Advertisement

ಪ್ರತಿಯೊಬ್ಬರಿಗೂ ಆರೋಗ್ಯ : ಥೈರಾಯ್ಡ್ ಕಾಯಿಲೆಗಳು ನಮ್ಮನ್ನು ಸೋಲಿಸಬಾರದು

10:17 AM Apr 14, 2021 | Team Udayavani |

ಪ್ರತೀ ವರ್ಷ ಎಪ್ರಿಲ್‌ 7ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ವರ್ಷದ ವಿಶ್ವ ಆರೋಗ್ಯ ದಿನವನ್ನು ಇತ್ತೀಚೆಗಷ್ಟೇ “ನ್ಯಾಯಯುತ, ಆರೋಗ್ಯಯುತ ವಿಶ್ವವನ್ನು ಕಟ್ಟೋಣ’ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗಿದೆ. ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಥೈರಾಯ್ಡ ಗ್ರಂಥಿಯ ಪ್ರಭಾವ, ಥೈರಾಯ್ಡ್  ಗ್ರಂಥಿಯನ್ನು ಭಾದಿಸುವ ಅನಾರೋಗ್ಯಗಳಿಂದ ಏನೆಲ್ಲ ಸಮಸ್ಯೆಗಳು ಉಂಟಾಗುತ್ತವೆ ಮತ್ತು ಥೈರಾಯ್ಡ ಕಾಯಿಲೆಗಳ ಬಗ್ಗೆ ಆಗಾಗ ತಪಾಸಣೆ/ ಪರೀಕ್ಷೆ ಮಾಡಿಸಿಕೊಳ್ಳಬೇಕು ಏಕೆ ಎಂಬ ವಿಚಾರವಾಗಿ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ.

Advertisement

ಥೈರಾಯ್ಡ್ ಎನ್ನುವುದು ನಮ್ಮ ಕುತ್ತಿಗೆಯ ಮುಂಭಾಗದಲ್ಲಿ ಇರುವ ಚಿಟ್ಟೆಯ ಆಕಾರದ ಒಂದು ಗ್ರಂಥಿ. ಥೈರಾಯ್ಡ್ ಗ್ರಂಥಿಯು ಥೈರಾಯ್ಡ ಹಾರ್ಮೋನ್‌ – ಟಿ 3 (ಟ್ರಯೊಡಿಥೈರೊನೈನ್‌) ಮತ್ತು ಟಿ 4 (ಟೆಟ್ರಾ ಅಯೋಡೊಥೈರೊನೈನ್‌) ಗಳನ್ನು ಸ್ರವಿಸುತ್ತದೆ. ಥೈರಾಯ್ಡ್ ಹಾರ್ಮೋನ್‌ಗಳು ನಮ್ಮ ದೇಹದ ಪ್ರತೀ ಅಂಗಾಂಶ ಮತ್ತು ಅಂಗಾಂಗಗಳ ಮೇಲೆ ಪ್ರಭಾವ ಬೀರುತ್ತದೆ.

ಯಾಕೆ ಮುಖ್ಯ? :

ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಥೈರಾಯ್ಡ್ ಕಾಯಿಲೆಗಳು ಹೆಚ್ಚು ಸಾಮಾನ್ಯವಾಗಿರುತ್ತವೆ. ಜಾಗತಿಕವಾಗಿ ಕಂಡುಬರುವ ಎಂಡೊಕ್ರೈನ್‌ ಕಾಯಿಲೆಗಳ ಪೈಕಿ ಥೈರಾಯ್ಡ್ ಕಾಯಿಲೆಗಳು ಅತೀ ಸಾಮಾನ್ಯವಾದುದಾಗಿವೆ.

ಥೈರಾಯ್ಡ್ ಹಾರ್ಮೋನ್‌ಗಳ ಕಾರ್ಯಗಳೇನು?

  • ಬೇಸಲ್‌ ಮೆಟಬಾಲಿಕ್‌ ರೇಟ್‌ ಹೆಚ್ಚಿಸುತ್ತದೆ – ಕ್ಯಾಲೊರಿಗಳು ದಹನವಾಗುವ ದರವನ್ನು ನಿಯಂತ್ರಿಸುತ್ತದೆ; ಇದರಿಂದ ದೇಹವು ತೂಕ ಗಳಿಸುತ್ತದೆ ಅಥವಾ ತೂಕ ಇಳಿಸಿಕೊಳ್ಳುತ್ತದೆ.
  • ದೇಹದ ಸಹಜ ಬೆಳವಣಿಗೆಗೆ ಅತೀ ಪ್ರಾಮುಖ್ಯವಾಗಿದೆ.
  • ಹೃದಯ ಬಡಿತದ ದರ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
  • ಲೈಂಗಿಕ ಕಾರ್ಯಚಟುವಟಿಕೆ, ನಿದ್ದೆ ಮತ್ತು ಯೋಚನಾ ಲಹರಿಗಳು ಸಾಮಾನ್ಯ ಸ್ಥಿತಿಯಲ್ಲಿರುವಂತೆ ಮಾಡುತ್ತವೆ.
Advertisement

