ ಕಳೆದುಕೊಳ್ಳಲಿದೆ.

ಹಳಿಗೆ ಬಂದಿದೆ ಕೊಹ್ಲಿ ಪಡೆ ಬ್ಯಾಟಿಂಗ್‌: 3ನೇ ಟೆಸ್ಟ್‌ ಪಂದ್ಯದಲ್ಲಿ ಆಫ್ರಿಕಾವನ್ನು ಚಳಿ ಬಿಡಿಸಿದ ಭಾರತ ಮೊದಲ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಹರಿಣಗಳಲ್ಲಿ ಆತಂಕ ಮೂಡಿಸಿದೆ. ಟೆಸ್ಟ್‌, ಏಕದಿನ ಎರಡನ್ನು ನೋಡುವುದಾದರೆ ಆಫ್ರಿಕಾಕ್ಕೆ ಸತತ ಎರಡನೇ ಸೋಲು. ಇದೀಗ ಇನ್ನೊಂದು ಆತಂಕದಲ್ಲಿ ಅದು ಕಣಕ್ಕೆ ಇಳಿಯುತ್ತಿದೆ. ರೋಹಿತ್‌ ಮೊದಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಧವನ್‌ ಕೂಡ ರನೌಟ್‌ ಆಗಿ ನಿರಾಸೆ ಮೂಡಿಸಿದರು. ವಿರಾಟ್‌ ಕೊಹ್ಲಿ ಶತಕ ಸಿಡಿಸಿ ವಿದೇಶಿ ಪಿಚ್‌ನಲ್ಲಿ ಈಗ ಫಾರ್ಮ್ ಕಂಡುಕೊಂಡ ಸೂಚನೆ ನೀಡಿದ್ದಾರೆ. ರಹಾನೆ ಕೂಡ ಕೊಹ್ಲಿ ಜತೆ 3ನೇ ವಿಕೆಟ್‌ಗೆ ಅದ್ಭುತ ಜತೆಯಾಟ ನಿರ್ವಹಿಸಿದ್ದಾರೆ. ಬೌಲಿಂಗ್‌ನಲ್ಲಿ ಸ್ಪಿನ್ನರ್‌ ಕುಲದೀಪ್‌ ಯಾದವ್‌ 34ಕ್ಕೆ 3 ವಿಕೆಟ್‌ ಕಬಳಿಸಿದರೆ ಮತ್ತೋರ್ವ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ವಿಕೆಟ್‌ ಕಬಳಿಸಿ ಭರವಸೆ ಮೂಡಿಸಿದ್ದಾರೆ. ಮತ್ತೂಂದು ಕಡೆ ವೇಗಿಗಳಾದ ಬುಮ್ರಾ, ಹಾರ್ದಿಕ್‌ ಪಾಂಡ್ಯ ಭುವನೇಶ್ವರ್‌ ಪರಿಣಾಮಕಾರಿಯಾಗಿ ಬೌಲಿಂಗ್‌ ಪ್ರದರ್ಶಿಸುತ್ತಿದ್ದಾರೆ.

