Advertisement

ಅಕಾಲಿಕ ಮಳೆ; ಅಡಿಕೆ ಬೆಳೆಗಾರರು ಅತಂತ್ರ!

12:32 PM Oct 30, 2019 | Naveen |

„ರಾಂಚಂದ್ರ ಕೊಪ್ಪಲು
ತೀರ್ಥಹಳ್ಳಿ:
ತಾಲೂಕಿನಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಅಡಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಬೆಳಕಿನ ಹಬ್ಬ ದೀಪಾವಳಿ ಮಲೆನಾಡಿನ ರೈತರ ಪಾಲಿಗೆ ಕತ್ತಲು ತರಿಸಿದೆ.

Advertisement

ಪ್ರತಿ ವರ್ಷ ಅಡಕೆ ಬೆಳೆಗಾರರಿಗೆ ಅಕ್ಟೋಬರ್‌ ತಿಂಗಳು ಬಂದರೆ ಸಾಕು. ಅಡಿಕೆ ಧಾರಣೆ ಕುಸಿತ, ಅಡಕೆ ನಿಷೇಧದ ವಿಚಾರ ಬೆಳೆಗಾರರನ್ನು ಆತಂಕ ಮೂಡಿಸುತ್ತಿತ್ತು. ಈ ಬಾರಿ ಕಳೆದ 1 ವಾರದಿಂದ ಸುರಿಯುತ್ತಿರುವ ಮಳೆಯಿಂದ ಅಡಕೆ ತೋಟದಲ್ಲಿ ಕೊಳೆ ರೋಗ ಮತ್ತೆ ಉಲ್ಬಣಿಸಿದೆ.

ಕಳೆದ 2 ತಿಂಗಳ ಹಿಂದೆ ಸುರಿದ ಗಾಳಿ-ಮಳೆಗೆ ಮಲೆನಾಡಿನ ಅಡಕೆ ತೋಟಗಳಲ್ಲಿ ಮರಗಳು ನೆಲಕ್ಕುರುಳಿ ಅಪಾರ ಹಾನಿಯಾಗಿತ್ತು. ಆ ಸಂದರ್ಭದಲ್ಲಿಯೂ ಕೊಳೆ ರೋಗ ಕಾಣಿಸಿಕೊಂಡು ಬೆಳೆಗಾರರು ಮಳೆಯ ನಡುವೆಯೂ ಔಷ ಧ ಸಿಂಪಡಿಸಿ ಫಸಲನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು.

ಆದರೆ ಈಗ ದೀಪಾವಳಿಯ ಆಸುಪಾಸಿನಲ್ಲಿ ತಾಲೂಕಿನಲ್ಲಿ ಅಡಕೆ ಕೊಯ್ಲು ಆರಂಭದ ಸಮಯವಾಗಿದೆ. ಹಲವು ದಿನಗಳಿಂದ ಮಳೆ ಹೆಚ್ಚಾಗಿ ಬಿಸಿಲು ಬಾರದಿದ್ದರಿಂದ ಅಡಕೆ ಕೊಯ್ಲು ಮಾಡುವ ಬಗ್ಗೆ ರೈತರು ಗೊಂದಲದಲ್ಲಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಗೆ ಅಡಕೆ ತೋಟದಲ್ಲಿ ಕೊಳೆರೋಗ ಕಾಣಿಸಿಕೊಂಡು ಅಡಕೆಗಳು ನೆಲಕ್ಕೆ ಬೀಳುತ್ತಿವೆ. ತಾಲೂಕಿನ ಬೆಳೆಗಾರರು ಶೇ. 50ರಷ್ಟು ಅಡಕೆ ಫಸಲನ್ನು ಪ್ರಕೃತಿ ವಿಕೋಪ, ಕೊಳೆರೋಗ ಹಾಗು ಮಂಗನ ಕಾಟದಿಂದ ಕಳೆದುಕೊಂಡಿದ್ದಾರೆ. ಜೊತೆಗೆ ತೋಟದಲ್ಲಿನ ಉಪ ಬೆಳೆಗಳಾದ ಕಾಳುಮೆಣಸು, ವೀಳ್ಯದೆಲೆ, ಕಾಫಿ, ಏಲಕ್ಕಿ ಹಾಗೂ ಕೋಕೋ ಫಸಲಿಗೂ ಧಕ್ಕೆಯಾಗಿದೆ.

Advertisement

ಕಾಡುಪ್ರಾಣಿಗಳ ಹಾವಳಿ: ಅಡಕೆ ತೋಟಗಳಲ್ಲಿ ಮಂಗಗಳ ಕಾಟ ವಿಪರೀತವಾಗಿದೆ. ಜೊತೆಗೆ ಕಾಡುಕೋಣ, ಹಂದಿಗಳ ಲೂಟಿಯಿಂದ ಬೆಳೆಗಾರರು ಬೇಸತ್ತಿದ್ದಾರೆ. ಪ್ರಾಣಿಗಳನ್ನು ಕೊಂದರೆ ಅರಣ್ಯ ಇಲಾಖೆಯ ಕಾನೂನಿನ ದೃಷ್ಟಿಯಿಂದ ರೈತ ಅಪರಾಧಿಯಾಗುತ್ತಾನೆ. ಆದರೆ ಬೆಳೆ ಕಳೆದುಕೊಂಡು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ ರೈತರು ದಿನ ಕಳೆಯುವಂತಾಗಿದೆ.

ಒಟ್ಟಾರೆ ತಾಲೂಕಿನ ಅಡಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಸರ್ಕಾರಗಳು ಗಂಭೀರ ಚಿಂತನೆ ನಡೆಸಬೇಕಾಗಿದೆ. ಬೆಳೆಗಾರರಿಗೆ ಕೊಳೆ ರೋಗ ಪರಿಹಾರ ಹಾಗೂ ವಿಶೇಷ ಪ್ಯಾಕೇಜ್‌ ಪರಿಹಾರದ ಬಗ್ಗೆ ಮಲೆನಾಡು ಭಾಗದ ಎಲ್ಲಾ ಶಾಸಕರು ಹಾಗೂ ಸಂಸದರು ಗಮನಹರಿಸಬೇಕಿದೆ. ಭವಿಷ್ಯದಲ್ಲಿ ಅಡಕೆ ಬೆಳೆಗಾರರ ಬದುಕು ನಿರ್ನಾಮ ಆಗುವ ಮುನ್ನ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಎಚ್ಛೆತ್ತುಕೊಳ್ಳದಿದ್ದರೆ ಮಲೆನಾಡು ಭಾಗದ ಅಡಕೆ ಬೆಳೆಗಾರರು ಆತ್ಮಹತ್ಯೆಯ ದಾರಿ ಹಿಡಿದರೂ ಆಶ್ಚರ್ಯ ಪಡಬೇಕಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next