Advertisement
ಬೆಳ್ಳಂದೂರು ಕೆರೆ ನೊರೆ ಸಮಸ್ಯೆ ಉಂಟಾದಾಗೆಲ್ಲಾ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳಲ್ಲಿ ನಡುಕ ಹುಟ್ಟುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳಿಂದ ಯಾವುದೇ ನೆರವು ತಮಗೆ ಸಿಗುತ್ತಿಲ್ಲ. ಇದರಿಂದ ಕಂಗೆಟ್ಟ ಅಪಾರ್ಟ್‌ಮೆಂಟ್ ನಿವಾಸಿಗಳು, ಚುನಾವಣೆಯನ್ನು ಅಸ್ತ್ರವಾಗಿ ಬಳಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಅಡಿ ಒಗ್ಗಟ್ಟಾಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ನಿರ್ಧರಿಸಿದ್ದಾರೆ.
Related Articles
Advertisement
ಹಠಕ್ಕೆ ಬಿದ್ದ ಅಪಾರ್ಟ್‌ಮೆಂಟ್ ನಿವಾಸಿಗಳು: ಎಸ್‌ಟಿಪಿ ಸೇರಿದಂತೆ ಹಲವು ಸಮಸ್ಯೆಗಳನ್ನು ತೆಗೆದುಕೊಂಡು ಅನೇಕ ಬಾರಿ ಸ್ಥಳೀಯ ಕಾರ್ಪೋರೇಟರ್, ಶಾಸಕರ ಬಳಿ ಹೋಗಿದ್ದೇವೆ. ಆದರೆ, ಅವರೆಲ್ಲರಿಂದ “ನೀವು (ಅಪಾರ್ಟ್‌ಮೆಂಟ್ ನಿವಾಸಿಗಳು) ವೋಟು ಹಾಕುವುದೇ ಇಲ್ವಲ್ಲಾ’ ಎಂಬ ಉತ್ತರ ಬರುತ್ತಿತ್ತು. ಆಗ, ನಮ್ಮ ಮತದಾನದ ಹಕ್ಕಿನ ಬಗ್ಗೆ ಮನದಟ್ಟಾಯ್ತು.
ಇದೇ ಕಾರಣಕ್ಕೆ ಹಠಕ್ಕೆ ಬಿದ್ದು, ಮತದಾರರ ನೋಂದಣಿ ಮಾಡಿಸಿದ್ದೇವೆ. ಇದರ ಫಲವಾಗಿ ಸುಮಾರು 25 ಸಾವಿರಕ್ಕೂ ಅಧಿಕ ಮತದಾರರು ಸೇರ್ಪಡೆಯಾಗಿದ್ದಾರೆ. ತಮ್ಮ ಊರುಗಳಲ್ಲಿರುವ ಮತದಾರರ ಗುರುತಿನ ಚೀಟಿ ರದ್ದುಪಡಿಸಿ, ಬೆಂಗಳೂರಿನಲ್ಲಿ ನೋಂದಣಿ ಮಾಡಿಸಿದ್ದೇವೆ. ಅಲ್ಲದೆ, ಗರಿಷ್ಠ ಮತದಾನಕ್ಕೆ ಪಣತೊಟ್ಟಿದ್ದೇವೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಮತ ಚಲಾಯಿಸುವಂತೆ ಮನವಿ ಮಾಡಲಾಗುತ್ತಿದೆ.
ಅಪಾರ್ಟ್‌ಮೆಂಟ್‌ಗಳಲ್ಲಿ ಈ ಸಂಬಂಧದ ಹೋಲ್ಡಿಂಗ್ ಹಾಕಲಾಗಿದೆ. ವಾಯುವಿಹಾರಕ್ಕೆ ಸಿಕ್ಕಲ್ಲಿ ಮತ ಹಾಕುವಂತೆ ಕೋರುವುದು ಸೇರಿದಂತೆ ಹಲವು ರೀತಿಯ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪ್ರಸನ್ನ ಮಾಹಿತಿ ನೀಡಿದರು. ಸಾಮಾನ್ಯವಾಗಿ ಪ್ರತಿ ಚುನಾವಣೆಯಲ್ಲಿ ಈ ಅಪಾರ್ಟ್‌ಮೆಂಟ್ ನಿವಾಸಿಗಳ ಮತದಾನದ ಪ್ರಮಾಣ ಶೇ. 20ಕ್ಕಿಂತ ಕಡಿಮೆ ಇರುತ್ತದೆ. ಈ ಸಲ ಇದನ್ನು ಶೇ. 80ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದೂ ಅವರು ಹೇಳಿದರು.