ತಿರುಗೇಟು ನೀಡುತ್ತಾ ಆಫ್ರಿಕಾ?: ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಡು ಪ್ಲೆಸಿಸ್‌ ಗಾಯದಿಂದ ತಂಡಕ್ಕೆ ಲಭ್ಯರಿಲ್ಲ. ಇವರು ಶತಕ ಸಿಡಿಸಿದ್ದರೂ ತಂಡ ಗೆದ್ದಿರಲಿಲ್ಲ. ಉಳಿದ ಬ್ಯಾಟ್ಸ್‌ಮನ್‌ಗಳು ಕೂಡ ಮಿಂಚಿನ ಪ್ರದರ್ಶನ ನೀಡಿರಲಿಲ್ಲ. ಕುಕ್‌, ಆಮ್ಲ ಆರಂಭ ಉತ್ತಮವಾಗಿರಲಿಲ್ಲ. ಮಾಕ್ರìಮ್‌, ಡುಮಿನಿ ಹಾಗೂ ಡೇವಿಡ್‌ ಮಿಲ್ಲರ್‌ ಕೂಡ ಮಧ್ಯಮ ಕ್ರಮಾಂಕದಲ್ಲಿ ಬಾರೀ ಹಿನ್ನಡೆ ಅನುಭವಿಸಿದ್ದರು. ಬೌಲಿಂಗ್‌ನಲ್ಲಿ ಪೆಹ್ಲುಕ್ವಾಯೊ ಸ್ವಲ್ಪ ಮಟ್ಟಿನ ಯಶಸ್ಸು ಸಾಧಿಸಿದ್ದಾರೆ. ಮಾರ್ನೆ ಮಾರ್ಕೆಲ್‌, ಕಾಗಿಸೊ ರಬಾಡ, ಮಾರಿಸ್‌, ಇಮ್ರಾನ್‌ ತಾಹಿರ್‌ ಬೌಲಿಂಗ್‌ನಲ್ಲಿ ಮಿಂಚದಿರುವುದು ತಲೆ ನೋವು ತಂದಿದೆ.

Advertisement

ಮುಖಾಮುಖೀ
ಒಟ್ಟು ಪಂದ್ಯಗಳು    78
ಭಾರತದ ಗೆಲುವು    30
ಆಫ್ರಿಕಾ ಗೆಲುವು        45
ರದ್ದು    3

ಭಾರತದ ಬಲ:
ಬೌಲಿಂಗ್‌ ಪಡೆ ಚುರುಕಾಗಿರುವುದು, ಕೊಹ್ಲಿಗೆ ಫಾರ್ಮ್ಗೆ ಮರಳಿರುವುದು. ಮೊದಲ ಏಕದಿನ ಗೆದ್ದಿರುವುದು
ದೌರ್ಬಲ್ಯ:
ವಿದೇಶಿ ಪಿಚ್‌ನಲ್ಲಿ ರನ್‌ಗಳಿಸಲು ತಿಣುಕಾಟ ನಡೆಸುತ್ತಿರುವ ಬ್ಯಾಟ್ಸ್‌ಮನ್‌ಗಳು

ದ.ಆಫ್ರಿಕಾ ಬಲ:
ತವರಿನ ಪಿಚ್‌ನಲ್ಲಿ ಆಡುತ್ತಿರುವುದು, ಬೌನ್ಸರ್‌ ಮೂಲಕ ಎದುರಾಳಿಗೆ ನಡುಕ ಹುಟ್ಟಿಸಬಲ್ಲ ವಿಶ್ವಶ್ರೇಷ್ಠ ಬೌಲರ್‌ಗಳಿರುವುದು
ದೌರ್ಬಲ್ಯ:
ನಾಯಕ ಪ್ಲೆಸಿಸ್‌ ಇಡೀ ಸರಣಿಯಿಂದ ಹೊರಕ್ಕೆ, ಡಿವಿಲಿಯರ್ಸ್‌ ಕೂಡ ಇಲ್ಲ. ನಾಯಕನ ಆಯ್ಕೆ ಗೊಂದಲದಲ್ಲಿರುವುದು

ಅಂಕಣ ಹೇಗಿದೆ?
ವೇಗಿಗಳಿಗೆ ನೆರವಾಗಬಲ್ಲ ಪಿಚ್‌ನಲ್ಲಿ ರನ್‌ಗಳಿಸುವುದು ಕಷ್ಟವಾಗಬಹುದು. ಬ್ಯಾಟ್ಸ್‌ಮನ್‌ಗಳಿಗೆ ವೇಗಿಗಳು ಕಬ್ಬಿಣದ ಕಡಲೆಯಾಗುವ ಸಾಧ್ಯತೆಯೇ ಹೆಚ್ಚು.

ಆರಂಭ: ಮಧ್ಯಾಹ್ನ 1ಕ್ಕೆ
ಸ್ಥಳ: ಸೆಂಚುರಿಯನ್‌
ನೇರ ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್ 1

Advertisement

Udayavani is now on Telegram. Click here to join our channel and stay updated with the latest news.

Next