Advertisement

ಕಾಲ-ವ್ಯಾಪ್ತಿ ಮೀರಿದ್ದೇ ಹಿಂದೂ ಧರ್ಮ: ನಿರ್ಭಯಾನಂದ ಶ್ರೀ

10:59 AM Jun 03, 2018 | Team Udayavani |

ವಿಜಯಪುರ: ಹಿಂದೂ ಧರ್ಮದ ಮೂಲ ಕಾಲಗಣನೆಯ ವ್ಯಾಪ್ತತೆ ಮೀರಿದ್ದಾಗಿದೆ. ಹಿಂದೂ ಧರ್ಮದ ಪ್ರಾರಂಭಿಕ ತತ್ವಗಳಲ್ಲೇ ಅದೊಂದು ಪ್ರಬುದ್ಧ, ಪರಿಪೂರ್ಣ ಹಾಗೂ ಆಧುನಿಕ ವಿಜ್ಞಾನದ ಪ್ರತಿ ಧ್ವನಿಯಂತೆ ಕಂಡು ಬಂದಿದೆ.
ಇದೇ ಕಾರಣಕ್ಕೆ ವಿಶ್ವದ ಚಿಂತನ ಚೌಕಟ್ಟಿನಲ್ಲಿ ಪರಮ ಅದ್ಭುತವಾಗಿ ಕಂಗೊಳಿಸುತ್ತಿದೆ ಎಂದು ಗದಗ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತೀಜಿ ಬಣ್ಣಿಸಿದರು.

Advertisement

ಅವರು ರೋಮ್‌ ದೇಶದ ವ್ಯಾಟಿಕನ್‌ ನಗರದಲ್ಲಿ ವ್ಯಾಟಿಕನ್‌ ಚರ್ಚ್‌ನ ಕಾಂಡಿಫೀಕಲ್‌ ಕೌನ್ಸಿಲ್‌ ಫಾರ್‌ ಇಂಟರ್‌ ರಿಲಿಜಿಯಸ್‌ ಡಯಲಾಗ್‌ ಎಂಬ ಅಂಗ ಸಂಸ್ಥೆಯಿಂದ ಆಯೋಜಿಸಿದ್ದ ಅಂತರ್ಧರ್ಮೀಯ ಸಂವಾದ ಮತ್ತು ಚರ್ಚೆಯಲ್ಲಿ ಹಿಂದೂ ಧರ್ಮದ ಬಗ್ಗೆ ಶ್ರೀಗಳು ಮಾತನಾಡಿದರು.

“ಶೃತಿ ಮತ್ತು ಸ್ಮೃತಿಗಳು ಸನಾತನ ಹಾಗೂ ಯುಗ ಧರ್ಮಗಳೆಂದು ಪರಿಗಣಿತವಾಗಿವೆ. ವೇದಗಳ ಕರ್ಮಕಾಂಡದ ತಾರ್ಕಿಕ ಪರಿಪೂರ್ಣತೆಯೇ ಜ್ಞಾನಕಾಂಡ. ಪ್ರಸ್ಥಾನತ್ರಯಗಳಾದ ವೇದೋಪನಿಷತ್‌, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಹಿಂದೂ ಧರ್ಮದ ಆಧಾರಸ್ತಂಭಗಳಾದರೆ ನಾಲ್ಕು
ಯೋಗಗಳೇ ಅದರ ಸಾರ ಎಂದು ವಿವರಿಸಿದರು. 

ಏಕಂ ಸತ್‌ ವಿಪ್ರಾಃ ಬಹುಧಾ ವದಂತಿ ಎನ್ನುವುದು ಜಗತ್ತಿನ ಮಹಾನಿಯಮ. ಅಂದರೆ ಒಂದೇ ಸತ್ಯವನ್ನು ಹಲವು ಹೆಸರುಗಳಿಂದ ಕರೆಯುತ್ತಾರೆ. ಆದರೆ ಸರ್ವ ಖಲ್ವಿದಂ ಬ್ರಹ್ಮ ಅಂದರೆ ಎಲ್ಲವೂ ಬ್ರಹ್ಮವೇ ಆಗಿದೆ ಎನ್ನುವುದು ಅದರ ತಾರ್ಕಿಕ ಮುಂದುವರಿಕೆಯಾಗಿದೆ. ಇದೇ ಆಧುನಿಕ ವಿಜ್ಞಾನದ ಹಲವು ನಿಯಮಗಳಿಗೆ ಆಧಾರವಾಗಿದೆ ಎಂದು ವಿಶ್ಲೇಷಿಸಿದರು. ಮೃತ್ಯುವಿನ ವಿಶ್ಲೇಷಣೆಯಲ್ಲಿ ತೊಡಗಿದ ಭಾರತೀಯರಿಗೆ ದಕ್ಕಿದ ಮಹಾನ್‌ ಸಂಶೋಧನೆಯೇ ಮಾನವ ಒಂದು ಸಂಕೀರ್ಣ ವ್ಯವಸ್ಥೆ ಎಂಬುದು.

