ತುಂಬೆ: ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ವರ್ಷಧಾರೆ ಆಗುತ್ತಿರುವ ಪರಿಣಾಮ ಮಂಗಳೂರು ನಗರ ವ್ಯಾಪ್ತಿಯಲ್ಲಿ ಎದುರಾಗಿದ್ದ ಕುಡಿಯುವ ನೀರಿನ ಆತಂಕ ಈಗ ಇಲ್ಲ.
ವಿಶೇಷವೆಂದರೆ, ತುಂಬೆ ಡ್ಯಾಂನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮೇ ವೇಳೆಗೆ ತುಂಬೆ ಡ್ಯಾಂನ ಒಂದು ಗೇಟ್ ತೆರೆದು ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇಲ್ಲವಾದರೆ, ಈ ಸಮಯದಲ್ಲಿ ನೀರಿನ ಮಟ್ಟ 6 ಮೀ.ಗಿಂತ ಕೆಳಗಡೆ ಇಳಿಕೆಯಾಗುತ್ತಿತ್ತು.
ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ಸದ್ಯ 6 ಮೀಟರ್ ನೀರು ತುಂಬಿದ್ದು, ಒಳ ಹರಿವು ಹೆಚ್ಚಾಗಿರುವ ಕಾರಣ ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗುತ್ತಿದೆ. ಪ್ರತೀದಿನ ಒಂದು ಗೇಟ್ ಮೂಲಕ ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಮಲೆನಾಡು, ಕರಾವಳಿ ಭಾಗದಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿರುವುದು, ಮುಂದಿನ ಕೆಲವು ದಿನ ಮಳೆಯಾಗಲಿರುವ ಸಾಧ್ಯತೆಯಿದ್ದು, ಮಂಗಳೂರಿನ ಪಾಲಿಗೆ ಆಶಾವಾದ ಮೂಡಿಸಿದೆ. ಈ ಮೂಲಕ ಬಹುತೇಕ ಈ ವರ್ಷದ ಬೇಸಗೆಗೆ ಬೇಕಾದಷ್ಟು ನೀರು ತುಂಬೆ ಡ್ಯಾಂನಲ್ಲಿ ಸಂಗ್ರಹ ಇರಲಿದ್ದು, ಮಂಗಳೂರು ನಗರಕ್ಕೆ ನೀರಿನ ಅಭಾವದ ಭೀತಿ ದೂರವಾಗಿದೆ.
ತುಂಬೆ ವೆಂಟೆಡ್ ಡ್ಯಾಂನಲ್ಲಿ ಗರಿಷ್ಠ 6 ಮೀಟರ್‌ವರೆಗೆ ನೀರು ಸಂಗ್ರಹಿಸಿಡುವ ಅವಕಾಶವಿದ್ದು, ಸಾಮಾನ್ಯವಾಗಿ ಎಪ್ರಿಲ್ ಮಧ್ಯಭಾಗದಲ್ಲಿ ನಾಲ್ಕೂವರೆಯಿಂದ ಐದು ಮೀಟರ್‌ನಷ್ಟು ನೀರು ಸಂಗ್ರಹ ಮಾತ್ರ ಇರುತ್ತದೆ. ಮಳೆ ಬಾರದೇ ