Advertisement

ಕಡಲ ನಗರಿಯಲ್ಲಿ ಹೊಸ ವರ್ಷದ ಸಂಭ್ರಮ

11:30 PM Dec 31, 2024 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು.

Advertisement

ಮಂಗಳೂರು ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಸಂಗೀತ, ನೃತ್ಯ ಸಹಿತ ಮನೋರಂಜನ ಚಟುವಟಿಕೆಗಳು, ಸಂಭ್ರಮ ಕೂಟಗಳು ಮಂಗಳವಾರ ಸಂಜೆಯಿಂದಲೇ ಆರಂಭಗೊಂಡು ತಡರಾತ್ರಿ ವರೆಗೂ ಮುಂದುವರಿಯಿತು.

ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ, ಉಳ್ಳಾಲ ಬೀಚ್‌ಗಳಲ್ಲಿ ಪ್ರವಾಸಿಗರ ದಂಡು ಕಂಡು ಬಂತು. ಹೊಟೇಲ್‌, ರೆಸಾರ್ಟ್‌, ಹೋಂ ಸ್ಟೇಗಳು ಬಹುತೇಕ ಭರ್ತಿಯಾಗಿದ್ದವು. ಮಲ್ಪೆ, ಕಾಪು ಇತರ ಬೀಚ್‌ಗಳಲ್ಲಿ ಜನರು ಸಂಭ್ರಮಾಚರಣೆ ನಡೆಸಿದರು. ಹೊರ ಜಿಲ್ಲೆ/ರಾಜ್ಯದ ಪ್ರವಾಸಿಗರು ಭಾಗವಹಿಸಿದ್ದರು. ಕೆಲವೆಡೆ ರಾತ್ರಿ 12 ಗಂಟೆಯಾಗುತ್ತಿದ್ದಂತೆ ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿ ನೂತನ ವರ್ಷವನ್ನು ಸ್ವಾಗತಿಸಿ ಸಂಭ್ರಮಿಸಲಾಯಿತು.

ಕರಾವಳಿಯ ಕೆಲವು ದೇವಸ್ಥಾನ, ಮಂದಿರಗಳಲ್ಲಿ ವಿಶೇಷ ಪೂಜೆ ನಡೆಯಿತು. ಚರ್ಚ್‌ಗಳಲ್ಲಿ ವಿಶೇಷ ಬಲಿ ಪೂಜೆ ಸಂಪನ್ನಗೊಂಡಿತು. ಮಂಗಳೂರಿನ ಸ್ಟಾರ್‌ ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ಯುವಜನತೆಯ ಜತೆಗೆ ಕುಟುಂಬದ ಸದಸ್ಯರನ್ನು ಒಟ್ಟು ಸೇರಿಸಿಕೊಳ್ಳುವ ಮೂಲಕ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಂಗಳೂರಿನ ಕೆಲವು ಸ್ಟಾರ್‌ ಹೊಟೇಲ್‌ನಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಇದರ ಜತೆಯಲ್ಲಿ ವಿಶೇಷ ಬಗೆಯ ಆಹಾರ ವೈವಿಧ್ಯತೆ, ಮನರಂಜನೆ, ಡಿಜೆ ಪಾರ್ಟಿಗಳು ನಡೆಯಿತು.

ಪೊಲೀಸ್‌ ನಿಯೋಜನೆ
ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಸುರಕ್ಷೆ ದೃಷ್ಟಿಯಿಂದ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆಯಿಂದಲೇ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಮದ್ಯ ಸೇವಿಸಿ ಚಾಲನೆ ಮಾಡುವವರ ಬಗ್ಗೆ ಚೆಕ್‌ಪೋಸ್ಟ್‌ ಗಳಲ್ಲಿ ಪೊಲೀಸರು ತಪಾಸಣೆ ನಡೆಸಿದರು. ಉಡುಪಿ ಜಿಲ್ಲೆಯಲ್ಲೂ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲಲ್ಲಿ ಪೊಲೀಸರ ತಪಾಸಣೆ ಕಾರ್ಯವೂ ಮುಂದುವರಿದಿತ್ತು.

Advertisement

ಉಡುಪಿ ಜಿಲ್ಲೆಯ ಬೀಚ್‌ಗಳಲ್ಲಿ ಸಂಜೆ ವೇಳೆ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಉಡುಪಿ, ಮಣಿಪಾಲ ಸೇರಿದಂತೆ ಕೆಲವು ಕಡೆಗಳಲ್ಲಿ ಹೊಸ ವರ್ಷದ ಆಚರಣೆ ನಡೆದಿದೆ. ಹೊಟೇಲ್‌, ರೆಸಾರ್ಟ್‌ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಸಂಗೀತ ಕಾರ್ಯಕ್ರಮ ಸಹಿತ ವಿವಿಧ ಸಾಂಸ್ಕೃತಿಕ ವಿನೋದಾವಳಿಗೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಂಡರು. ಇನ್ನು ಕೆಲವೆಡೆ ಕೇಕ್‌ ಕತ್ತರಿಸಲಾಗಿದೆ.

ಕೊಡಗಿನಲ್ಲಿ ಪ್ರವಾಸಿಗರ ದಂಡು; ವಾಹನ ದಟ್ಟಣೆ
ಮಡಿಕೇರಿ: ಹೊಸ ವರ್ಷಾಚರಣೆಯ ಹಿನ್ನೆಲೆ ಹಸುರು ಪರಿಸರದ ಕೊಡಗಿನಲ್ಲಿ ಪ್ರವಾಸಿಗರ ದಂಡು ಕಂಡು ಬಂತು. ಮಂಜಿನ ನಗರಿ ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲಿ ವರ್ಷದ ಕೊನೆಯ ದಿನದ ಸೂರ್ಯಾಸ್ತದ ಮನಮೋಹಕ ದೃಶ್ಯವನ್ನು ಸಾವಿರಾರು ಪ್ರವಾಸಿಗರು ಕಣ್ತುಂಬಿಕೊಂಡರು.

ನಗರದಂಚಿನ ಅಬ್ಬಿ ಫಾಲ್ಸ್‌ ಸೇರಿದಂತೆ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಜಿಲ್ಲೆಯ ಹೋಂ ಸ್ಟೇ, ರೆಸಾರ್ಟ್‌ಗಳು ಭರ್ತಿಯಾಗಿವೆ. ಮಡಿಕೇರಿಯಿಂದ ಸುಳ್ಯ, ಕುಶಾಲನಗರಕ್ಕೆ ಹೋಗುವ ಹೆದ್ದಾರಿಯಲ್ಲಿ ಭಾರೀ ವಾಹನ ದಟ್ಟಣೆಯಿಂದ ಸಂಚಾರ ವ್ಯವಸ್ಥೆಯಲ್ಲಿ ಅಡಚಣೆ ಉಂಟಾಯಿತು.

Advertisement

Udayavani is now on Telegram. Click here to join our channel and stay updated with the latest news.

Next