Advertisement

ಬಿಗಿ ಬಂದೋಬಸ್ತ್ ನಡುವೆ  ಶಾಂತಿಯುತ ಟಿಪ್ಪು ಜಯಂತಿ

09:53 AM Nov 11, 2018 | Team Udayavani |

ಮಂಗಳೂರು/ಉಡುಪಿ: ಟಿಪ್ಪು ಸುಲ್ತಾನ್‌ ಜಯಂತಿಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದಲ್ಲಿ ಪೊಲೀಸ್‌ ಬಿಗು ಬಂದೋಬಸ್ತ್ನಲ್ಲಿ ಶಾಂತಿಯುತವಾಗಿ ನಡೆಯಿತು. ಆಚರಣೆ ವಿರುದ್ಧ ಪ್ರತಿಭಟನೆ ನಡೆಸಿದ ಬಜರಂಗದಳ, ಶ್ರೀರಾಮ ಸೇನೆ ಕಾರ್ಯಕರ್ತರು ಹಾಗೂ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಸ್ಥಾಪಕ ಹಾಗೂ ಸಂಚಾಲಕ ಫ್ರಾಂಕ್ಲಿನ್ ಮೊಂತೆರೊ ಅವರನ್ನು ಪೊಲೀಸರು ಬಂಧಿಸಿದರು.

Advertisement

 ಜಿಲ್ಲಾಡಳಿತ, ಜಿ.ಪಂ. ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಉಭಯ ಜಿಲ್ಲೆಗಳ ಜಿ.ಪಂ. ಸಭಾಂಗಣದಲ್ಲಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಮಂಗಳೂರಿನಲ್ಲಿ ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಕಾರ್ಯಕ್ರಮ ಉದ್ಘಾಟಿಸಿದರು. ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು. 

ಉಡುಪಿಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಉದ್ಘಾಟಿಸಿದರು. ಜಿಲ್ಲಾ ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿ.ಪಂ. ಉಪ ಕಾರ್ಯದರ್ಶಿ ನಾಗೇಶ್‌ ರಾಯ್ಕರ್‌, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಪಿ. ಇಬ್ರಾಹಿಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್‌ ಉಪಸ್ಥಿತರಿದ್ದರು.  

 ಬಿಗು ಪೊಲೀಸ್‌ ಬಂದೋಬಸ್ತು
ಕಾರ್ಯಕ್ರಮ ಆಯೋಜಿಸಿದ್ದ ಜಿ.ಪಂ. ಕಟ್ಟಡದ ಸುತ್ತ ಹಾಗೂ ಒಳಗೆ ಬಿಗು ಪೊಲೀಸ್‌ ಬಂದೋಬಸ್ತು ಮಾಡಲಾಗಿತ್ತು. ಪ್ರವೇಶ ದ್ವಾರದ ಬಳಿ ಎರಡು ಹಂತಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ ತಪಾಸಣೆ ನಡೆಸಿ ಒಳಗೆ ಬಿಡಲಾಗುತ್ತಿತ್ತು. ಸಭಾಂಗಣದೊಳಗೆ ಪ್ರವೇಶಿಸುವ ಮೊದಲು ಮತ್ತೂಂದು ಸುತ್ತಿನ ತಪಾಸಣೆ ಇತ್ತು.

Advertisement

ಉರ್ವಾಸ್ಟೋರಿನಿಂದ ಕೊಟ್ಟಾರ ಮುಖ್ಯ ರಸ್ತೆ ಹಾಗೂ ಸಂಪರ್ಕ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಿ ತೀವ್ರ ನಿಗಾ ಇರಿಸಲಾಗಿತ್ತು. ಕೆಲವು ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರ ಸಂಜೆ 6 ಗಂಟೆಯಿಂದ ಶನಿವಾರ ಮಧ್ಯರಾತ್ರಿ 12 ಗಂಟೆಯ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ನಗರದಲ್ಲಿ ಹೆಚ್ಚುವರಿಯಾಗಿ 2 ಪ್ಲಟೂನ್‌ ಕೆಎಸ್‌ಆರ್‌ಪಿ ಸಿಬಂದಿಯನ್ನು ನಿಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next