ಬೆಳ್ತಂಗಡಿ : ತಾಲೂಕಿನಲ್ಲಿ ಒಟ್ಟು 4 ಮಂಗಗಳ ಮೃತದೇಹಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮಂಗನ ಕಾಯಿಲೆಯ ಭೀತಿಯಿಂದ ಆರೋಗ್ಯ ಇಲಾಖೆ ತಂಡ ಈಗಾಗಲೇ ಉಣ್ಣಿ ಸಂಗ್ರಹ ಕಾರ್ಯ ಪೂರ್ಣಗೊಳಿಸಿದ್ದು, ಮನೆ ಮನೆ ಸರ್ವೆ ಕಾರ್ಯದಲ್ಲಿ ಈಗಾಗಲೇ 200ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿದೆ.
ಉಜಿರೆ ಪೇಟೆ ಸಮೀಪ, ಅತ್ತಾಜೆ ಪಾರಾ, ಕನ್ನಾಜೆಬೈಲಿನಲ್ಲಿ ಪತ್ತೆಯಾದ ಮೃತ ದೇಹಗಳನ್ನು ಅಧಿಕಾರಿಗಳ ತಂಡ ಪರಿ ಶೀಲಿಸಿ, ದಹನ ನಡೆಸಿತ್ತು. ಆದರೆ ಗುರುವಾಯನಕೆರೆ ಸಮೀಪದ ಶಕ್ತಿನಗರದಲ್ಲಿ 10 ದಿನಗಳ ಹಿಂದೆ ಮಂಗ ಸತ್ತಿದ್ದು, ಮಾಹಿತಿ ಕೊರತೆಯಿಂದ ಅದನ್ನು ಅಧಿಕಾರಿಗಳಿಗೆ ತಿಳಿಸದೆ ಸ್ಥಳೀಯರು ಹೂತು ಹಾಕಿದ್ದರು.
ಒಟ್ಟು 4 ಕಡೆಗಳಲ್ಲಿ ವಿಶೇಷ ತಂಡದಿಂದ ಉಣ್ಣಿ ಸಂಗ್ರಹ ಕಾರ್ಯ ನಡೆದಿದೆ. ಅಪರಾಹ್ನ 1.30ಕ್ಕೆ ಆರಂಭಗೊಂಡ ಕಾರ್ಯ ಸಂಜೆ 5.30ರ ವರೆಗೆ ಮುಂದುವರಿದಿತ್ತು. ಅತ್ತಾಜೆ ಪಾರಾದಲ್ಲಿ ಒಟ್ಟು 8 ಹಾಗೂ ಶಕ್ತಿನಗರದಲ್ಲಿ 10 ಉಣ್ಣಿಗಳು ಪತ್ತೆಯಾಗಿವೆ. ಅದನ್ನು ಶಿವಮೊಗ್ಗಕ್ಕೆ ಕಳುಹಿಸಿ, ಮುಂದಿನ ಒಂದು ವಾರದೊಳಗೆ ವರದಿ ಆರೋಗ್ಯ ಇಲಾಖೆಯ ಕೈಸೇರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೀಟ ತಂತ್ರಜ್ಞೆ ಮಂಜುಳಾ ಅವರ ನೇತೃತ್ವದಲ್ಲಿ ಈ ಕಾರ್ಯ ನಡೆದಿದ್ದು, ಸುಮಾರು 2 ಅಡಿ ಉದ್ದಗಲದ ಬಿಳಿ ಬಟ್ಟೆಯನ್ನು ಒಂದು ಕೋಲಿನ ಸಹಾಯದಿಂದ ಗುಡಿಸಲಾಗುತ್ತದೆ. ಆಗ ಅಲ್ಲಿ ಉಣ್ಣಿಗಳಿದ್ದರೆ ಅದು ಬಟ್ಟೆಯಲ್ಲಿ ಹಿಡಿದುಕೊಳ್ಳುತ್ತದೆ. ಬಳಿಕ ಅದನ್ನು ಟ್ಯೂಟ್‌ನೊಳಗೆ ಸಂಗ್ರಹಿಸಲಾಗುತ್ತದೆ.
ಜತೆಗೆ ಮನೆ ಮನೆ ಸರ್ವೆ ಕಾರ್ಯವೂ ನಡೆಯುತ್ತಿದ್ದು, ತಾಲೂಕಿನಲ್ಲಿ ಈ ತನಕ ಜ್ವರದ ಯಾವುದೇ ಪ್ರಕರಣ ಕಂಡುಬಂದಿಲ್ಲ ಎಂದು ಇಲಾಖೆ ತಿಳಿಸಿದೆ. ಉಣ್ಣಿಗಳ ಸಂಗ್ರಹ ಕಾರ್ಯ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ಹೆಲ್ತ್ ಇನ್ಸ್‌ಪೆಕ್ಟರ್ ಸ್ವತಂತ್ರ ರಾವ್, ಕೆಎಫ್‌ಡಿ ಸಿಬಂದಿ ಅಶೋಕ್, ಸೋಮನಾಥ, ಗಿರೀಶ್, ಪ್ರಮೋದ್ ಮೊದಲಾದವರಿದ್ದರು.
ಸರ್ವೆ ಕಾರ್ಯ
ಉಜಿರೆ, ಪಡಂಗಡಿ ಪ್ರಾ. ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 200 ಮನೆಗಳಿಗೆ ಭೇಟಿ ನೀಡಲಾಗಿದೆ. ಉಜಿರೆ ಕೇಂದ್ರದ ವ್ಯಾಪ್ತಿಯಲ್ಲಿ ಜ. 11ರಿಂದ 170 ಮನೆಗಳಿಗೆ ಭೇಟಿ ನೀಡಲಾಗಿದ್ದು, 3 ಸಾವಿರಕ್ಕೂ ಅಧಿಕ ಮಂದಿಯ ಸರ್ವೆ ನಡೆದಿದೆ. ಪಡಂಗಡಿ ಕೇಂದ್ರದಲ್ಲಿ ಜ. 14 ರಂದು 30 ಮನೆಗಳಿಗೆ ಭೇಟಿ ನೀಡಿದ್ದು, 121 ಮಂದಿಯ ಸರ್ವೆ ನಡೆದಿದೆ. ಜತೆಗೆ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳ ಕುರಿತೂ ವಿಶೇಷ ನಿಗಾ ಇರಿಸಲಾಗಿದೆ. ಮುಂದೆ ಇನ್ನಷ್ಟು ಮನೆಗಳ ಸರ್ವೆ ಕಾರ್ಯ ನಡೆಯಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.