Advertisement
ಹಚ್ಚ ಹಸಿರ ಚಾದರವನ್ನು ಹೊದ್ದ ಬೆಟ್ಟ-ಗುಡ್ಡಗಳು, ದಾರಿಯುದ್ದಕ್ಕೂ ಹಸಿರ ಝರಿಯಂತೆ ಕಾಣುವ ಗದ್ದೆಗಳು, ಕಾಯಕದಲ್ಲಿಯೇ ತಲ್ಲೀನರಾಗಿ ಉಳುಮೆ ಮಾಡುತ್ತಿರುವ ರೈತಾಪಿ ಜನರು. ತಣ್ಣಗೆ ಬೀಸುವ ಕುಳಿರ್ಗಾಳಿ… ಇವೆಲ್ಲ ಕಾಣಸಿಗುವುದು ತೀರ್ಥ ರಾಮೇಶ್ವರಕ್ಕೆ ತೆರಳಬೇಕಾದ ದಾರಿಯಲ್ಲಿ. ಹೊನ್ನಾಳಿ ತಾಲ್ಲೂಕಿನ ಬೆಳಗುತ್ತಿ ಗ್ರಾಮವನ್ನು ಹಾಯ್ದು ಅದರ ಅಂಚಿಗೆ ಬಂದು ನಿಂತಾಗ ಕಣ್ಣೆದುರು ದೈತ್ಯಾಕಾರದ ಹಸಿರು ಬೆಟ್ಟ, ಅದರುದ್ದಕ್ಕೂ ದಟ್ಟವಾದ ಕಾಡು ತಡೆದು ನಿಲ್ಲಿಸುತ್ತದೆ. ಅನತಿ ದೂರ ಕೃತಕ ಮೆಟ್ಟಿಲುಗಳನ್ನು ಏರುತ್ತ ಹೋಗುತ್ತಿದ್ದಂತೆ ಏದುಸಿರು ಆರಂಭವಾಗುತ್ತದೆ. ಗಮ್ಯವನ್ನು ತಲುಪಿದೊಡನೆ ತೀರ್ಥ ರಾಮೇಶ್ವರ ದೇವಸ್ಥಾನ ಹಾಗೂ ಸುತ್ತ ಮುತ್ತಲಿನ ಶಾಂತ, ಸುಂದರ ನಿಸರ್ಗ ದಣಿವನ್ನೆಲ್ಲಾ ಮರೆಸಿಬಿಡುತ್ತದೆ.
Related Articles
Advertisement
ವಿಜಯನಗರದ ಅರಸರು 1339ರಲ್ಲಿ ಈ ದೇವಸ್ಥಾನವನ್ನು ನಿರ್ಮಿಸಿದರು. ನಂತರ ಬಹಮನಿ ಸುಲ್ತಾನರ ಆಡಳಿತದಲ್ಲಿ ಈ ದೇಗುಲವು ದಾಳಿಗೆ ಒಳಗಾಯಿತು. ಪುನಃ ಮೈಸೂರು ಅರಸರ ಆಡಳಿತಾವಧಿಯಲ್ಲಿ ಪುನರುಜ್ಜೀವನಗೊಂಡಿತು ಈ ತೀರ್ಥ ರಾಮೇಶ್ವರ ಎನ್ನುತ್ತದೆ ಇತಿಹಾಸ. ರಾಮನಿಂದ ತೀರ್ಥ ಮತ್ತು ಈಶ್ವರ ಉದ್ಭವಗೊಂಡ ಕಾರಣಕ್ಕೆ ಈ ಕ್ಷೇತ್ರಕ್ಕೆ ತೀರ್ಥ ರಾಮೇಶ್ವರ ಎಂಬ ಹೆಸರು ಬಂದಿದೆ ಎಂದು ಹೇಳುತ್ತಾರೆ. ದೀಪಾವಳಿ, ದಸರಾ, ಸಂಕ್ರಾತಿಯಂಥ ವಿಶೇಷ ದಿನಗಳಲ್ಲಿ ಅದ್ದೂರಿ ಪೂಜೆ ನಡೆಯುತ್ತದೆ.
ತೀರ್ಥ ರಾಮೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ಆಡಳಿತವನ್ನು ಸ್ಥಳೀಯ ಟ್ರಸ್ಟ್ ನೋಡಿಕೊಳ್ಳುತ್ತದೆ. ಎಂಥವರನ್ನೂ ಮಂತ್ರ ಮುಗ್ಧಗೊಳಿಸುವ ದೈವಿಕ ತಾಣವಾದ ಈ ಕ್ಷೇತ್ರ, ಸೂಕ್ತ ನಿರ್ವಹಣೆ ಇಲ್ಲದೆ ಕಡೆಗಣಿಸಲ್ಪಟ್ಟಿದೆ. ಶೌಚಾಲಯ ಹಾಗೂ ಶುಚಿತ್ವದ ಅವ್ಯವಸ್ಥೆಯ ಕಾರಣದಿಂದ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ವಿರಳ. ಇಲ್ಲಿರುವ ಒಂದು ಟೀ ಅಂಗಡಿಯನ್ನೂ ಮುಚ್ಚಿರುವುದರಿಂದ ನೀರು-ಆಹಾರದಂಥ ಅಗತ್ಯಗಳನ್ನು ಪ್ರವಾಸಿಗರೇ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬೆಳಗುತ್ತಿ ಗ್ರಾಮದಲ್ಲಿ ಈ ದೇವಸ್ಥಾನವಿದೆ. ಶಿವಮೊಗ್ಗದಿಂದ 39 ಕಿ.ಮೀ. ಶಿಕಾರಿಪುರ ಮಾರ್ಗವಾಗಿ ಹೋಗಬಹುದು. ಬೆಂಗಳೂರಿನಿಂದ ಸುಮಾರು 340 ಕಿ.ಮೀ ಆಗುತ್ತದೆ.
ಗೌರಿ ಚಂದ್ರಕೇಸರಿ