ನಿರ್ಣಾಯಕ ಆಗುವ ಸಾಧ್ಯತೆ: ನಗರದಲ್ಲಿ 100ಕ್ಕೂ ಅಧಿಕ ಫ್ಲ್ಯಾಟ್‌ಗಳಿರುವ 4-5 ಸಾವಿರ ಅಪಾರ್ಟ್‌ಮೆಂಟ್‌ಗಳೂ ಸೇರಿ ಒಟ್ಟಾರೆ 10 ಸಾವಿರಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳಿದ್ದು, ಇದರಲ್ಲಿ ಸುಮಾರು ಎರಡು ಲಕ್ಷ ಮತದಾರರು ಇದ್ದಾರೆ. ಬೊಮ್ಮನಹಳ್ಳಿ, ಹೆಬ್ಟಾಳ, ಸಿ.ವಿ. ರಾಮನ್‌ನಗರ, ಮಹದೇವಪುರ, ಬೆಂಗಳೂರು ದಕ್ಷಿಣ, ಬನ್ನೇರುಘಟ್ಟ ರಸ್ತೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಅಪಾರ್ಟ್‌ಮೆಂಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿವೆ.
ಅಲ್ಲೆಲ್ಲಾ ಅಂದುಕೊಂಡಂತೆ ಗರಿಷ್ಠ ಪ್ರಮಾಣದಲ್ಲಿ ಮತ ಚಲಾಯಿಸಿದರೆ, ಈ ಅಪಾರ್ಟ್‌ಮೆಂಟ್ ನಿವಾಸಿಗಳು ನಿರ್ಣಾಯಕ ಆಗುವ ಸಾಧ್ಯತೆ ಇದೆ ಎಂದು ಯುವ ಮತದಾರ ನೋಂದಣಿ ಮತ್ತು ಜಾಗೃತಿ ಅಭಿಯಾನ ಕಾರ್ಯಕರ್ತ ಡಿ.ವಿ. ಆನಂದ್ ಅಭಿಪ್ರಾಯಪಡುತ್ತಾರೆ. ಕಳೆದ ಚುನಾವಣೆಗಳಿಗೆ ಹೋಲಿಸಿದರೆ, ಅಪಾರ್ಟ್‌ಮೆಂಟ್ ನಿವಾಸಿಗಳಲ್ಲಿ ಈ ಬಾರಿ ಆಸಕ್ತಿ ಇದೆ. ಮತ ಚಲಾಯಿಸಲು ಅವರೆಲ್ಲಾ ಉತ್ಸುಕರಾಗಿದ್ದಾರೆ. ಸಾವಿರಾರು ಮತದಾರರನ್ನು ಸ್ವತಃ ನಾನೇ ನೋಂದಣಿ ಮಾಡಿಸಿದ್ದೇನೆ ಎಂದೂ ಆನಂದ್ ತಿಳಿಸುತ್ತಾರೆ.
ಬೇಡಿಕೆಗಳು: ಕೊಳಚೆನೀರು ಸಂಸ್ಕರಣಾ ಘಟಕಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು. ನೀರಿನ ಶುಲ್ಕ ಸಾಮಾನ್ಯವಾಗಿರಬೇಕು. ಘನತ್ಯಾಜ್ಯ ಸಂಗ್ರಹಕ್ಕೆ ಸೆಸ್ ಪಡೆಯಲಾಗುತ್ತಿದೆ. ಆದರೆ, ಅದಕ್ಕೆ ಪೂರಕ ಸೌಲಭ್ಯಗಳನ್ನು ಒದಗಿಸಿಲ್ಲ. ಇದನ್ನು ಪೂರೈಸಬೇಕು. ವಿನಾಕಾರಣ ಅಪಾರ್ಟ್‌ಮೆಂಟ್‌ಗಳನ್ನು ಟಾರ್ಗೆಟ್ ಮಾಡಬಾರದು.
-10 ಸಾವಿರ ನಗರದಲ್ಲಿರುವ ಅಂದಾಜು ಅಪಾರ್ಟ್‌ಮೆಂಟ್‌ಗಳು-2 ಲಕ್ಷ ಅಪಾರ್ಟ್‌ಮೆಂಟ್‌ಗಳಲ್ಲಿರುವ ಮತದಾರರು
-25 ಸಾವಿರ ಅಪಾರ್ಟ್‌ಮೆಂಟ್‌ಗಳಿಂದ ಹೊಸದಾಗಿ ಸೇರ್ಪಡೆಗೊಂಡ ಮತದಾರರು
-250 ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್‌ನಲ್ಲಿರುವ ಗ್ರೂಪ್‌ಗ್ಳು * ವಿಜಯಕುಮಾರ್ ಚಂದರಗಿ