Advertisement

ಟಿಕೆಟ್‌ ಟಿಕೆಟ್‌!

10:59 AM Jun 17, 2018 | |

ಗಾಂಧಿ ಹೇಳಿದ್ದರು- “ಅನಗತ್ಯ ಪ್ರಯಾಣ ಬೇಡ’. ಅದಕ್ಕಾಗಿ ಅವರು ರೈಲುಗಳಿಗೆ ವಿರುದ್ಧವಾಗಿದ್ದರು. ಪ್ರಯಾಣ ಹೆಚ್ಚಾದಷ್ಟು ಸಾಂಕ್ರಾಮಿಕ ರೋಗಗಳೂ ಹೆಚ್ಚಾಗುತ್ತವೆ. ಅವುಗಳು ಹರಡುವುದೂ ಹೆಚ್ಚಾಗುತ್ತದೆ. ಈಗ ಪ್ರಯಾಣದ ಕಾಲ. “ಕೋಶ ಓದಬೇಕು ದೇಶ ತಿರುಗಬೇಕು’ ಎನ್ನುವ ಕಾಲ. ಯಾರೂ ಜಗತ್ತಿನ ಸಾಧ್ಯತೆ ಸುಖಕರವಾಗಿ ಹೋಗಿ ಬರಬಹುದು. ಮೊದಲಿದ್ದರೆ ಹಾಗಿರಲಿಲ್ಲ. ಕಾಶಿಗೆ ಹೋಗುತ್ತಾರೆ ಎಂದರೆ ಅಲ್ಲಿಗೆ ಸಮಾಪ್ತಿ. ಮತ್ತೆ ಬರುವುದಿಲ್ಲ ಎಂದೇ ಅರ್ಥ. ಈಗ ಪ್ರಯಾಣ ಹೆಚ್ಚಿದಷ್ಟು ನಮಗೆ ತಪ್ಪದೇ ಕೇಳುವ ಧ್ವನಿ- ಟಿಕೆಟ್‌ ಪ್ಲೀಸ್‌.

