Advertisement

ಮೆಟ್ರೋ 2ನೇ ಹಂತ ಪೂರ್ಣಗೊಳಿಸಲು 2023 ಡೆಡ್‌ಲೈನ್‌

11:15 AM Oct 27, 2018 | Team Udayavani |

ಬೆಂಗಳೂರು: ಸುರಂಗ ಮಾರ್ಗ ಹೊರತುಪಡಿಸಿ ಉಳಿದೆಲ್ಲ ಮೆಟ್ರೋ ಮಾರ್ಗಗಳೂ 2021ರ ಒಳಗೆ ಅಂತಿಮಗೊಳಿಸತಕ್ಕದ್ದು. ಒಟ್ಟಾರೆ ಇಡೀ 72.09 ಕಿ.ಮೀ. ಉದ್ದದ “ನಮ್ಮ ಮೆಟ್ರೋ’ ಎರಡನೇ ಹಂತ 2023ಕ್ಕೆ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಬೇಕು. ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ಕ್ಕೆ ನೀಡಿದ ಡೆಡ್‌ಲೈನ್‌ ಇದು. ಶುಕ್ರವಾರ ಶಾಂತಿನಗರದ ನಿಗಮದ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಅವರು ಈ ಸೂಚನೆ ನೀಡಿದರು.

Advertisement

ಮುಂದಿನ ಒಂದೂವರೆ ವರ್ಷದಲ್ಲಿ ಅಂದರೆ 2020ಕ್ಕೆ 6.29 ಕಿ.ಮೀ. ಉದ್ದದ ಮೈಸೂರು ರಸ್ತೆ-ಕೆಂಗೇರಿ ಹಾಗೂ 6.46 ಕಿ.ಮೀ.ನ ಯಲಚೇನಹಳ್ಳಿ-ಅಂಜನಾಪುರ ಟೌನ್‌ಶಿಪ್‌ ನಡುವಿನ ಮಾರ್ಗ ಪೂರ್ಣಗೊಳ್ಳಬೇಕು. ಇನ್ನು ಎಲೆಕ್ಟ್ರಾನಿಕ್‌ ಸಿಟಿ ಮೂಲಕ ಹಾದುಹೋಗುವ 18.82 ಕಿ.ಮೀ. ಉದ್ದದ ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರ, 15.50 ಕಿ.ಮೀ.ನ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್‌ ಹಾಗೂ 3.37 ಕಿ.ಮೀ. ಮಾರ್ಗದ ನಾಗಸಂದ್ರದಿಂದ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ನಡುವೆ ಮೆಟ್ರೋ ನಿರ್ಮಾಣಗೊಳ್ಳಬೇಕು. 2023ಕ್ಕೆ ಗೊಟ್ಟಿಗೆರೆ-ನಾಗವಾರ 21.25 ಕಿ.ಮೀ. ಮಾರ್ಗ ಲೋಕಾರ್ಪಣೆಗೊಳ್ಳಬೇಕು ಎಂದು ಗಡವು ನೀಡಿದರು.

ಮೆಟ್ರೋ ಪ್ರತಿ ವರ್ಷ ಕನಿಷ್ಠ 15 ಕಿ.ಮೀ. ನಿರ್ಮಾಣಗೊಂಡರೆ, ನಗರದ ಜನರಿಗೆ ಹೆಚ್ಚು ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇs… ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ.ಪರಮೇಶ್ವರ್‌, ಯೋಜನೆ ಪ್ರಗತಿ ತೃಪ್ತಿಕರವಾಗಿಲ್ಲ. ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಬೇಕು. ನಿಧಾನಗತಿಯಿಂದ ಯೋಜನಾ ವೆಚ್ಚ ಹೆಚ್ಚಾಗಲಿದೆ ಎಂದು ಹೇಳಿದರು.
ಕಾಮನ್‌ ಮೊಬಿಲಿಟಿ ಕಾರ್ಡ್‌

