ಬೆಂಗಳೂರು: ಎರಡು ರಾಜ್ಯಗಳ ನಡುವಿನ ಗಡಿ ಸಮಸ್ಯೆ ಬರೀ ಮನುಷ್ಯರಿಗೆ ಮಾತ್ರ ಎಂಬುದನ್ನು ನೋಡಿದ್ದೇವೆ. ಆದರೆ, ಬೇಟೆಗಾರರಿಂದ ಬಲಿಯಾದ ಹುಲಿಯೊಂದರ ಮರಣೋತ್ತರ ಪರೀಕ್ಷೆಗೂ ಈಗ ಗಡಿ ಸಮಸ್ಯೆ ಎದುರಾಗಿದೆ.
ಹೌದು! ಮೂರು ತಿಂಗಳ ಹಿಂದೆ ತಮಿಳುನಾಡಿನ ಸತ್ಯಮಂಗಲ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿಯನ್ನು ಕೊಂದಿದ್ದ ಮೂವರು ಆರೋಪಿಗಳು ಯಶವಂತಪುರ ಬಳಿ ಹುಲಿ ಚರ್ಮ ಮಾರಾಟಕ್ಕೆ ಬಂದಾಗ ಖರೀದಿದಾರ ಸೇರಿದಂತೆ ನಾಲ್ವರನ್ನು ಆರ್‌ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದರು. ಆದರೆ, ಇದೀಗ ತಮಿಳುನಾಡು ಅರಣ್ಯಾಧಿಕಾರಿಗಳು ನಮ್ಮ ವ್ಯಾಪ್ತಿಯಲ್ಲಿ ಹುಲಿ ಕೊಂದಿಲ್ಲ. ಘಟನೆಗೂ ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ನಿರ್ಲಕ್ಷ್ಯ ತೋರುತ್ತಿದ್ದಾರೆ.
ಆದರೆ, ಬಂಧಿತ ಆರೋಪಿಗಳಾದ ಸತ್ಯಮಂಗಲ ಜಿಲ್ಲೆಯ ಬಾಲಕೃಷ್ಣ , ಮಹೇಶ, ರಂಗರಾಜ ಹುಲಿಯ ನ್ನು ಕೊಂದಿದ್ದು, ತಮಿಳುನಾಡಿನ ಸತ್ಯಮಂಗಲ ಕಾಡಿನಲ್ಲೇ ಎನ್ನುತ್ತಿದ್ದಾರೆ. ಜತೆಗೆ ಘಟನಾ ಸ್ಥಳಕ್ಕೆ ತೆರಳಿದ್ದ ಆರ್‌ಎಂಸಿ ಯಾರ್ಡ್ ಪೊಲೀಸರು ಕೂಡ ಹುಲಿಕೊಂದು ಚರ್ಮ ಸುಲಿದ ಸ್ಥಳ ತಮಿಳುನಾಡು ಅರಣ್ಯ ಪ್ರದೇಶಕ್ಕೆ ಸೇರಿದ್ದು, ಆರೋಪಿಯ ಮನೆಯಲ್ಲಿದ್ದ ಹುಲಿಯ ಚರ್ಮ ಹಾಗೂ ಹಲ್ಲುಗಳನ್ನು ಅಲ್ಲಿಂದಲೇ ವಶಕ್ಕೆ ಪಡೆಯಲಾಗಿದೆ.
ಆದರೆ ಅರಣ್ಯ ಸಿಬ್ಬಂದಿ ನಮ್ಮ ವ್ಯಾಪ್ತಿಯಲ್ಲಿ ಘಟನೆ ಜರುಗಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಹುಲಿ ಚರ್ಮ ಮತ್ತು ಹಲ್ಲುಗಳನ್ನು ವಿಧಿವಿಜ್ಞಾನ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ “ಉದಯವಾಣಿ’ಗೆ ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನತಿ ಶ್ರೀಧರ್ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ತಮಿಳುನಾಡಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಜತೆ ಚರ್ಚಿಸಿದ್ದು, ಬಂಧಿತ ಬೇಟೆಗಾರರ ಜಾಲ ಕುರಿತು ಹೆಚ್ಚು ಮಾಹಿತಿ ಸಂಗ್ರಹಿಸಲು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜ.22ರಂದು ಆರ್‌ಎಂಸಿ ಯಾರ್ಡ್ ಪೊಲೀಸರು ಯಶವಂತಪುರ ಹೂವಿನ ಮಾರುಕಟ್ಟೆ ಬಸ್ ನಿಲ್ದಾಣದಲ್ಲಿ ಗೋಣಿಚೀಲದಲ್ಲಿ ಹುಲಿಯ ಚರ್ಮ ಹಾಗೂ ಹಲ್ಲುಗಳನ್ನು ತುಂಬಿಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಸತ್ಯಮಂಗಲ ಜಿಲ್ಲೆಯ ಬಾಲಕೃಷ್ಣ ಡಿ. (28) ಮಹೇಶ (23) ರಂಗರಾಜ (36) ಎಂಬುವವರನ್ನು ಬಂಧಿಸಿದ್ದರು. ಬಳಿಕ ಖರೀದಿದಾರ ಮಲ್ಲಪನನ್ನೂ ಬಂಧಿಸಲಾಗಿತ್ತು