Advertisement

ಮುಖ್ಯವಾಗಿ ಬಸ್ಸಿನಲ್ಲಿ, ರೈಲುಗಳಲ್ಲಿ, ಹಡಗುಗಳಲ್ಲಿ (ವಿಮಾನದಲ್ಲಿ ಬೋರ್ಡಿಂಗ್‌ ಪಾಸ್‌) ಕೇಳ್ಳೋದು ಒಂದೇ-ಟಿಕೆಟ್‌ ಪ್ಲೀಸ್‌. ನಮ್ಮಲ್ಲಿ ಬಹುಸಂಖ್ಯಾತರು ಬಸ್ಸು ಪ್ರಯಾಣ ಮಾಡುವುದರಿಂದ ಟಿಕೆಟ್‌ ಪ್ಲೀಸ್‌ ಎನ್ನುವುದು ನಿರಂತರ ಕಿವಿಗೆ ಕೇಳುತ್ತಲೇ ಇದೆ. ಇದನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಬಸ್ಸುಗಳು ವಿಪರೀತ ಪ್ರಯಾಣಿಕರಿಂದ ತುಂಬಿದ್ದಾಗ ಈ ಕಂಡೆಕ್ಟರ್‌ರ ಒದ್ದಾಟ ನೋಡಿ ನಾನು ಅನೇಕ ಬಾರಿ ಕಸಿವಿಸಿಗೊಂಡಿದ್ದೇನೆ. ನಾನು ಪ್ರಯಾಣಿಸುವಾಗ ಟಿಕೆಟ್‌ ಕೊಳ್ಳಲು- ಅದೂ ಸ್ಟಾಂಡಿಂಗ್‌ ಆದರಂತೂ- ಜನರು ರಶ್‌ ಆದರಂತೂ ಕೇಳುವುದೇ ಬೇಡ. ಯಾರ್ಯಾರನ್ನೋ ನೂಕಿ, ಸರ್ಕಸ್‌, ಯೋಗಾಸನ ಮಾಡಿ ಟಿಕೆಟ್‌ ಕೊಂಡು ಕೊಳ್ಳಬೇಕು. “ಯಾರ್ರಿ, ಒಂದು ಟಿಕೆಟ್‌ ಬಾಕಿ’ ಎಂದು ಕಂಡಕ್ಟರ್‌ ಬೊಬ್ಬೆ ಹೊಡೆಯುವುದು ಅವನ ಪರಿಪಾಠ. ಅವನಿಗೆ ಗೊತ್ತು ಯಾರೂ ಇರಲ್ಲ ಅಂತ. ಆದರೆ, ಅದು ಅವನ ಸಿಬಿಐ ಬುದ್ಧಿ. ತಮಾಷೆ ಎಂದರೆ ಇದು ಪ್ರಯಾಣಿಕರಿಗೂ ಗೊತ್ತು. ಟಿಕೆಟ್‌ಗಾಗಿ ಕಂಡೆಕ್ಟರ್‌ ಕೂಗುವುದು ಚಿಲ್ಲರೆ ಇಲ್ಲ ಅಂತ ಗೊಣಗೋದು, ಹಣ ಜಾಸ್ತಿ ಕೊಟ್ಟು ಚಿಲ್ಲರೆಗಾಗಿ ಪರಿತಪಿಸುವುದು, “ಚಿಲ್ಲರೆ ಇಳಿಯುವಾಗ ತಗೊಳ್ಳಿ’ ಅಂತ ಕಂಡೆಕ್ಟರ್‌ ಕೂಗುವುದು, ಇಪ್ಪತ್ತು ರೂಪಾಯಿ ಟಿಕೆಟ್‌ಗಾಗಿ ಐದುನೂರು ರೂಪಾಯಿ ಕೊಟ್ಟು ಇಳಿಯುವಾಗ ಮರೆತು ಮನೆಗೆ ಬಂದಾಗ ಗೊತ್ತಾಗಿ ಕಂಡೆಕ್ಟರ್‌ ಕುಲಕ್ಕೆ ವರ್ಷವಿಡಿ ಹಿಡಿಶಾಪ ಹಾಕುವುದು, ಪರಿಣಾಮ ರಕ್ತದೊತ್ತಡ ಹೆಚ್ಚಿಸಿಕೊಳ್ಳುವುದು… ಆಹಾ! ಟಿಕೆಟ್‌ ಮಹಿಮೆಯೇ.

ಬೃಹತ್‌ ಪ್ರಜಾಪ್ರಭುತ್ವ ದೇಶವಾದ ನಮ್ಮ ದೇಶದಲ್ಲಂತೂ ಚುನಾವಣೆ ಎಂದರೆ ಒಂದು ಹಬ್ಬ. ಈ ಹಬ್ಬ ಶುರುವಾಗೋದೇ ಟಿಕೆಟ್‌ನಿಂದ. ಬಹುಪಕ್ಷೀಯ ಪ್ರಜಾಪ್ರಭುತ್ವವಾದ ನಮ್ಮ ದೇಶದಲ್ಲಿ ಶಾಸಕನಾಗಲು, ಸಂಸತ್‌ ಸದಸ್ಯರಾಗಲು ಪಕ್ಷದ ಟಿಕೆಟ್‌ ಬಹಳ ಮುಖ್ಯ. ಇದನ್ನೇ ನಾವು ಬಿ.ಫಾರಂ ಎನ್ನೋದು. ಒಂದು ಪಕ್ಷದ ಟಿಕೆಟ್‌ ಸಿಕ್ಕರೆ ಆತ ಚುನಾವಣೆಯಲ್ಲಿ  ಅರ್ಧ ಗೆದ್ದಂತೆ. ಬ್ರಿಟನ್‌ನಲ್ಲಿದ್ದಂತೆ, ಅಮೆರಿಕದಲ್ಲಿದ್ದಂತೆ ಕೇವಲ ಎರಡೇ ಪಕ್ಷಗಳ (ಮುಖ್ಯವಾಗಿ) ಆಟವಲ್ಲ ಚುನಾವಣೆ. ಭಾರತದಲ್ಲಿ ನೂರಾರು ಪಕ್ಷಗಳು ಇವೆ. ಚುನಾವಣೆಯ ಸಂದರ್ಭದಲ್ಲಿ ದಿಢೀರನೇ ಹೊಸಪಕ್ಷಗಳು ಹುಟ್ಟಿಕೊಳ್ಳುತ್ತವೆ. ಪಕ್ಷಗಳು ಇಲ್ಲದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸಲು ಅವಕಾಶವಿದೆ. ನಮ್ಮದು ಮುಕ್ತ ಪ್ರಜಾಪ್ರಭುತ್ವ !

