Advertisement

ಇಂದೇ ಶ್ರೀರಾಮಾವತರಣ; ಅಯೋಧ್ಯಾಪುರಿಯ ನವಮಂದಿರದಲ್ಲಿ ಬಾಲರಾಮ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ

12:27 AM Jan 22, 2024 | Team Udayavani |

ಅಯೋಧ್ಯೆ: ಹಲವು ಶತಮಾನಗಳ ಕಾಯುವಿಕೆ, ತಪಸ್ಸಿಗೆ ಸೋಮವಾರ ಫ‌ಲ ಸಿಗಲಿದೆ. ಭವ್ಯವಾದ ಶ್ರೀರಾಮಮಂದಿರವು ರಾಮನ ಜನ್ಮಭೂಮಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿರುವ 51 ಇಂಚಿನ ಬಾಲರಾಮನ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ನೆರವೇರುವುದರೊಂದಿಗೆ ಮಂದಿರದ ಉದ್ಘಾಟನೆಯೂ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ 7 ಸಾವಿರ ಅತಿಥಿಗಳು ಈ ದಿವ್ಯ ಘಳಿಗೆಗೆ ಪ್ರತ್ಯಕ್ಷ ಸಾಕ್ಷಿಯಾಗಲಿದ್ದಾರೆ.

Advertisement

ಸೋಮವಾರ ಮುಂಜಾನೆ ಬ್ರಾಹ್ಮೀ ಮುಹೂರ್ತದಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಮಧ್ಯಾಹ್ನ 12.20ರಿಂದ 12.45ರ ಅಭಿಜಿನ್‌ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನ ವಿಧಿ ಮುಖ್ಯಹಂತಕ್ಕೆ ತಲುಪಲಿದೆ. ಈ ವೇಳೆ ಪ್ರಧಾನಿ ಮೋದಿ ಬಾಲರಾಮನ ವಿಗ್ರಹಕ್ಕೆ ನೇತ್ರೋನ್ಮಿಲನ (ಕಣ್ಣು ತೆರೆಸುವ ಕ್ರಿಯೆ) ಕ್ರಿಯೆಯನ್ನು ನಡೆಸಿಕೊಡಲಿದ್ದಾರೆ. ಅವರೊಂದಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌, ಆರೆಸ್ಸೆಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಮತ್ತು ಪ್ರಧಾನ ಅರ್ಚಕರು ಮಾತ್ರ ಗರ್ಭಗುಡಿಯಲ್ಲಿ ಇರಲಿದ್ದಾರೆ.

