Advertisement

ತೊನ್ನು ರೋಗ ಪೂರ್ವ ಜನ್ಮದ ಪಾಪವಲ್ಲ: ಡಾ|ಸುಭಾಶ್‌ ಕಿಣಿ

02:50 AM Jul 16, 2017 | Harsha Rao |

ಉಡುಪಿ: ತೊನ್ನು ರೋಗ ಸಾಂಕ್ರಾಮಿಕವಲ್ಲ, ಮಾರಣಾಂತಿಕವೂ ಅಲ್ಲ. ಕುಷ್ಠ ರೋಗದ ಲಕ್ಷಣವೂ ಇಲ್ಲ. ಅಥವಾ ಪೂರ್ವಜನ್ಮದ ಪಾಪದಿಂದ ತನ್ನಲ್ಲೂ ಈ ರೋಗ ಬರುವುದಲ್ಲ. ಈ ಬಗ್ಗೆ ಜನರಲ್ಲಿನ ಅಪನಂಬಿಕೆ, ತಪ್ಪು ಕಲ್ಪನೆ ಹೋಗಲಾಡಿಸಬೇಕಿದೆ ಎಂದು ಜಿಲ್ಲಾಸ್ಪತ್ರೆಯ ಚರ್ಮರೋಗ ತಜ್ಞ ಡಾ| ಸುಭಾಶ್‌ ಕಿಣಿ ಹೇಳಿದರು. 

Advertisement

ಮಣಿಪಾಲ ಕೆಎಂಸಿ ಚರ್ಮ ರೋಗ ಚಿಕಿತ್ಸಾ ವಿಭಾಗದ ಸಹಯೋಗದಲ್ಲಿ ಭಾರತೀಯ ಚರ್ಮ ರೋಗ, ಲೈಂಗಿಕ ರೋಗ ಹಾಗೂ ಕುಷ್ಠ ರೋಗ ತಜ್ಞರ ಸಂಘ ರಾಜ್ಯ ಶಾಖೆ ಹಾಗೂ ಬೆಂಗಳೂರು ಚರ್ಮ ವೈದ್ಯರ ಸಂಘದ ವತಿಯಿಂದ ಆಯೋಜಿಸಲಾದ ತೊನ್ನು ಸಂಚಾರಿ ಮಾಹಿತಿ ವಾಹಿನಿ ಶನಿವಾರ ಉಡುಪಿ ಕ್ಲಾಕ್‌ ಟವರ್‌ ಬಳಿ ಬಂದಾಗ ನಡೆದ ಜನಜಾಗೃತಿ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದರು. 

ಗುಣಪಡಿಸಲು ಸಾಧ್ಯ
ಪ್ರಾಣಹಾನಿಯಿಲ್ಲದ ಚರ್ಮ ಸಂಬಂಧಿ ರೋಗವಾಗಿದೆ. ಈ ರೋಗವನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ ಔಷಧ ಹಾಗೂ ಶಸ್ತ್ರ ಚಿಕಿತ್ಸೆಯ ಮೂಲಕ  ಸಂಪೂರ್ಣ ಗುಣಪಡಿಸಲು ಸಾಧ್ಯವಿದೆ. ಈ ರೋಗ ಇರುವವರ ಜತೆಗೆ ಇರುವುದರಿಂದ ಹರಡುವುದಿಲ್ಲ ಎಂದೂ ಜನಜಾಗೃತಿ ಚರ್ಮ ಸಂಬಂಧಿ ಕಾಯಿಲೆಯಾಗಿರುವ ತೊನ್ನು ರೋಗದ ಕುರಿತು ಅರಿವು ಮೂಡಿಸುವ, ಅಪನಂಬಿಕೆ ಹೋಗಲಾಡಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಈ ಜನಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ರೋಗದ ಕುರಿತು‌ ಜನಸಾಮಾನ್ಯರಲ್ಲಿರುವ ಗೊಂದಲಗಳನ್ನು ಈ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಕೆಎಂಸಿ ಮಣಿಪಾಲದ ಚರ್ಮರೋಗ ಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ| ಸತೀಶ್‌ ಪೈ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

