Advertisement

ಸಾಲ ಮನ್ನಾ ಅರ್ಹತಾ ಪಟ್ಟಿಗೆ ಸೇರಲು ಕಾಲಾವಕಾಶ

11:22 PM Sep 29, 2020 | mahesh |

ಪುತ್ತೂರು: ಬೆಳೆ ಸಾಲ ಮನ್ನಾ ಸೌಲಭ್ಯಕ್ಕೆ ಸಂಬಂಧಿಸಿ ಸಾಲ ಮನ್ನಾ ಹಸಿರು ಪಟ್ಟಿಗೆ (ಅರ್ಹತೆ) ಸೇರಲು ಬಾಕಿ ಇರುವ ರಾಜ್ಯದ 1,67,851 ರೈತರ ಖಾತೆಗಳನ್ನು ಮಾಹಿತಿ ದೃಢೀಕರಣ ಅಧಿಕಾರಿಗಳು ಕೆಲವು ಮಾರ್ಗಸೂಚಿಗಳನ್ವಯ ಪರಿಶೀಲಿಸಿ ಅ. 12ರೊಳಗೆ ವಿಲೇವಾರಿ ಮಾಡುವಂತೆ ಸರಕಾರ ಅಂತಿಮ ಸೂಚನೆ ನೀಡಿದೆ. ಇದರಿಂದ ಹಲವು ಕಾರಣಗಳಿಂದ ಗ್ರೀನ್‌ಲಿಸ್ಟ್‌ನಿಂದ ಹೊರಗುಳಿದು ಸಾಲಮನ್ನಾ ಸೌಲಭ್ಯ ವಂಚಿತರಾಗಿರುವ ರೈತರಿಗೆ ಸೌಲಭ್ಯ ಪಡೆಯಲು ಮತ್ತೂಂದು ಅವಕಾಶ ಲಭಿಸಿದೆ.

Advertisement

ಎಡಿಟ್‌ಗೆ ಅವಕಾಶ
ಡಿಸಿಸಿ ಬ್ಯಾಂಕ್‌ಗಳ ಸಿಇಒಗಳು ಮತ್ತು ಸಹಕಾರ ಸಂಘಗಳ ಉಪ ನಿಬಂಧಕರು ತಾಲೂಕುವಾರು ಸಂಘಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ವಿಲೇ ಮಾಡಲು ಉಸ್ತುವಾರಿ ವಹಿಸಬೇಕಿದೆ. ಮಾಹಿತಿಯನ್ನು ಡಿಸಿಸಿ ಬ್ಯಾಂಕ್‌ ಸಿಇಒಗಳು ಮತ್ತು ಉಪ ನಿಬಂಧಕರ ದೃಢೀಕರಣದೊಂದಿಗೆ ಅ. 15 ರೊಳಗೆ ಸಲ್ಲಿಸಲು ಸೂಚಿಸಲಾಗಿದೆ. ಇದರ ಆಧಾರದಲ್ಲಿ ಮಾಹಿತಿಯನ್ನು ತಂತ್ರಾಂಶದಲ್ಲಿ ಎಡಿಟ್‌ ಮಾಡಲು ಅವಕಾಶ ಒದಗಿಸಲು ಸಾಲಮನ್ನಾ ಕೋಶಕ್ಕೆ ಸೂಚಿಸಲು ನಿರ್ಧರಿಸಲಾಗಿದೆ.