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪಕ್ಷಗಳ ಟಿಕೆಟ್‌ಗಾಗಿ ಇನ್ನಿಲ್ಲದ ಲಾಬಿ ಶುರುವಾಗುತ್ತದೆ. ಗುಲಾಬಿ ನಗರ ಹೋಗಿ ಲಾಬಿನಗರವಾಗುತ್ತದೆ. ಯಾರನ್ನು ಹಿಡಿದರೆ ಟಿಕೆಟ್‌ ಸಿಗುತ್ತೆ, ಯಾರು ನಿಜವಾಗುÉ ಟಿಕೆಟ್‌ ಕೊಡುವವರು, ಯಾರ ಶಿಫಾರಸು ಬೇಕು, ಹಣವಂತರು, ಮಠಾಧೀಶರು, ಸಮುದಾಯದ ಮುಖಂಡರು, ಪಕ್ಷದ ಪ್ರಮುಖರು, ವಿವಿಧ ಸಂಘಸಂಸ್ಥೆಗಳು, ಹಾಜಿ, ಮಾಜಿ ರಾಜಕೀಯ ಪ್ರಮುಖರು.. ಹೇಗಾದರೂ ಟಿಕೆಟ್‌ ಗಿಟ್ಟಿಸಿಕೊಳ್ಳಬೇಕು. ಕೆಲವು ಸರ್ತಿ ಟಿಕೆಟ್‌ಗಾಗಿ ನಗರ, ರಾಜಧಾನಿ, ದೆಹಲಿಗೆ ನಿರಂತರ ಪ್ರಯಾಣ ಬೆಳೆಸುವುದು, ಕಂಡ ಕಂಡವರ ಮುಂದೆ ಹಲ್ಲು ಗಿಂಜುವುದು. ಕೂಗು ಒಮ್ಮೊಮ್ಮೆ ಕೇಳಬೇಕಾದವರಿಗೆ ಕೇಳುತ್ತದೆ. ಆಗ ಟಿಕೆಟ್‌ ಸಿಗುತ್ತದೆ. ಟಿಕೆಟ್‌ ಸಿಕ್ಕಿತು ಎಂದು ಕರಪತ್ರ, ಬ್ಯಾನರ್‌ ಸಿದ್ಧಪಡಿಸಿಕೊಂಡು ಪ್ರಚಾರ ಹೊರಡಬೇಕೆನ್ನುವಾಗ ಟಿಕೆಟ್‌ ಬೇರೆಯವರಿಗೆ ಎಂದು ಪ್ರಕಟವಾಗುತ್ತದೆ. ಅಯ್ಯೋ, ಈ ಪರಿತಾಪಕ್ಕೆ ಏನೆನ್ನಬೇಕು. ಅಳ್ಳೋದು ಏನು, ಮೋಸ ಎಂದು ಕಿರುಚುವುದೇನು, ಬಂಡಾಯ ನಿಲ್ತಿàನಿ ಎನ್ನೋದೇನು, ಅಧ್ಯಕ್ಷ ಕೈಕೊಟ್ಟ, ಮುಖ್ಯಮಂತ್ರಿ ಕೈಕೊಟ್ಟ ಎನ್ನೋದೇನು… ಇನ್ನು ಮುಂದೆ “ಸಾರ್ವಜನಿಕ ಕೆಲಸ’ ಹೇಗೆ ಮಾಡೋದು ಎಂದು ಹಲುಬುವದೇನು… ಇವೆಲ್ಲಾ ಬರೀ ಟಿಕೆಟ್‌ಗಾಗಿ. ಟಿಕೆಟ್‌ ಎನ್ನುವ ಮಾಯಾ ಜಿಂಕೆಯ ಹಿಂದೆ ಎಲ್ಲರೂ!

