ಅಫಜಲಪುರ: ಭಾರತದ ಮೊದಲ ಸ್ವಾತಂತ್ರ್ಯ ಸೇನಾನಿ, ಅಪ್ರತಿಮ ದೇಶಭಕ್ತ ಹಾಗೂ ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ವೀರಯೋಧ ಟಿಪ್ಪು ಸುಲ್ತಾನ್ ವ್ಯಕ್ತಿತ್ವ ಎಲ್ಲ ಜನಾಂಗದವರಿಗೆ ಮಾದರಿ ಎಂದು ಯುವ ಮುಖಂಡ ಸಮ್ಸುದ್ದಿನ್ ಹೇಳಕಾರ್ ಹೇಳಿದರು.
ತಾಲೂಕಿನ ಕರಜಗಿ ಗ್ರಾಮದಲ್ಲಿ ಟಿಪ್ಪು ಸುಲ್ತಾನ್ ಸಂಘಟನೆ ವತಿಯಿಂದ 271ನೇ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಧ್ವನಿ ಎತ್ತಿದ ಆಗಿನ ಕಾಲದ ಪ್ರಮುಖ ಹೋರಾಟಗಾರರಲ್ಲಿ ಟಿಪ್ಪು ಕೂಡಾ ಒಬ್ಬರು. ಯುದ್ಧದಲ್ಲಿ ರಾಕೆಟ್ ತಂತ್ರಜ್ಞಾನ ತಂದವರು. ಮೈಸೂರು ರಾಜ್ಯಕ್ಕೆ ರೇಷ್ಮೆ ಪರಿಚಯಿಸಿದವರು. ಇಂತಹ ಉದಾತ್ತ ವ್ಯಕ್ತಿತ್ವದ ಟಿಪ್ಪು ಜಯಂತಿ ಆಚರಿಸುವುದನ್ನು ವಿರೋಧಿಸುವುದು ರಾಜಕೀಯ ಪ್ರೇರಿತವಾಗಿದೆ ಎಂದರು.
ನಿಜವಾದ ದೇಶಭಕ್ತನ ಕುರಿತ ಮಾಹಿತಿಯನ್ನು ಪಠ್ಯದಿಂದ ಕೈ ಬಿಟ್ಟಿದ್ದು ದುರದೃಷ್ಟಕರ. ರಾಷ್ಟ್ರನಾಯಕರನ್ನು ಒಂದು ಕೋಮಿಗೆ ಸೀಮಿತಗೊಳಿಸಿದ್ದು ಸರಿಯಲ್ಲ ಎಂದರು.
ಗ್ರಾಪಂ ಅಧ್ಯಕ್ಷ ವಿಠೊಬಾ ಹಿರೇಕುರಬರ, ಸದಸ್ಯರಾದ ಇರ್ಫಾನ ಜಮಾದಾರ, ಪೀರಪ್ಪ ನಾಯ್ಕೋಡಿ, ಉಸ್ಮಾನ ಚೌಧರಿ, ಮೈಹಿಬೂಬ ಬಂಟನೂರ, ಇರ್ಫಾನ್ ಜಮಾದಾರ, ಸೈಫನ್ ಮಲ್ಲಾಬಾದ, ರಜಾಕ್ ಮುಜಾವರ, ಅಯ್ಯೂಬ ಮುಜಾವರ, ಹೈದರ್ ಮುಜಾವರ, ಸೈಫನ್ ಮುಲ್ಲಾ ಇದ್ದರು.