Advertisement

ನರೇಗಾ; 7375 ಕಾಮಗಾರಿ

03:33 PM May 07, 2020 | Naveen |

ತೀರ್ಥಹಳ್ಳಿ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಂತರ್ಜಲ ಚೇತನ ಕಾರ್ಯಕ್ಕೆ 46.78 ಕೋಟಿ ರೂ ವೆಚ್ಚದಲ್ಲಿ ತಾಲೂಕಿನ 38 ಗ್ರಾಪಂ ವ್ಯಾಪ್ತಿಯಲ್ಲಿ 7375 ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಕಲ್ಲುಗುಂಡಿಗಳ ತಡೆ, ಇಂಗುಬಾವಿ, ಇಂಗು ಕೊಳವೆ ಬಾವಿ ಹಾಗೂ ಕೆರೆಹೊಂಡ ಹೀಗೆ ನಾಲ್ಕು ವಿಭಾಗದಲ್ಲಿ ಕಾಮಗಾರಿ ನಡೆಯಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Advertisement

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಹಾಗೂ ದಿ ಆರ್ಟ್‌ ಆಫ್‌ ಲಿವಿಂಗ್‌ ಸಹಭಾಗಿತ್ವದಲ್ಲಿ ನರೇಗಾ ಯೋಜನೆಯಡಿ ತಾಲೂಕಿನಲ್ಲಿ ನಡೆಯಲಿರುವ ಕಾಮಗಾರಿಗೆ ಆರಗ ಸಮೀಪದ ದೇವರಗುಡಿ ಗ್ರಾಮದಲ್ಲಿ ಚಾಲನೆ ನೀಡಿ ರೇಣುಕಾಂಬಾ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಭೂಮಿಯಿಂದ ನೀರನ್ನು ತೆಗೆಯುತ್ತೇವೆಯೇ ಹೊರತು ಇಂಗಿಸುವುದನ್ನು ಮರೆತ ಪರಿಣಾಮ ಈ ದುರ್ಗತಿ ಬಂದಿದೆ. ಅಂತರ್ಜಲ ಚೇತನ ಯೋಜನೆ ಸಂಜೀವಿನಿಯಂತೆ ಪರಿಣಾಮ ಬೀರುವ ಆಶಾಭಾವನೆಯಿದೆ ಎಂದರು.

ತಹಶೀಲ್ದಾರ್‌ ಡಾ| ಎಸ್‌.ಬಿ. ಶ್ರೀಪಾದ ಮಾತನಾಡಿ, ನೀರಿನ ಮಹತ್ವವನ್ನೇ ಮರೆತು ಹಣದ ಆಸೆಗೆ ಬಿದ್ದು ಮರಳು ಗಣಿಗಾರಿಕೆಯ ಮೂಲಕ ಜಲಮೂಲವನ್ನೇ ಬಗೆಯುತ್ತಿದ್ದೇವೆ. ಮರಳಿಗೆ ನೀರನ್ನು ಹಿಡಿದಿಡುವ ಶಕ್ತಿಯಿದೆ. ನದಿಯನ್ನು ಎಟಿಎಂನಂತೆ ಬಳಸದೇ ಅದನ್ನು ರಕ್ಷಿಸುವ ಸಲುವಾಗಿ ಪ್ರತಿಯೊಬ್ಬರೂ ತಮ್ಮ ಹೊಣೆಗಾರಿಕೆಯನ್ನು ಅರಿಯಬೇಕು ಎಂದರು.

ಆರಗ ಗ್ರಾಪಂ ಅದ್ಯಕ್ಷ ಜಗದೀಶ್‌ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಅಪೂರ್ವ ಶರಧಿ, ಕಾಸರವಳ್ಳಿ ಶ್ರೀನಿವಾಸ್‌ ಹಾಗೂ ಕಲ್ಪನಾ ಪದ್ಮನಾಭ್‌, ತಾಪಂ ಸದಸ್ಯರಾದ ಚಂದವಳ್ಳಿ ಸೋಮಶೇಖರ್‌, ಟಿ.ಮಂಜುನಾಥ್‌ ಮಾತನಾಡಿದರು. ತಾಪಂ ಉಪಾಧ್ಯಕ್ಷೆ ಯಶೋದಾ ಮಂಜುನಾಥ್‌, ಸದಸ್ಯರಾದ ಸಾಲೇಕೊಪ್ಪ ರಾಮಚಂದ್ರ, ಗೀತಾ ಶೆಟ್ಟಿ, ತಾಪ ಇಒ ಆಶಾಲತಾ, ಸಿಪಿಐ ಗಣೇಶಪ್ಪ, ಪಪಂ ಸಿಒ ನಾಗೇಂದ್ರ ಕುಮಾರ್‌ ಇದ್ದರು. ಶಾಂತಕುಮಾರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next