ಚುನಾವಣೆ ಬಿಡಿ- ಪರೀಕ್ಷೆಯ ಸಮಯ ಬಂತು ಆದರೆ ಮತ್ತೆ ಟಿಕೆಟ್‌ ಶುರುವಾಗುತ್ತದೆ-ಹಾಲ್‌ ಟಿಕೆಟ್‌. ಅಲ್ಲಿ ಚುನಾವಣೆಗೆ ನಿಲ್ಲಲು ಪಕ್ಷ ನೀಡುವ ಟಿಕೆಟ್‌ ಆದರೆ ಇಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯ ಹಾಲ್‌ನಲ್ಲಿ ಪ್ರವೇಶಿಸಲು ಟಿಕೆಟ್‌ ಬೇಕು- ಅದು ಹಾಲ್‌ ಟಿಕೆಟ್‌! ಪರೀಕ್ಷೆಗೆ ಹೋಗೋ ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ಅವ್ಯಕ್ತ ಭಯ. ಕನಸಿನಲ್ಲಿ ಪರೀಕ್ಷೆ ಹಾಲ್‌ಗೆ ಹೋದ ಹಾಗೆ, ಅಲ್ಲಿ ಮೇಲ್ವಿಚಾರಕರು ಬಂದು ಹಾಲ್‌ ಟಿಕೆಟ್‌ ಕೇಳಿದಾಗ ಅಯ್ಯೋ ಹಾಲ್‌ ಟಿಕೆಟ್ಟೇ ಇಲ್ಲ ! ಆಗ ಭಯದಿಂದ ನಡುಗಿದಾಗ ಎಚ್ಚರ ಆದದ್ದು. ನಾಲ್ಕು ನಾಲ್ಕು ಸರ್ತಿ ಹಾಲ್‌ ಟಿಕೆಟ್‌ ಇದೆಯಾ ಅಂತ ನೋಡಿಕೊಳ್ಳುವುದು. ಒಮ್ಮೊಮ್ಮೆ ಹಾಲ್‌ ಟಿಕೆಟ್‌ ಮರೆತು ಹೋದಾಗ ಪ್ರಿನ್ಸಿಪಾಲರಿಂದ ತಾತ್ಕಾಲಿಕ ಹಾಲ್‌ ಟಿಕೆಟ್‌ ಪಡೆದುಕೊಳ್ಳುವುದು ಎಂತಹ ಟೆನ್ಸ್ನ್‌. ಪರೀಕ್ಷೆಗಿಂತ ಹಾಲ್‌ ಟಿಕೆಟ್‌ಗೆ ಟೆನ್ಸ್ನ್‌. 

Advertisement

ಇನ್ನು ರೈಲಿನಲ್ಲಿ ಟಿಟಿಯವರದ್ದೇ ಕಾರುಬಾರು. ಮೊದಲಿಗೆ ಬಂದು ಎಲ್ಲವನ್ನೂ ಚೆಕ್‌ ಮಾಡಿದರೆ ಸರಿ. ನಡುರಾತ್ರಿಯಲ್ಲಿ ರೈಲಿನ ಬೋಗಿಯೊಳಗೆ ಬಂದು ಮೈಮುಟ್ಟಿ ಎಬ್ಬಿಸುತ್ತಾರೆ. “ಟಿಕೆಟ್‌ ಪ್ಲೀಸ್‌’ ಎನ್ನುತ್ತಾರೆ. ಟಿಕೆಟ್‌ ತೋರಿಸಿದರೆ “ಆಧಾರ್‌ ಕಾರ್ಡ್‌ ಕೊಡಿ’ ಎನ್ತಾರೆ, ಆಧಾರ್‌ ಕೊಟ್ಟರೆ “ಸೀನಿಯರ್‌ ಸಿಟಿಜನ್‌ ಕಾರ್ಡ್‌ ಇದೆಯಾ’ ಅಂತ ಕೇಳ್ತಾರೆ. “ಎಲ್ಲಾ ಒರಿಜಿನಲ್‌ ಬೇಕು, ಝೆರಾಕ್ಸ್‌ ಆಗೋಲ್ಲ’ ಎನ್ನುತ್ತಾರೆ- ಇವೆಲ್ಲಾ ನಾವು ನಡುರಾತ್ರಿಯಲ್ಲಿ ನಿದ್ರೆಗಣ್ಣಿನಲ್ಲಿದ್ದಾಗ… ಹೇಳುವಂತಿಲ್ಲ, ಹೇಳದಿರುವಂತಿಲ್ಲ. ಅನುಭವಿಸಲೇಬೇಕು. 