ದಿವ್ಯತೆ ಅದರ ಸಾರ. ಆ ನೆಲೆಯಲ್ಲಿ ಮನುಷ್ಯ ಅನಂತ. ಆದ್ದರಿಂದ ತನ್ನ ನಿಜದ ನೆಲೆಯಲ್ಲಿ ಅವನು ಏಕ. ಅನೇಕ ಎಂಬುದು ಕೇವಲ ಬಾಹ್ಯ ಆವಿರ್ಭಾವ. ಅದೊಂದು ವ್ಯಾವಹಾರಿಕ ಅವಶ್ಯಕತೆ. ವ್ಯವಹಾರದ ಗುರಿಯೇ ಏಕತ್ವವನ್ನು ಅರಿಯುವುದು. ಒಂದು ಸಂಕೀರ್ಣವಾಗಿ ಮನುಷ್ಯನಲ್ಲಿ ವ್ಯತ್ಯಾಸಗಳಿರುವುದು ಅವನ ಸಂಸ್ಕಾರಗಳ ವ್ಯತ್ಯಾಸದಿಂದ. ಆದ್ದರಿಂದ ಅವನ ದೇವರ ಕಲ್ಪನೆಯಲ್ಲೂ ವ್ಯತ್ಯಾಸವಿದೆ. 

Advertisement

ವ್ಯತ್ಯಾಸಗಳಿರುವುದು ವ್ಯಕ್ತತೆಯಲ್ಲೇ ಹೊರತು ವಸ್ತುವಿನಲ್ಲಲ್ಲ ಎಂದರು. ಆದ್ದರಿಂದಲೇ ಹಿಂದುವಿಗೆ ದೇವರಲ್ಲಿ, ಧಮ-ಮತಗಳಲ್ಲಿ ಬರುವ ಭಿನ್ನತೆ ಆದರಣೀಯ, ಘರ್ಷಣೆಯಲ್ಲ. ಏಕತ್ವದ ಕಡೆಗೆ ಸಾಗಿದಂತೆ ಅವನ ದೃಷ್ಟಿ ವಿಶಾಲವಾಗುತ್ತಾ ಅದೇ ನೈತಿಕತೆ, ನಿಸ್ವಾರ್ಥತೆ, ಸೇವಾಭಾವಕ್ಕೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದಲೇ ಹಿಂದೂ ದೇಶದಲ್ಲಿ ಮತೀಯ ಘರ್ಷಣೆ, ಜನಾಂಗೀಯ ಘರ್ಷಣೆ ನಡೆದೇ ಇಲ್ಲೆ ಎಂದು ವಿಶ್ಲೇಷಿಸಿದರು. 

ಸಮ್ಮೇಳನದಲ್ಲಿ ಬೌದ್ಧ ಧರ್ಮದ ಮೇರಿಯಾ ಏಂಜಲಾ ಫಾಳಾ, ಕ್ರಿಶ್ಚಿಯನ್‌ ಧರ್ಮದ ಮೇರಿಯಾ ಡೆ ಜಿಯೋರ್ಗಿ, ಜೈನ ಧರ್ಮದ ಲಂಡನ್ನಿನ ಯಶವಂತಿ ಶಾ ಮತ್ತು ಶೃತಿ ಜೈನ್‌ ಅವರು ತಮ್ಮ ತಮ್ಮ ಧರ್ಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. 

ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತೀಜಿ, ಸ್ವಾಮಿ ಪರಮಾನಂದಜೀ, ಮ್ಯಾರಿಸ್‌ನ ಡಾ| ಸ್ಟಿಫಾನೋ ದಿಯಾನೋ, ಇಟಲಿಯ ಸ್ವಾಮಿಯೋಗಾನಂದಗಿರಿ ಶ್ರೀಗಳು ಸೇರಿದಂತೆ ಇತರರು ಇದ್ದರು. ವ್ಯಾಟಿಕನ್‌ ಚರ್ಚ್‌ನ ನಿಯೋಜಿತ ಪ್ರತಿನಿಧಿ ರೆವರೆಂಡ್‌ ಬ್ರ್ಯಾನ್‌ ಲೋಬೊ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next