ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ದ ಟಿ20 ಸರಣಿಯಲ್ಲಿ ಭಾರತ ಗೆಲುವು ಸಾಧಿಸಿದೆ. ನಾಲ್ಕು ಪಂದ್ಯಗಳ ಟಿ20 ಸರಣಿಯನ್ನು ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ 3-1 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಮತ್ತೊಂದು ಸರಣಿಯನ್ನು ವಶ ಪಡಿಸಿಕೊಂಡಿದೆ.
ಶುಕ್ರವಾರ (ನ.15) ಸರಣಿಯ ಅಂತಿಮ ಪಂದ್ಯವಾಡಿದ ಭಾರತವು ದಕ್ಷಿಣ ಆಫ್ರಿಕಾ ತಂಡದೆದುರು ಅಧಿಕಾರಯುತ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತವು ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಶತಕದ ನೆರವಿನಿಂದ ಕೇವಲ ಒಂದು ವಿಕೆಟ್ ನಷ್ಟಕ್ಕೆ 283 ರನ್ ಪೇರಿಸಿದರೆ, ದಕ್ಷಿಣ ಆಫ್ರಿಕಾ ತಂಡವು ಕೇವಲ 148 ರನ್ ಮಾತ್ರ ಗಳಿಸಲು ಶಕ್ತವಾಯಿತು.
ಇದು ಈ ಕ್ಯಾಲೆಂಡರ್ ವರ್ಷದ ಭಾರತದ ಅಂತಿಮ ಟಿ20ಐ ಪಂದ್ಯವಾಗಿತ್ತು, ಟಿ20 ಕ್ರಿಕೆಟ್ ನಲ್ಲಿ ಈ ವರ್ಷ ತಂಡಕ್ಕೆ ನಂಬಲಾಗದ ಯಶಸ್ಸನ್ನು ತಂದುಕೊಟ್ಟಿದೆ. ಭಾರತವು ಅಫ್ಘಾನಿಸ್ತಾನದ ವಿರುದ್ಧ ವಿಜಯದೊಂದಿಗೆ ವರ್ಷವನ್ನು ಪ್ರಾರಂಭಿಸಿ ನಂತರ ಜೂನ್ ತಿಂಗಳಲ್ಲಿ ಟಿ20 ವಿಶ್ವಕಪ್ ಕೂಡಾ ಗೆದ್ದುಕೊಂಡಿತು.
ಈ ಅವಧಿಯಲ್ಲಿ ಯುವ ಆಟಗಾರರು ಅವಕಾಶ ಪಡೆದು ಅದ್ಭುತ ಪ್ರದರ್ಶನಗಳನ್ನು ನೀಡಿದರು. ಇಡೀ ವರ್ಷದಲ್ಲಿ ಭಾರತ ಕೇವಲ ಎರಡು ಪಂದ್ಯಗಳನ್ನು ಮಾತ್ರ ಕಳೆದುಕೊಂಡಿತು. ಒಂದು ಜಿಂಬಾಬ್ವೆ ವಿರುದ್ಧ ಮತ್ತು ಇನ್ನೊಂದು ದಕ್ಷಿಣ ಆಫ್ರಿಕಾ ವಿರುದ್ಧ ಇತ್ತೀಚೆಗೆ ಮುಕ್ತಾಯಗೊಂಡ ಸರಣಿಯ ಎರಡನೇ ಪಂದ್ಯ.
ಭಾರತವು ಈ ವರ್ಷ ಒಟ್ಟು 26 ಟಿ20ಐ ಪಂದ್ಯಗಳನ್ನು ಆಡಿದೆ. ಅದರಲ್ಲಿ 24 ಪಂದ್ಯಗಳನ್ನು ಜಯಿಸಿದೆ. ಅಂದರೆ ಭಾರತದ ಜಯದ ಪ್ರತಿಶತ ಶೇ.92.7. ಇದು ದಾಖಲೆಯಾಗಿದೆ. 2021ರಲ್ಲಿ ಪಾಕಿಸ್ತಾನವು ಶೇ 76.9ರಷ್ಟು ಪಂದ್ಯಗಳನ್ನು ಗೆದ್ದುಕೊಂಡಿದ್ದು ದಾಖಲೆಯಾಗಿತ್ತು.
ಇದೇ ವೇಳೆ ಸೂರ್ಯಕುಮಾರ್ ಯಾದವ್ ಅವರ ಟಿ20ಯಲ್ಲಿ ನಾಯಕತ್ವ ವಹಿಸಿದ 17ನೇ ಪಂದ್ಯದಲ್ಲಿ 14 ಪಂದ್ಯ ಜಯಿಸಿದ್ದಾರೆ. ಅವರು ಶೇ.82ರಷ್ಟು ಫಲಿತಾಂಶ ಹೊಂದಿದ್ದಾರೆ.