ಹೈದರಾಬಾದ್: 2024ರ ಲೋಕಸಭೆ ಮತ್ತು ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಹೈದರಾಬಾದ್ ನಲ್ಲಿ ಜುಲೈ 2 ಮತ್ತು 3ರಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸುವ ಮೂಲಕ ಆಡಳಿತರೂಢ ಟಿಆರ್ ಎಸ್ ಗೆ ಸಡ್ಡು ಹೊಡೆಯಲು ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ:ಚಿತ್ರವಿಮರ್ಶೆ: ‘ವಿಂಡೋಸೀಟ್’ನಲ್ಲೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಜರ್ನಿ
ದೀರ್ಘಕಾಲದ ಕೋವಿಡ್ ನಿರ್ಬಂಧದ ನಂತರ ಬಿಜೆಪಿ ಹೈದರಾಬಾದ್ ನಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ನಡೆಸಲು ನಿರ್ಧರಿಸಿದೆ. ಇದರೊಂದಿಗೆ ಸಿಎಂ ಕೆ.ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷದ ವಿರುದ್ಧ ಬಹಿರಂಗ ಸಮರ ಸಾರಿದೆ.
ತೆಲಂಗಾಣದ ರಸ್ತೆಯುದ್ಧಕ್ಕೂ ಕೇಸರಿ ಪಕ್ಷದ ಬಾವುಟ, ಫ್ಲೆಕ್ಸ್ ರಾರಾಜಿಸುತ್ತಿದೆ. ಬೃಹತ್ ಹೋರ್ಡಿಂಗ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಫೋಟೋಗಳನ್ನು ಹಾಕಲಾಗಿದೆ.
ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಹಿರಿಯ ಮುಖಂಡರು ಹಾಗೂ 19 ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ. ಭಾನುವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ ನ ಪರೇಡ್ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿ ವಿವರಿಸಿದೆ.
ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ ಗೆ ಆಗಮಿಸಿದ್ದು, ಈ ಬಾರಿಯೂ ಮುಖ್ಯಮಂತ್ರಿ ಕೆಸಿಆರ್ ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಳ್ಳಲು ಆಗಮಿಸಿರಲಿಲ್ಲ. ಆದರೆ ರಾಷ್ಟ್ರಪತಿ ಚುನಾವಣೆಯ ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ನಾ ಅವರನ್ನು ವಿಮಾನ ನಿಲ್ದಾಣದಲ್ಲಿ ಕೆಸಿಆರ್ ಬರಮಾಡಿಕೊಂಡು ಬೃಹತ್ ಮೆರವಣಿಗೆ ಮೂಲಕ ಕರೆತರುವ ಮೂಲಕ ಬಲಪ್ರದರ್ಶನಕ್ಕೆ ಮುಂದಾಗಿರುವುದಾಗಿ ವರದಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಬೇಗಂಪೇಟ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎರಡು ಗಂಟೆ ಮೊದಲು ಯಶವಂತ್ ಸಿನ್ನಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಟಿಆರ್ ಎಸ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆಸಿಆರ್ ಹೂಗುಚ್ಛ ನೀಡಿ ಸ್ವಾಗತಿಸಿದ್ದರು.