ಥೈರಾಯ್ಡ್ ಫ‌ಂಕ್ಷನ್‌ ಪರೀಕ್ಷೆಗಳಿಗೆ ರಕ್ತದ ಮಾದರಿಗಳನ್ನು ಸಂಗ್ರಹಿಸಲು ಸೂಕ್ತವಾದ ಸಮಯ ಯಾವುದು? :

ಥೈರಾಯ್ಡ್ ಸ್ಟಿಮ್ಯುಲೇಟಿಂಗ್‌ ಹಾರ್ಮೋನ್‌ (ಟಿಎಸ್‌ಎಚ್‌) ದಿನದಲ್ಲಿ ವ್ಯತ್ಯಯವಾಗುತ್ತದಾದ್ದರಿಂದ ಖಾಲಿ ಹೊಟ್ಟೆಯಲ್ಲಿ ರಕ್ತದ ಮಾದರಿ ನೀಡುವಂತೆ ಶಿಫಾರಸು ಮಾಡಲಾಗುತ್ತದೆ. ನಿಮಗೆ ಈಗಾಗಲೇ ಥೈರಾಯ್ಡ ಕಾಯಿಲೆ ಇದೆಯಾಗಿದ್ದರೆ, ಪರೀಕ್ಷೆಗಳಿಗಾಗಿ ರಕ್ತದ ಮಾದರಿಯನ್ನು ಪ್ರತೀ ಬಾರಿಯೂ ದಿನದ ಅದೇ ಸಮಯದಲ್ಲಿ ನೀಡುವುದು ಉತ್ತಮ (ಉದಾಹರಣೆಗೆ, ಕಳೆದ ಬಾರಿ ನಿಮ್ಮ ರಕ್ತದ ಮಾದರಿಯನ್ನು ಸಂಜೆ ಹೊತ್ತಿನಲ್ಲಿ ನೀಡಿದ್ದರೆ ಈ ಬಾರಿ, ಮುಂದಿನ ಬಾರಿಯೂ ಅದೇ ಸಮಯದಲ್ಲಿ ನೀಡಬೇಕು).

ಯಾವ ಖನಿಜಾಂಶವು ಥೈರಾಯ್ಡ ಹಾರ್ಮೋನ್‌ ಸಿಂಥೆಸಿಸ್‌ನಲ್ಲಿ  ಪ್ರಧಾನ ಪಾತ್ರ ವಹಿಸುತ್ತದೆ ಮತ್ತು ಅದರ ಪ್ರಮುಖ  ಮೂಲ ಯಾವುದು? :

ನೀರಿನಲ್ಲಿ ಕರಗಿರುವ ಅಯೋಡಿನ್‌ ಥೈರಾಯ್ಡ ಹಾರ್ಮೋನ್‌ ಸಿಂಥೆಸಿಸ್‌ನಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಥೈರಾಯ್ಡ್ ಕಾಯಿಲೆಗಳು ಮಹಿಳೆಯರ ಮೇಲೆ  ಹೇಗೆ ಪರಿಣಾಮ ಬೀರುತ್ತವೆ?