ಕಾರಂತರು ಹೇಳಿದ್ದಾರಲ್ಲ , ಈ ಜಗತ್ತೇ ಒಂದು ರೈಲಿನ ಪಯಣ. ಎಲ್ಲರೂ ಅಲ್ಲಲ್ಲಿವರೆಗೆ ಟಿಕೆಟ್‌ ಕೊಂಡಿರುತ್ತಾರೆ ಅಥವಾ ಇಷ್ಟು ದೂರಕ್ಕೆ ಮಾತ್ರ ಟಿಕೆಟ್‌ ಅಂತ ಬ್ರಹ್ಮ ಕೊಟ್ಟಿರುತ್ತಾನೆ. ಆದರೆ, ಈ ಟಿಕೆಟ್‌ ಒಂದು ಮಾಯಾಕನ್ನಡಿ. ನಮಗೆ ನೋಡಲು ಬರುವುದಿಲ್ಲ. ಎಷ್ಟು ದೂರ ಎಂದು ನಮಗೆ ಓದಲು ಬರುವುದಿಲ್ಲ. ಅದು ಬ್ರಹ್ಮಲಿಪಿ. ಹೇಳುವುದನ್ನು ಕೇಳಿದ್ದೇವಲ್ಲ ಆತ “ಟಿಕೆಟ್‌ ತಗೊಂಡು ಬಿಟ್ಟ’. 

ಆದರೆ, ಅಲ್ಲಿನ ಪ್ರಯಾಣದಲ್ಲಿ ವೈತರಣಿ ನದಿದಾಟಲು ಟಿಕೆಟ್‌ ಬೇಕು. ಅದು ಕಷ್ಟ-ಸುಖ, ದಾನ-ಧರ್ಮ, ಪಾಪ-ಪುಣ್ಯಗಳ ಮೇಲೆ ನಿಂತಿದೆ. ಅಲ್ಲಿಯವರೆಗೆ ಚಿತ್ರಗುಪ್ತ ಟಿಕೆಟ್‌ ಕೊಡುವುದಿಲ್ಲ. ಯಮಧರ್ಮರಾಯನಿಗೆ ವಿಸ್ತೃತ ವರದಿ ಒಪ್ಪಿಸುತ್ತಾನೆ. ಯಾರ್ಯಾರಿಗೋ ನಾಜೂಕಿನಿಂದ ಮೋಸ ಮಾಡಿದ್ದು, ದ್ರೋಹ ಬಗೆದದ್ದು, ಭ್ರಷ್ಟನಾಗಿದ್ದು, ವಂಚನೆ ಮಾಡಿದ್ದು… ಎಲ್ಲದರ ಪಟ್ಟ ಚಿತ್ರಗುಪ್ತ ಓದುತ್ತಾನೆ. ಅದಕ್ಕೆಲ್ಲಾ ಪರಿಹಾರ ಸಿಗಬೇಕು. ಶಿಕ್ಷೆಯಾಗಬೇಕು. ಬಿಸಿಬಿಸಿ ಕುದಿಯುವ ಎಣ್ಣೆಯಲ್ಲಿ ತೇಲಾಡಬೇಕು.
ನಂತರ ಆತ್ಮಶಾಂತಿಗೆ ಟಿಕೆಟ್‌ ಸಿಗುತ್ತದೆ.
ಉಳಿದ ಟಿಕೆಟ್‌ ಎಲ್ಲಾ ಬರೇ ಲೊಳಲೊಟ್ಟೆ ! ಲೊಳಲೊಟ್ಟೆ !

ಜಯಪ್ರಕಾಶ್‌ ಮಾವಿನಕುಳಿ

Advertisement

Udayavani is now on Telegram. Click here to join our channel and stay updated with the latest news.

Next