ವಿಧಾನಸಭೆ: ಟಿಪ್ಪು ಜಯಂತಿ ಸರ್ಕಾರಿ ಆಚರಣೆಯನ್ನು ಸರ್ಕಾರ ರದ್ದುಪಡಿಸಿದ ಕ್ರಮದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಷಯ ಪ್ರಸ್ತಾಪಿಸುತ್ತಿದ್ದಂತೆ, ಮುಖ್ಯಮಂತ್ರಿ ಯವರು ಹೊರ ನಡೆದರೆ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕಾಂಗ್ರೆಸ್, ಜೆಡಿಎಸ್ ಶಾಸಕರ ಪ್ರತಿರೋಧದ ನಡುವೆ ಸದನ ಮುಂದೂಡಿದರು.
ನೂತನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಸಿದ್ದರಾಮಯ್ಯ ಅವರು ವಿಷಯ ಪ್ರಸ್ತಾಪಿಸಲು ಮುಂದಾದರು. ಆಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೊದಲೇ ಪ್ರಕಟಿಸಿದಂತೆ ಉದ್ಯಮಿ ವಿ.ಜಿ.ಸಿದ್ಧಾರ್ಥ ಅವರ ಅಂತಿಮ ದರ್ಶನಕ್ಕಾಗಿ ಚಿಕ್ಕಮಗಳೂರಿಗೆ ತೆರಳಲು ಮುಂದಾದರು. ಇದಕ್ಕೆ, ಕಾಂಗ್ರೆಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಆಕ್ಷೇಪಕ್ಕೆ ಬೆಲೆ ಕೊಡದೆ ಯಡಿಯೂರಪ್ಪ ಅವರು ಹೊರಟು ಹೋದರು.
ಇದರಿಂದ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ಗಂಭೀರ ವಿಚಾರ ಪ್ರಸ್ತಾಪಿಸಬೇಕೆಂದು ಹೇಳಿದರೂ ಮುಖ್ಯಮಂತ್ರಿಯವರು ಆಲಿಸದೆ ಹೊರಟಿದ್ದು ಸರಿಯಲ್ಲ. ಸಭಾಧ್ಯಕ್ಷರು ಸೂಚನೆ ನೀಡಿದ್ದರೆ ಅವರು ಕುಳಿತುಕೊಳ್ಳಬೇಕಿತ್ತು. ಸದ್ಯ ಮುಖ್ಯಮಂತ್ರಿಯೊಬ್ಬರೇ ಇದ್ದು, ಸಚಿವರು ಯಾರೂ ಇಲ್ಲ. ಟಿಪ್ಪು ಸುಲ್ತಾನ್ ಜಯಂತಿ ಸರ್ಕಾರಿ ಕಾರ್ಯಕ್ರಮ ಆಚರಣೆಯನ್ನು ಸರ್ಕಾರ ರದ್ದುಪಡಿಸಿದ್ದು, ಆ ಬಗ್ಗೆ ಚರ್ಚಿಸಬೇಕಿತ್ತು. ಮುಖ್ಯಮಂತ್ರಿಗಳೇ ಹೊರಟು ಹೋದ ಮೇಲೆ ಸರ್ಕಾರವೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಕೃಷ್ಣ ಬೈರೇಗೌಡ, ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಪ್ರಸ್ತಾಪಿಸುವ ವಿಚಾರವನ್ನು ಮುಖ್ಯಮಂತ್ರಿಯವರು ಆಲಿಸುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನ ಹಲವು ಶಾಸಕರು ಮುಖ್ಯಮಂತ್ರಿಯವರ ನಡೆಯನ್ನು ಖಂಡಿಸಿದರು. ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಯಾವ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಎಂಬ ಬಗ್ಗೆ ಗಮನ ಸೆಳೆಯುವ ಸೂಚನೆ ಸಲ್ಲಿಸಿಲ್ಲ. ಅವರು ಯಾವ ವಿಚಾರ ಪ್ರಸ್ತಾಪಿಸುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಹೇಳಿದರು.
ಯಾರ ಗಮನ ಸೆಳೆಯಬೇಕು?: ಬಳಿಕ ಸಿದ್ದರಾಮಯ್ಯ ಮುಂದುವರಿದು, “ನಾನು 1983ರಿಂದ ಸದನದಲ್ಲಿ ಇದ್ದೇನೆ. ಗಮನ ಸೆಳೆಯುವ ಸೂಚನೆ ಮಂಡಿಸುವುದು ಒಂದು ವಿಚಾರ. ಗಂಭೀರವಾಗಿರುವ ವಿಚಾರಗಳನ್ನು ತುರ್ತಾಗಿ ಪ್ರಸ್ತಾಪಿಸಲು ಅವಕಾಶವಿದೆ. ವಿಧಾನಸಭೆಯ ಅಧಿವೇಶನವನ್ನು ಒಂದು ದಿನದ ಮಟ್ಟಿಗೆ ಕರೆಯಲಾಗಿದೆ. ಮುಖ್ಯಮಂತ್ರಿಗಳಷ್ಟೇ ಇದ್ದು, ಯಾವುದೇ ಸಚಿವರ ನೇಮಕವಾಗಿಲ್ಲ. ಕೇವಲ ಶಾಸಕರಿದ್ದಾರಷ್ಟೇ.
ಹೀಗಿರುವಾಗ ಯಾರ ಗಮನ ಸೆಳೆಯಬೇಕು. ಮುಖ್ಯಮಂತ್ರಿಯವರು ನಾವು ಪ್ರಸ್ತಾಪಿಸುವ ವಿಚಾರವನ್ನು ಕೇಳದೆ ಹೋದರೆ ಏನರ್ಥ. ಉದ್ಯಮಿ ಸಿದ್ಧಾರ್ಥ ಅವರ ನಿಧನದ ಬಗ್ಗೆ ನಮಗೂ ನೋವಿದೆ. ಆದರೆ, ಟಿಪ್ಪು ಜಯಂತಿ ಸರ್ಕಾರಿ ಆಚರಣೆ ರದ್ದುಪಡಿಸಿದ್ದು, ಆ ಬಗ್ಗೆ ಪ್ರಸ್ತಾಪಿಸಬೇಡವೆ ಎಂದು ಪ್ರಶ್ನಿಸಿದರು. ಇದಕ್ಕೆ ಕಾಂಗ್ರೆಸ್‌ನ ಹಲವು ಶಾಸಕರು ದನಿಗೂಡಿಸಿದರು. ಗದ್ದಲ ಹೆಚ್ಚಾದಂತೆ ಸ್ಪೀಕರ್ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.