ಮದುವೆಯಾಗುವುದರಿಂದ ಸಮಸ್ಯೆಯಿಲ್ಲ
ಉಡುಪಿಯ ಚರ್ಮರೋಗ ವೈದ್ಯ ಡಾ| ಶ್ರೀಪತಿ ಭಟ್‌ ಮಾತನಾಡಿ, ತೊನ್ನು ರೋಗ ಪೀಡಿತರನ್ನು ಮದುವೆಯಾಗುವುದರಿಂದ ಯಾವುದೇ ಸಮಸ್ಯೆಯಿಲ್ಲ. ಈ ರೋಗ ಪೀಡಿತರು ಆರೋಗ್ಯವಾಗಿಯೇ ಇರುತ್ತಾರೆ. ಇದರಿಂದ ದೈನಂದಿನ ಜೀವನಕ್ಕೆ ಯಾವ ತೊಂದರೆಯೂ ಇಲ್ಲದೆ ಜೀವನವನ್ನು ನಡೆಸಬಹುದು ಎಂದರು. 
ಮಣಿಪಾಲ, ಉಡುಪಿ ಕ್ಲಾಕ್‌ ಟವರ್‌, ಆನಂತರ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಈ ವಾಹಿನಿ ಮೂಲಕ ಮಾಹಿತಿ ನೀಡಲಾಯಿತು.

ವೈದ್ಯಕೀಯ ಪ್ರತಿನಿಧಿ ಸಂಘದ ಮಧುಸೂದನ್‌ಹೇರೂರು, ರಾಘವೇಂದ್ರ ರಾಜ್‌, ಡಾ| ಸನತ್‌ ರಾವ್‌, ಡಾ| ದೀಪಕ್‌, ಉಡುಪಿ ಪ. ಪೂ. ಕಾಲೇಜಿನ ಎನ್ನೆಸ್ಸೆಸ್‌ ಯೋಜನಾಧಿಕಾರಿ ಪರಮೇಶ್ವರ್‌, ಶ್ರೀನಾಥ್‌ ಕೋಟ,  ಉಡುಪಿ ಪ. ಪೂ. ಕಾಲೇಜಿನ ಎನ್ನೆಸ್ಸೆಸ್‌ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರ್ವಹಿಸಿದರು. 

Advertisement

ತೊನ್ನು ರೋಗ: ಕಾಳಜಿ ಇರಲಿ
ತೊನ್ನುಚರ್ಮ ಬಿಳಿಯಾಗುವ ಒಂದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, 100ರಲ್ಲಿ ಒಬ್ಬರು ಅಥವಾ ಇಬ್ಬರಲ್ಲಿ ಕಾಣಿಸಬಹುದು. ಚರ್ಮಕ್ಕೆ ಬಣ್ಣ ಕೊಡುವ ಕಣದಲ್ಲಿ ಮೆಲನೋಸೈಟ್‌ ಜೀವಕೋಶ ಉತ್ಪತ್ತಿಯಾಗುತ್ತದೆ.  ತೊನ್ನು ಕಾಣಿಸುವ ಜಾಗದಲ್ಲಿ ಈ ಜೀವಕೋಶ ನಾಶವಾಗಿ ಚರ್ಮ ಬಿಳಿಯಾಗುತ್ತದೆ. ಪ್ರತಿಶತ 80 ಜನರಲ್ಲಿ ಆನುವಂಶೀಯವಾಗಿ ಕಂಡುಬಂದಿಲ್ಲ. ಐದು ಕುಟುಂಬದಲ್ಲಿ ಒಂದು ಕುಟುಂಬದಲ್ಲಿ ಮಾತ್ರ ಬರುವ ಸಾಧ್ಯತೆಯಿರುತ್ತದೆ. ಎಲ್ಲ ಬಿಳಿ ಮಚ್ಚೆಗಳು ತೊನ್ನು ರೋಗವಲ್ಲ. ಸ್ಟಿರಾಯಿಡ್‌, ಟ್ರಾಕ್ರೋಲಿಮಸ್‌ ಔಷಧಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ಮಚ್ಚೆಗಳಿಗೆ ಫೋಟೋಥೆರಪಿ, ಶಸ್ತ್ರಚಿಕಿತ್ಸೆಯಿಂದ ಮಚ್ಚೆಗಳನ್ನು ಕಪ್ಪಾಗಿಸಬಹುದು. ಈ ರೋಗ ಪೀಡಿತರು ಮಾನಸಿಕ ತಳಮಳ, ಖನ್ನತೆಗೆ ಒಳಗಾಗುವುದರಿಂದ ಅವರ ಬಗ್ಗೆ ಕಾಳಜಿ ಇರಲಿ. 

Advertisement

Udayavani is now on Telegram. Click here to join our channel and stay updated with the latest news.

Next