ವಿಫಲವಾದರೆ ಕ್ರಮ
ಸರಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲು ವಿಫಲವಾದಲ್ಲಿ ಸಂಬಂಧಪಟ್ಟ ದೃಢೀಕರಣ ಮಾಡಬೇಕಾದ ಅಧಿಕಾರಿಗಳ ಜತೆಯಲ್ಲಿ ಡಿಸಿಸಿ ಬ್ಯಾಂಕುಗಳ ಸಿಇಒಗಳು, ಪ್ರಾಂತೀಯ ಸಹಕಾರ ಸಂಘಗಳ ಜಂಟಿ ನಿಬಂಧಕರು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ರಾಜ್ಯ ಸಹಕಾರ ಸಂಘಗಳ ನಿಬಂಧಕರು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಹಲವು ನಿರ್ದೇಶನ
23,528 ರೈತರ ಒಂದೇ ಆಧಾರ್‌ ಸಂಖ್ಯೆ ಎರಡಕ್ಕಿಂತ ಹೆಚ್ಚಿನ ಸಾಲದ ಖಾತೆಯಲ್ಲಿದೆ. ಇಂತಹ ಖಾತೆಗಳನ್ನು ಪರಿಗಣಿಸುವ ಸಂದರ್ಭ ಮೊದಲ ಸಾಲದ ಗಡುವು ಬರುವ ಸಹಕಾರ ಸಂಘ ಅಥವಾ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾವನ್ನು ಅರ್ಹ ಮೊತ್ತವನ್ನಾಗಿ ಪರಿಗಣಿಸುವುದು, ಒಂದೇ ಸಂಘದಲ್ಲಿ ಎರಡು ಖಾತೆ ಹೊಂದಿದ್ದರೆ ಇಲಾಖಾಧಿಕಾರಿಗಳಿಂದ ಅಂತಿಮವಾಗಿ ದೃಢೀಕರಣಗೊಂಡ ಖಾತೆ ಪರಿಗಣಿಸ ಬೇಕು. 23,361 ಖಾತೆಗಳಲ್ಲಿ ರೈತರ ಸ್ವಯಂ ದೃಢೀಕರಣದಲ್ಲಿನ ಆಧಾರ್‌, ರೇಷನ್‌ ಕಾರ್ಡ್‌ ಮತ್ತು ಆರ್‌ಟಿಸಿ ದಾಖಲೆಗಳು ದೃಢೀಕರಣಗೊಳ್ಳದೆ ಇದ್ದು, ಅ. 15ರೊಳಗೆ ದೃಢೀಕರಿಸಲು ಸೂಚಿಸಲಾಗಿದೆ. 2020 ಜು. 5ರ ಅನಂತರ ಹೊಸದಾಗಿ ಪಡಿತರ ಚೀಟಿ ಪಡೆದವರು ಗ್ರೀನ್‌ ಲಿಸ್ಟ್‌ನಲ್ಲಿ ಹಳೆ ಪಡಿತರ ಚೀಟಿ ಹೊಂದಿದ್ದರೆ ಅಂತಹವರನ್ನು ಬೆಳೆ ಸಾಲ ಮನ್ನಾ ವಿಶೇಷ ಕೋಶದಿಂದ ಪ್ರತ್ಯೇಕವಾಗಿ ಪರಿಶೀಲಿಸಿ, ಉಳಿದ ರೈತರ ಖಾತೆಗಳ ಬಗ್ಗೆ ತಾಲೂಕು ಸಮಿತಿ ಪರಿಶೀಲನೆ ಮಾಡುವುದು ಸೇರಿದಂತೆ ಹಲವು ನಿರ್ದೇಶನಗಳನ್ನು ನೀಡಲಾಗಿದೆ.

ಗ್ರೀನ್‌ಲಿಸ್ಟ್‌ಗೆ ಸೇರಲು ಬಾಕಿ ಇರುವ ಖಾತೆಗಳ ಅರ್ಹತೆಯನ್ನು ಪರಿಶೀಲಿಸಿ ಅ. 12ರೊಳಗೆ ವಿಲೇ ಮಾಡುವಂತೆ ಸೂಚಿಸಲಾಗಿದೆ. ಮಾಹಿತಿಯನ್ನು ಡಿಸಿಸಿ ಬ್ಯಾಂಕ್‌ ಮುಖ್ಯ ಕಾರ್ಯನಿರ್ವಾಹಣಧಿಕಾರಿಗಳು ಮತ್ತು ಉಪ ನಿಬಂಧಕರ ದೃಢೀಕರಣದೊಂದಿಗೆ ಅ. 15ರೊಳಗೆ ಸಲ್ಲಿಸಬೇಕು. ಇದರ ಆಧಾರದಲ್ಲಿ ಎಡಿಟ್‌ ಮಾಡಲು ಅವಕಾಶ ಒದಗಿಸಲು ಸಾಲ ಮನ್ನಾ ಕೋಶಕ್ಕೆ ಕೋರಲಾಗುವುದು.
– ಎಸ್‌. ಜಿಯಾಉಲ್ಲಾ ರಾಜ್ಯ ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು

Advertisement

ಗ್ರೀನ್‌ಲಿಸ್ಟ್‌ಗೆ ಬಾಕಿ ಇರುವ ರೈತರು 1,67,851
ಎರಡಕ್ಕಿಂತ ಹೆಚ್ಚು ಸಮಸ್ಯೆ ಇರುವವರು 45,137
ಸ್ವಯಂ ದೃಢೀಕರಣದ ಲೋಪ 23,361
ಅಪ್‌ಲೋಡ್‌ ಆಗದಿರುವವರು 11,224
ಪರಿಶೀಲನೆಗೆ ಬಾಕಿ ಇರುವುದು 5,504
ಅಸಲು-ಬಡ್ಡಿ ಪಾವತಿಸದಿರುವುದು 7,311
ಏಕಸದಸ್ಯ ಪಡಿತರ ಚೀಟಿ 68,032
ಪಿಂಚಣಿ, ವೇತನ, ತೆರಿಗೆ ಷರತ್ತು 9,920

Advertisement

Udayavani is now on Telegram. Click here to join our channel and stay updated with the latest news.

Next