1 ಗಂಟೆಯಿಂದ ಮೋದಿ ಭಾಷಣ: ಪ್ರಾಣ ಪ್ರತಿಷ್ಠಾಪನ ವಿಧಿಗಳು ಮುಗಿದ ಅನಂತರ ಸಭಾ ಕಾರ್ಯಕ್ರಮಗಳು ಆರಂಭವಾಗಲಿವೆ. ಪ್ರಧಾನಿ ಮೋದಿಯವರು 7 ಸಾವಿರ ಅತಿಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಹಲವು ರಾಜ್ಯಗಳಲ್ಲಿ ರಜೆ ಘೋಷಣೆ: ದೇಶದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದೆ. ಬಿಜೆಡಿ ಆಡಳಿತದ ಒಡಿಶಾದಲ್ಲೂ ರಜೆ ನೀಡಲಾಗಿದೆ. ಕೇಂದ್ರ ಸರಕಾರ ತನ್ನ ಅಧೀನದ ಕಂಪೆನಿಗಳು, ಸಂಸ್ಥೆಗಳಿಗೆ ಅರ್ಧದಿನ ರಜೆ ನೀಡಿದೆ.
ಏನೇನು ನಡೆಯುತ್ತದೆ?
-ಸೋಮವಾರ ಬ್ರಾಹ್ಮಿ ಮುಹೂರ್ತದಿಂದಲೇ ಕಾರ್ಯಕ್ರಮಗಳು ಆರಂಭ
-ಪ್ರಾಣ ಪ್ರತಿಷ್ಠಾಪನೆಗೂ ಮುನ್ನ  ಧಾರ್ಮಿಕ ಕ್ರಿಯೆಯಾಗಿ ವಿಗ್ರಹ  ಶುದ್ಧೀಕರಣ ಪ್ರಕ್ರಿಯೆಗಳು.
-ಪ್ರಧಾನ ಪುರೋಹಿತರಿಂದ ವಿಗ್ರಹಕ್ಕೆ ಶ್ರೀರಾಮನ ಚೈತನ್ಯ ತುಂಬುವ ಕ್ರಿಯೆ ಆರಂಭ.
-ಬೆಳಗ್ಗೆ 10ರಿಂದಲೇ ವಿವಿಧ ರಾಜ್ಯಗಳಿಂದ ಆಗಮಿಸಿದ ಮಂಗಳ ವಾದ್ಯಗಳ ನಿನಾದ ಆರಂಭ
-ಮಧ್ಯಾಹ್ನ 12-20ರಿಂದ 12-45ರವರೆಗೆ ಅಭಿಜಿನ್‌ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನೆಯ ಮುಖ್ಯಹಂತ.
-ನೇತ್ರೋನ್ಮಿಲನ ಆರಂಭ. ಮಂತ್ರೋಚ್ಚಾರಣೆ ಸಹಿತ ಕಾಡಿಗೆ ಬಳಿದು, ಚಿನ್ನದ ಸೂಜಿಯಿಂದ ಕಣ್ಣುಗಳನ್ನು ತೆರೆಸುವ ವಿಧಿ.
-ಕನ್ನಡಿಯನ್ನು ವಿಗ್ರಹಕ್ಕೆ ಅಭಿಮುಖವಾಗಿ ಹಿಡಿದು, ಮೊದಲ ಬಾರಿ ದೇವತೆಯ ಪೂರ್ಣದರ್ಶನ.
-ಪ್ರಾಣ ಪ್ರತಿಷ್ಠಾಪನಾ ಅನಂತರದ ಪೂಜಾ ವಿಧಿಗಳ ಆರಂಭ.
-ಉದ್ಘಾಟನೆಯ ಬಳಿಕ ಸೇನಾ ಹೆಲಿಕಾಪ್ಟರ್‌ನಿಂದ ಮಂದಿರಕ್ಕೆ ಪುಷ್ಪವೃಷ್ಟಿ.

07 ದಿನಗಳು
ಶ್ರೀರಾಮಮಂದಿರ ಉದ್ಘಾಟನೆಯ ಒಟ್ಟು ಧಾರ್ಮಿಕ ಚಟುವಟಿಕೆಗಳು ನಡೆದ ದಿನಗಳ ಸಂಖ್ಯೆ. ಜ. 16ರಿಂದ ಆರಂಭವಾದ ಕಲಾಪಗಳು ಜ. 22ಕ್ಕೆ ಮುಕ್ತಾಯ.

