ಬೆಂಗಳೂರು: ನಗರದಲ್ಲಿ ಕೋವಿಡ್ ಸಮುದಾಯಕ್ಕೆ ಹಬ್ಬಿರುವ ಬಗ್ಗೆ ಅನುಮಾನವಿದ್ದು, ಈ ಸಂಬಂಧ ವರದಿ ನೀಡುವಂತೆ ತಜ್ಞರಿಗೆ ಸರ್ಕಾರ ಸೂಚನೆ ನೀಡಿದೆ
ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ಇಂದಿರಾನಗರದ ಸಿ.ವಿ. ರಾಮನ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಶನಿವಾರ ಒಂದೇ ದಿನ 596 ಕೋವಿಡ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಂದೇ ದಿನ ಇಷ್ಟು ಪ್ರಕರಣಗಳು ಹೇಗೆ ದೃಢಪಟ್ಟವು, ಸೋಂಕು ಸಮುದಾಯಕ್ಕೆ ಹಬ್ಬಿತೇ ಎನ್ನುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ತಜ್ಞರ ಸಮಿತಿಗೆ ಸರ್ಕಾರ ಶನಿವಾರ ಸೂಚನೆ ನೀಡಿದೆ. ಈ ಸಂಬಂಧ ತಜ್ಞರು ಸರ್ವೇ ಮಾಡಿ ಮೂರುದಿನಗಳಲ್ಲಿ ವರದಿ ನೀಡಲಿದ್ದಾರೆ ಎಂದರು.
ಊಟದ ಮೆನು ಬದಲಾಯಿಸಲು ಸೂಚನೆ: ನಗರದ ಸಿ.ವಿ ರಾಮನ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಕೇವಲ ಅನ್ನ ಮತ್ತು ಸಾಂಬಾರ್ ನೀಡುತ್ತಿರುವುದನ್ನು ಬದಲಾಯಿಸುವಂತೆ ಆರ್ ಅಶೋಕ್ ಇಲ್ಲಿನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಿವಿರಾಮನ್ ನಗರದ ಆಸ್ಪತ್ರೆಯಲ್ಲಿನ ಸೋಂಕಿತರಿಗೆ ಯಾವ ಊಟ ನೀಡಲಾಗುತ್ತಿದೆ ಎಂದು ಅಧಿಕಾರಿಗಳಿಂದ ಪೋನ್‌ನಲ್ಲೇ ಮಾಹಿತಿ ಪಡೆದುಕೊಂಡರು. ಕೇವಲ ಅನ್ನ ಮತ್ತು ಸಾಂಬಾರ್ ನೀಡುತ್ತಿರುವುದನ್ನು ಪ್ರಶ್ನಿಸಿದ ಅವರು, ಸೋಮವಾರದಿಂದ ಅನ್ನ ಮತ್ತು ಸಾಂಬಾರ್ ಜೊತೆಗೆ ಕಡ್ಡಾಯವಾಗಿ ಚಪಾತಿ, ಪಲ್ಯ, ಮೊಸರು, ತುಪ್ಪ ಹಾಗೂ ಹಣ್ಣುಗಳನ್ನು ನೀಡಬೇಕು ಎಂದು ನಿರ್ದೇಶನ ನೀಡಿದರು. ಇದೇ ಮಾದರಿಯ ಊಟವನ್ನು ಎಲ್ಲ ಕೊರೊನಾ ಚಿಕಿತ್ಸಾ ಆಸ್ಪತ್ರೆಯ ಸಿಬ್ಬಂದಿ ನೀಡುವಂತೆ ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.
ಇನ್ನು ನಗರದಲ್ಲಿ ಕೋವಿಡ್ ಸೋಂಕಿತರಿಗೆ ಅಂಬ್ಯುಲೆನ್ಸ್ ಕೊರತೆ ಆಗದಂತೆ ಕ್ರಮ ವಹಿಸಲಾಗಿದೆ. ಪ್ರತಿ ಎರಡು ವಾರ್ಡ್‌ಗಳಿಗೆ ಒಂದೊಂದು ಆಂಬ್ಯುಲೆನ್ಸ್‌ಗಳನ್ನು ಈಗಾಗಲೇ ಮೀಸಲಿಡಲಾಗಿದೆ. ಕೆಲವೇ ದಿನಗಳಲ್ಲಿ ಪ್ರತಿ ವಾರ್ಡ್‌ಗೆ ಒಂದು ಆಂಬ್ಯುಲೆನ್ಸ್ ಮೀಸಲಿಡಲಾಗುತ್ತದೆ. ಇದರಿಂದ ಸಮಸ್ಯೆ ಇರುವುದಿಲ್ಲ ಎಂದರು.
ಈ ವೇಳೆ ಸಂಸದ ಪಿ.ಸಿ ಮೋಹನ್, ಸ್ಥಳೀಯ ಶಾಸಕ ಎಸ್. ರಘು, ಯಲಹಂಕ ಶಾಸಕ ಎಚ್.ಆರ್. ವಿಶ್ವನಾಥ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮತ್ತಿತರರು ಹಾಜರಿದ್ದರು.