Advertisement
ಡಿಜಿಟಲ್ ವ್ಯವಸ್ಥೆಯಲ್ಲಿ ಭೂಮಿಗೆ ಸಂಬಂಧಿಸಿದ ಎಲ್ಲ ಮಾಹಿತಿ, ದಾಖಲೆ ಹಾಗೂ ಸೇವೆಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಒದಗಿಸುವ ಗುರಿಯೊಂದಿಗೆ ಸಮಗ್ರ ಭೂ ದಾಖಲೆಗಳನ್ನು ಜಾಲತಾಣ ವ್ಯವಸ್ಥೆಗೆ ಒಳಪಡಿಸುವ ಮೂಲಕ “ಎಂಡೆ ಭೂಮಿ’ (ನನ್ನ ಭೂಮಿ, ಮೈ ಲ್ಯಾಂಡ್) ಸಂಯೋಜಿತ ವೆಬ್ ಪೋರ್ಟಲ್ ಆನ್‌ಲೈನ್ ಸೇವೆಯನ್ನು ಕಾಸರಗೋಡು ಜಿಲ್ಲಾದ್ಯಂತ ವಿಸ್ತರಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಯುತ್ತಿದೆ. “ಮೈ ಲ್ಯಾಂಡ್’ ಅಥವಾ “ನನ್ನ ಭೂಮಿ’ ಸಂಯೋಜಿತ ಪೋರ್ಟಲ್ ಭೂಮಿ ಯೋಜನೆ ಭಾಗವಾಗಿ ಉಜಾರು ಉಳುವಾರು ಗ್ರಾಮದಲ್ಲಿ ದಾಖಲೆ ಪತ್ರಗಳು, ಮಾಹಿತಿಗಳು ಹಾಗೂ ಎಲ್ಲ ಕಂದಾಯ ಸೇವೆಗಳು ಸ್ಮಾರ್ಟ್ ಆಗಿದ್ದು, ಈ ಗ್ರಾಮಸ್ಥರಿಗೆ ಭೂಮಿಗೆ ಸಂಬಂಧಪಟ್ಟ ಎಲ್ಲ ವ್ಯವಸ್ಥೆಗಳು ಸುಲಭದಲ್ಲಿ ದೊರಕಲಿವೆ.
ಮಂಜೇಶ್ವರ ತಾಲೂಕಿನ ಉಜಾರು ಉಳುವಾರು ಗ್ರಾಮದಲ್ಲಿ ಈ ಯೋಜನೆ ಪೂರ್ಣರೂಪವಾಗಿ ಕಾರ್ಯಗತಗೊಂಡಿದೆ. ಈ ಗ್ರಾಮ ದೇಶದಲ್ಲೇ ಮೊದಲ ಡಿಜಿಟಲ್ ಭೂಮಿಯಾಗಿ ಗುರುತಿಸಲ್ಪಟ್ಟಿರುವುದು ಕಾಸರಗೋಡು ಜಿಲ್ಲೆಗೆ ಹೆಮ್ಮೆಯಾಗಿದೆ. ಇದರೊಂದಿಗೆ ಪ್ರಥಮ ಹಂತದಲ್ಲಿ ಡಿಜಿಟಲ್ ಸಮೀಕ್ಷೆ ಪೂರ್ಣಗೊಳಿಸಿದ ಕೇರಳದ 200 ಗ್ರಾಮಗಳಲ್ಲಿ ಡಿಜಿಟಲ್ ಸೇವೆಯು ಮೈ ಲ್ಯಾಂಡ್ ಪೋರ್ಟಲ್ ಮೂಲಕ ಲಭ್ಯವಾಗಲಿದೆ.