ನವದೆಹಲಿ:ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸುಗತಾ ರಾಯ್ ಹಾಗೂ ಇತರ ನಾಲ್ಕು ಸಂಸದರು ರಾಜೀನಾಮೆ ನೀಡುವ ಸಾಧ್ಯತೆ ಇದ್ದಿರುವುದಾಗಿ ಭಾರತೀಯ ಜನತಾ ಪಕ್ಷದ ಸಂಸದ ಅರ್ಜುನ್ ಸಿಂಗ್ ತಿಳಿಸಿದ್ದಾರೆ.
ಉತ್ತರ 24 ಪರಾಗಣ್ ಜಿಲ್ಲೆಯ ಜಗಾದ್ದಾಲ್ ಘಾಟ್ ನಲ್ಲಿ ಚಾತ್ ಪೂಜೆಯಲ್ಲಿ ಪಾಲ್ಗೊಂಡಿದ್ದ ಸಿಂಗ್ ಅವರು, ತೃಣಮೂಲ ಕಾಂಗ್ರೆಸ್ ನ ಐವರು ಸಂಸದರು ಯಾವುದೇ ಸಂದರ್ಭದಲ್ಲಿಯೂ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.
ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಳ್ಳಲಿರುವವರ ಪಟ್ಟಿಯಲ್ಲಿ ಸುಗತಾ ರಾಯ್ ಹೆಸರು ಇದೆಯೇ ಎಂದು ಪ್ರಶ್ನಿಸಿದ ವೇಳೆ ಪ್ರತಿಕ್ರಿಯೆ ನೀಡಿದ ಅರ್ಜುನ್ ಸಿಂಗ್, ಸುಗತಾ ರಾಯ್ ಅವರು ಟಿಎಂಸಿ ಮುಖಂಡ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಮಮತಾ ಬ್ಯಾನರ್ಜಿ ಅವರ ಮಧ್ಯವರ್ತಿ ಎಂಬಂತೆ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ರಾಯ್ ಕೂಡಾ ಸುಬೇಂದು ಅಧಿಕಾರಿ ಜತೆ ಮಾತುಕತೆ ನಡೆಸಿದ್ದಾರೆ. ಮುಂದೆ ಸುಗತಾ ಅವರ ಹೆಸರನ್ನು ಕೂಡಾ ನೀವು ಸೇರಿಸಿಕೊಳ್ಳಬಹುದು ಎಂದು ಹೇಳಿದರು.
ಇದನ್ನೂ ಓದಿ:ಸದ್ದಿಲ್ಲದೇ ಶುರುವಾಗಿದೆ ಪ್ರಚಾರ: ಪಶ್ಚಿಮಬಂಗಾಳದಲ್ಲಿ ಮಮತಾ v/s ಬಿಜೆಪಿ ಚುನಾವಣಾ ರಣತಂತ್ರ!
ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಸುಬೇಂದು ಅಧಿಕಾರಿ ಬಹಿರಂಗವಾಗಿ ಟಿಎಂಸಿ ವಿರುದ್ಧ ಸೆಟೆದು ನಿಂತಿದ್ದಾರೆ ಎಂದ ಸಿಂಗ್, ಸುಬೇಂದು ಅವರು ಜನಪ್ರಿಯ ನಾಯಕ. ಮಮತಾ ಬ್ಯಾನರ್ಜಿ ಕೂಡಾ ಅಧಿಕಾರಿ ಅವರ ಮೇಲೆ ಅವಲಂಬಿತರಾಗಿದ್ದಾರೆ. ಹೀಗೆ ಹಲವಾರು ಮುಖಂಡರು ಟಿಎಂಸಿ ಪಕ್ಷ ಬಲಪಡಿಸಲು ಶ್ರಮಿಸಿದ್ದರು. ಆದರೆ ಇದೀಗ ಪಕ್ಷಕ್ಕಾಗಿ ದುಡಿದವರನ್ನು ಮೂಲೆಗುಂಪು ಮಾಡಿ, ತನ್ನ ಸಂಬಂಧಿ ಅಭಿಷೇಕ್ ಬ್ಯಾನರ್ಜಿಯನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದನ್ನು ಯಾವ ಟಿಎಂಸಿ ಜನಪ್ರಿಯ ನಾಯಕರು ಒಪ್ಪಿಕೊಳ್ಳಲು ಸಿದ್ದರಿಲ್ಲ ಎಂದು ಹೇಳಿದರು.
ಸುಬೇಂದು ಅಧಿಕಾರಿ ಅವರನ್ನು ಅವಮಾನಿಸಿದ್ದರಿಂದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ್ದರು. ಬ್ಯಾನರ್ಜಿ ತನ್ನ ಆಪ್ತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಹಲವಾರು ಬಾರಿ ಕಿರುಕುಳ ನೀಡಿದ್ದರು. ಆದರೆ ಜನಪ್ರಿಯ ನಾಯಕರನ್ನು ಎಂದಿಗೂ ತಡೆಯಲು ಸಾಧ್ಯವಿಲ್ಲ. ಅಧಿಕಾರಿ ಜನಪ್ರಿಯ ಮುಖಂಡ, ಅವರನ್ನು ಬಿಜೆಪಿ ಯಾವಾಗಲೂ ಸ್ವಾಗತಿಸುತ್ತದೆ ಎಂದು ಹೇಳಿದರು.
ಒಂದು ಬಾರಿ ಸುಬೇಂದು ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇ ಆದಲ್ಲಿ ಮಮತಾ ಬ್ಯಾನರ್ಜಿ ಅವರ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಸಿಂಗ್ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ:ಡಬ್ಲುಎಚ್ ಒ ಘೋಷಿಸುವ ಕೋವಿಡ್ ಲಸಿಕೆಯೇ ಅಧಿಕೃತ: ಸಚಿವ ಕೆ. ಸುಧಾಕರ್
ಯಾರೀತ ಅಭಿಷೇಕ್ ಬ್ಯಾನರ್ಜಿ:
ಅಭಿಷೇಕ್ ಬ್ಯಾನರ್ಜಿ ಮಮತಾ ಬ್ಯಾನರ್ಜಿಯ ಸಹೋದರನ ಮಗ. ಅಭಿಷೇಕ್ ಪಶ್ಚಿಮಬಂಗಾಳದ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ಸಂಸದ. ಆಲ್ ಇಂಡಿಯಾ ತೃಣಮೂಲ ಯು ಕಾಂಗ್ರೆಸ್ ನ ಅಧ್ಯಕ್ಷ. ಅಭಿಷೇಕ್ ವಿರುದ್ಧ ಎಂಬಿಎ ಪದವೀಧರ ಎಂದು ಸುಳ್ಳು ಮಾಹಿತಿ ನೀಡಿರುವ ಬಗ್ಗೆ ನ್ಯಾಯಾಲದಲ್ಲಿ ಪ್ರಕರಣ ದಾಖಲಾಗಿತ್ತು.