  • ಋತುಚಕ್ರದಲ್ಲಿ ಸಮಸ್ಯೆ: ಋತುಚಕ್ರವನ್ನು ನಿಯಂತ್ರಿಸುವಲ್ಲಿ ಥೈರಾಯ್ಡ್ ಹಾರ್ಮೋನ್‌ಗಳು ಸಹಾಯ ಮಾಡುತ್ತವೆ. ಥೈರಾಯ್ಡ ಹಾರ್ಮೋನ್‌ ಹೆಚ್ಚು ಅಥವಾ ಕಡಿಮೆ ಸ್ರಾವವಾದರೆ ಋತುಸ್ರಾವವು ಹೆಚ್ಚಬಹುದು, ಕಡಿಮೆಯಾಗಬಹುದು ಅಥವಾ ಅನಿಯಮಿತವಾಗಬಹುದು.
  • ಹೈಪೊಥೈರಾಯ್ಡಿಸಂ: ಇದರಿಂದ ಋತುಚಕ್ರವು ಹಲವು ತಿಂಗಳುಗಳ ಕಾಲ ಸ್ಥಗಿತಗೊಳ್ಳಬಹುದು; ಈ ಸ್ಥಿತಿಯನ್ನು ಅಮೆನೋರಿಯಾ ಎಂದು ಕರೆಯಲಾಗುತ್ತದೆ.
  • ಗರ್ಭಧಾರಣೆಯಲ್ಲಿ ಸಮಸ್ಯೆ: ಥೈರಾಯ್ಡ ಕಾಯಿಲೆಗಳು ಋತುಚಕ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಅಂಡವು ಬಿಡುಗಡೆಗೊಳ್ಳುವುದರ (ಓವುಲೇಶನ್‌) ಮೇಲೂ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಓವುಲೇಶನ್‌ ಎಂದರೆ ಅಂಡಾಶಯದಿಂದ ಅಂಡವು ಬಿಡುಗಡೆಗೊಳ್ಳುವ ಪ್ರಕ್ರಿಯೆ. ಅಂಡವು ಬಿಡುಗಡೆಗೊಳ್ಳುವುದರಲ್ಲಿ ಸಮಸ್ಯೆಗಳು ಉಂಟಾದರೆ ಅದು ಬಂಜೆತನಕ್ಕೆ ಕಾರಣವಾಗುತ್ತದೆ.
  • ಗರ್ಭಧಾರಣೆಯ ಅವಧಿಯಲ್ಲಿ ತೊಂದರೆಗಳು: ಗರ್ಭ ಧರಿಸಿದ ಅವಧಿಯಲ್ಲಿ ಥೈರಾಯ್ಡ ಸಮಸ್ಯೆಗಳು ಉಂಟಾದರೆ ಅದರಿಂದ ತಾಯಿ ಮತ್ತು ಶಿಶು – ಇಬ್ಬರ ಆರೋಗ್ಯದ ಮೇಲೆಯೂ ಪ್ರತಿಕೂಲ ಪರಿಣಾಮಗಳು ಉಂಟಾಗುತ್ತವೆ. ಹೈಪೊಥೈರಾಯ್ಡಿಸಂ ಹೊಂದಿರುವ ಗರ್ಭಿಣಿಯ ತೊಂದರೆ ಪತ್ತೆಯಾಗದೆ, ಅದಕ್ಕೆ ಚಿಕಿತ್ಸೆ ದೊರೆಯದೆ ಆಕೆ ಪ್ರಸವಿಸಿದರೆ ಶಿಶುವು ಕ್ರೆಟಿನಿಸಂ ಎಂಬ ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಕ್ರೆಟಿನಿಸಂ ಎಂದರೆ  ಥೈರಾಯ್ಡ್  ಕೊರತೆಯಿಂದ ಉಂಟಾಗುವ ಗ್ರಹಣಾತ್ಮಕವಾದ ಸಮಸ್ಯೆ, ಇದು ಅಂಗವೈಕಲ್ಯ ಮತ್ತು ಕಲಿಕೆಯ ಸಮಸ್ಯೆಗಳಂತಹ ಲಕ್ಷಣಗಳನ್ನು ಹೊಂದಿರುತ್ತದೆ.

ಥೈರಾಯ್ಡ್ ಅನಾರೋಗ್ಯಗಳ ವಿಧಗಳು ಯಾವುವು?

  • ಹೈಪೊಥೈರಾಯ್ಡಿಸಂ ಮತ್ತು ಹೈಪರ್‌ಥೈರಾಯ್ಡಿಸಂ
  • ಹೈಪೊಥೈರಾಯ್ಡಿಸಂ: ಇದು ಥೈರಾಯ್ಡ್ ಗ್ರಂಥಿಯು ಸಾಕಷ್ಟು ಪ್ರಮಾಣದಲ್ಲಿ ಥೈರಾಯ್ಡ ಹಾರ್ಮೋನ್‌ (ಟಿ3 ಮತ್ತು ಟಿ 4) ಉತ್ಪಾದಿಸದ ಸ್ಥಿತಿ.
  • ಹೈಪರ್‌ ಥೈರಾಯ್ಡಿಸಂ: ಇದು ಥೈರಾಯ್ಡ್ ಗ್ರಂಥಿಯು ಥೈರಾಯ್ಡ್ ಹಾರ್ಮೋನ್‌ (ಟಿ 3 ಮತ್ತು ಟಿ 4)ಗಳನ್ನು ಅತಿಯಾಗಿ ಉತ್ಪಾದಿಸುವ ಸ್ಥಿತಿ.

 

ಡಾ| ವಿಜೇತಾ ಶೆಣೈ ಬೆಳ್ಳೆ

ಅಸೋಸಿಯೇಟ್‌ ಪ್ರೊಫೆಸರ್‌,

ಮೊನಾಲಿಸಾ ಬಿಸ್ವಾಸ್‌

ಪಿಎಚ್‌ಡಿ ಸ್ಕಾಲರ್‌,

ಬಯೋಕೆಮೆಸ್ಟ್ರಿ ವಿಭಾಗ,

ಕೆಎಂಸಿ ಆಸ್ಪತ್ರೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next