ಇದಲ್ಲದೆ, ಹೊರವರ್ತುಲ ರಸ್ತೆಯಲ್ಲಿ ಬರಲಿರುವ ಸಿಲ್ಕ್ ಬೋರ್ಡ್‌-ಕೆ.ಆರ್‌. ಪುರ ಮಾರ್ಗ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ಯೋಜನೆಗೆ ಶೀಘ್ರ ಚಾಲನೆ ನೀಡಬೇಕು. ಅದೇ ರೀತಿ, ಬಿಎಂಟಿಸಿ ಸಹಯೋಗದಲ್ಲಿ “ಕಾಮನ್‌ ಮೊಬಿಲಿಟಿ ಕಾರ್ಡ್‌’ ಜಾರಿಗೊಳಿಸಬೇಕು ಎಂದೂ ಸೂಚಿಸಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಜಿ. ಪರಮೇಶ್ವರ್‌, 2023ಕ್ಕೆ ಎರಡನೆಯ ಹಂತದ ಎಲ್ಲ ಮಾರ್ಗಗಳೂ ಪೂರ್ಣಗೊಳ್ಳಲಿವೆ. ಅಷ್ಟೊತ್ತಿಗೆ ಯೋಜನಾ ವೆಚ್ಚ ಸುಮಾರು ಆರು ಸಾವಿರ ಕೋಟಿ ಅಂದರೆ 32 ಸಾವಿರ ಕೋಟಿ ರೂ. ತಲುಪುವ ಸಾಧ್ಯತೆ ಇದೆ. ಪ್ರಸ್ತುತ 26,405 ಕೋಟಿ ರೂ. ಅಂದಾಜು ವೆಚ್ಚ ಇದೆ. ನಿಗಮದಿಂದ ತಿಂಗಳಿಗೆ 30 ಕೋಟಿ ರೂ. ಆದಾಯ ಬರುತ್ತಿದ್ದು, 24 ಕೋಟಿ ರೂ. ವೆಚ್ಚವಾಗುತ್ತಿದೆ. ಸೆಕ್ಯುರಿಟಿ, ಟಿಕೆಟ್‌ ವಿತರಕರು ಸೇರಿದಂತೆ ಅನಗತ್ಯ ಮಾನವಸಂಪನ್ಮೂಲ ಬಳಕೆಗೆ ಕಡಿವಾಣ ಹಾಕಿ, ತಿಂಗಳಿಗೆ ಕನಿಷ್ಠ 5 ಕೋಟಿ ರೂ. ವೆಚ್ಚ ತಗ್ಗಿಸಲು ಸೂಚಿಸಿದ್ದೇನೆ ಎಂದರು.

Advertisement

ಅಲ್ಲದೆ, ನಿತ್ಯ ಮೆಟ್ರೋದಲ್ಲಿ ಸುಮಾರು ಐದು ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ರೈಲು ಆರು ಬೋಗಿಗಳಿಗೆ ಪರಿವರ್ತನೆ ಆಗುವುದರಿಂದ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಲಿದೆ. ಇದಕ್ಕೆ ಪೂರಕವಾಗಿ ಬಿಎಂಟಿಸಿ ಬಸ್‌ ಮತ್ತು ಮೆಟ್ರೋ ಎರಡರಲ್ಲೂ ಸಂಚರಿಸಲು “ಕಾಮನ್‌ ಮೊಬಿಲಿಟಿ ಕಾರ್ಡ್‌’ ಪರಿಚಯಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಸಂಬಂಧ ಚರ್ಚೆ ನಡೆಸಲಾಯಿತು. ಶೀಘ್ರ ಈ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಏರ್‌ಪೋರ್ಟ್‌ ಮಾರ್ಗ ಸಂಪುಟದ ಮುಂದೆ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಮೆಟ್ರೋ ನಿರ್ಮಾಣ ಯೋಜನೆ ಇನ್ನು ಹದಿನೈದು ದಿನಗಳಲ್ಲಿ ಸಚಿವ ಸಂಪುಟದ ಮುಂದೆ ಬರಲಿದೆ ಎಂದು ಸಚಿವ ಡಾ.ಪರಮೇಶ್ವರ್‌ ತಿಳಿಸಿದರು. ಈ ಮೊದಲು ನಾಗವಾರದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ತೀರ್ಮಾನಿಸಲಾಗಿತ್ತು. ಈಗ ಹೆಬ್ಟಾಳ ಮಾರ್ಗವಾಗಿ ಮೆಟ್ರೋ ಮಾರ್ಗ ನಿರ್ಮಾಣ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next