05ಪ್ರಮುಖರು
ಪ್ರಾಣ ಪ್ರತಿಷ್ಠಾಪನೆ ವೇಳೆ ಗರ್ಭಗುಡಿಯಲ್ಲಿ ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್‌, ಪ್ರಧಾನ ಪುರೋಹಿತರು ಸೇರಿ ಒಟ್ಟು ಕೇವಲ ಐವರಿಗೆ ಪ್ರವೇಶ.
03 ತಂಡಗಳು
ಮಂದಿರ ಉದ್ಘಾಟನೆಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ದೇಶದ ಅಗ್ರ ಸಂತರು, ವಿದ್ವಾಂಸರ ಸಹಿತ ಮೂರು ಮುಖ್ಯ ತಂಡಗಳು ನಡೆಸಿಕೊಡಲಿವೆ.
7000ಅತಿಥಿಗಳು
ಸೋಮವಾರ 7 ಸಾವಿರ ಗಣ್ಯರು ಮಂದಿರ ಉದ್ಘಾಟನೆ ಯಲ್ಲಿ ಭಾಗವಹಿಸಲಿದ್ದಾರೆ. ಕ್ರಿಕೆಟಿಗರಾದ ಸಚಿನ್‌, ಕೊಹ್ಲಿ, ನಟ ಅಮಿತಾಭ್‌ ಬಚ್ಚನ್‌ ಅತಿಗಣ್ಯ ಆಹ್ವಾನಿತರಾಗಿದ್ದಾರೆ.
4000ಸಂತರು
ಉದ್ಘಾಟನೆಯಲ್ಲಿ ಪಾಲ್ಗೊಳ್ಳುವ ಗಣ್ಯ ಅತಿಥಿಗಳ ಪಟ್ಟಿಯಲ್ಲಿ ದೇಶದ 4 ಸಾವಿರ ಸಂತರೂ ಸೇರಿದ್ದಾರೆ. ಕರ್ನಾಟಕದ ಪ್ರಮುಖ ಸಂತರು ಈ ಪಟ್ಟಿಯಲ್ಲಿದ್ದಾರೆ.
55 ದೇಶಗಳು
ಅಮೆರಿಕ, ಫ್ರಾನ್ಸ್‌, ಇಂಗ್ಲೆಂಡ್‌, ಆಸ್ಟ್ರೇಲಿಯ, ಅರ್ಜೆಂಟೀನ ಸಹಿತ ಜಗತ್ತಿನ 55 ದೇಶಗಳಿಂದ 100 ಗಣ್ಯಾತಿಗಣ್ಯರು ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ.
13,000ಪೊಲೀಸರು
ಕಾರ್ಯಕ್ರಮದ ಭದ್ರತೆಗಾಗಿ ಉತ್ತರಪ್ರದೇಶ ಪೊಲೀಸರು, ಸೇನೆ, ವಿಪತ್ತು ನಿರ್ವಹಣ ದಳ ಸೇರಿದಂತೆ 13 ಸಾವಿರಕ್ಕೂ ಅಧಿಕ ಭದ್ರತಾ ಸಿಬಂದಿಯನ್ನು ನಿಯೋಜಿಸಲಾಗಿದೆ.
10,000ಸಿಸಿಟೀವಿ
24 ತಾಸು ಕೂಡ ಕಾರ್ಯನಿರ್ವಹಿಸುವ 10 ಸಾವಿರ ಸಿಸಿಟೀವಿಗಳನ್ನು, ಕಣ್ಗಾವಲಿಗಾಗಿ ಇಡೀ ಅಯೋಧ್ಯಾ ನಗರದಲ್ಲಿ ಅಳವಡಿಸಲಾಗಿದೆ. ಕಟ್ಟೆಚ್ಚರ ವಹಿಸಲಾಗಿದೆ.

24 ಲಕ್ಷ
ಉತ್ತರಪ್ರದೇಶ ರಾಜ್ಯದಲ್ಲಿರುವ ಅಯೋಧ್ಯಾ ಜಿಲ್ಲೆಯ ಒಟ್ಟು ಜನಸಂಖ್ಯೆ 24.70 ಲಕ್ಷ. ಅಯೋಧ್ಯಾ ನಗರದಲ್ಲೇ ಅಂದಾಜು 78 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ.
ಮಂದಿರ ಮೇಲೆದ್ದ ಹಾದಿ
2019, ನ.9: ದೀರ್ಘ‌ಕಾಲ ವಿಚಾರಣೆ ಬಳಿಕ, ಜಾಗದ ಒಡೆತನ ಶ್ರೀರಾಮನಿಗೆ ಸೇರುತ್ತದೆ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು.
2020, ಆ.5: ಪ್ರಧಾನಿ ಮೋದಿಯಿಂದ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ.
2021, ಜ.15: ದೇಶಾದ್ಯಂತ ಮಂದಿ ರಕ್ಕೆ ದೇಣಿಗೆ ಸಂಗ್ರಹ ಆರಂಭ.
2023, ಡಿ.31: ಮಂದಿರದ ನೆಲಮಹಡಿ, ಮೊದಲ ಅಂತಸ್ತು ನಿರ್ಮಾಣ ಪೂರ್ಣ
2024, ಜ.22: ಭವ್ಯ ಶ್ರೀರಾಮಮಂದಿರದ ಉದ್ಘಾಟನೆ
Advertisement

Udayavani is now on Telegram. Click here to join our channel and stay updated with the latest news.

Next