ಮುಂಬಯಿ: ಒಂದಲ್ಲ ಒಂದು ವಿಚಾರದಲ್ಲಿ ಚರ್ಚೆಯಾಗುವ ʼಟಿಪ್ಪು ಸುಲ್ತಾನ್ʼ ಕುರಿತಂತೆ ಪ್ಯಾನ್ ಇಂಡಿಯಾ ಸಿನಿಮಾವೊಂದನ್ನು ಮಾಡಲು ಬಿಟೌನ್ ರೆಡಿಯಾಗಿದೆ. ಮೊದಲ ಹಂತವಾಗಿ ಸಿನಿಮಾದ ಮೋಷನ್ ಪಿಕ್ಚರ್ (ಪೋಸ್ಟರ್) ರಿಲೀಸ್ ಆಗಿದೆ.
ಪವನ್ ಶರ್ಮಾ ನಿರ್ದೇಶನ ಮಾಡುತ್ತಿರುವ ಸಿನಿಮಾಕ್ಕೆ ʼಟಿಪ್ಪುʼ ಎಂದು ಟೈಟಲ್ ಇಡಲಾಗಿದ್ದು, ಪೋಸ್ಟರ್ ಹಾಗೂ ಮೋಷನ್ ಪಿಕ್ಷರ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ.
ಬಾಲಿವುಡ್ ಸಿನಿಮಾ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಸಿನಿಮಾದ ಪೋಸ್ಟರ್ ಹಾಗೂ ಮೋಷನ್ ಪಿಕ್ಚರ್ ನ್ನು ಹಂಚಿಕೊಂಡಿದ್ದಾರೆ. ʼವೀರ ಸಾವರ್ಕರ್ʼ ಹಾಗೂ ʼಅಟಲ್ʼ, ʼಬಾಲ್ ಶಿವಾಜಿʼ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಸಂದೀಪ್ ಶರ್ಮಾ, ರಶ್ಮಿ, ಇರೋಸ್ ಇಂಟರ್ ನ್ಯಾಷನಲ್ ನೊಂದಿಗೆ ಸೇರಿಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
8 ಸಾವಿರ ದೇವಸ್ಥಾನ, 27 ಚರ್ಚ್ ಗಳನ್ನು ನಾಶ ಮಾಡಲಾಗಿದೆ. 4 ಮಿಲಿಯನ್ ಹಿಂದೂಗಳನ್ನು ಮತಾಂತರ ಮಾಡಿ, ಬಲವಂತವಾಗಿ ಗೋಮಾಂಸವನ್ನು ಸೇವಿಸಲು ಒತ್ತಾಯಿಸಲಾಗಿದೆ. 1 ಲಕ್ಷಕ್ಕೂ ಅಧಿಕ ಹಿಂದೂಗಳನ್ನು ಜೈಲಿಗೆ ಹಾಕಿ ಶಿಕ್ಷಿಸಿದ್ದಾರೆ. 2000 ಕ್ಕೂ ಅಧಿಕ ಬ್ರಾಹ್ಮಣ ಕುಟುಂಬಕ್ಕೆ ಹಿಂಸೆ ನೀಡಲಾಗಿದೆ. ಆತನ ದುರಾಡಳಿತ 1783 ರಿಂದ ಆರಂಭವಾಯಿತೆಂದು ಮೋಷನ್ ಪಿಕ್ಚರ್ ನಲ್ಲಿ ಹೇಳಲಾಗಿದೆ.
ಈತ ಮತಾಂಧ ಸುಲ್ತಾನ್ ಎಂದು ʼಟಿಪ್ಪುʼವಿನ ಮುಖಕ್ಕೆ ಮಸಿ ಬಳಿದಿರುವ ಪೋಸ್ಟರ್ ನ್ನು ರಿಲೀಸ್ ಮಾಡಿದ್ದಾರೆ.
ಚಿತ್ರವು ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬುವುದನ್ನು ಪೋಸ್ಟರ್ ನಲ್ಲಿ ಉಲ್ಲೇಖ ಮಾಡಿಲ್ಲ.
ಪೋಸ್ಟರ್ ರಿಲೀಸ್ ಆದ ಬಳಿಕ ಅನೇಕರು ಈ ಬಗ್ಗೆ ಪರ ವಿರೋಧ ಚರ್ಚೆಗಳನ್ನು ಶುರು ಮಾಡಿದ್ದಾರೆ. ನೆಟ್ಟಿಗರಲ್ಲಿ ಸದ್ಯ ʼಟಿಪ್ಪುʼ ಸಿನಿಮಾ ಟ್ರೆಂಡಿಂಗ್ ವಿಚಾರವಾಗಿ ಚರ್ಚೆಯಾಗುತ್ತಿದೆ.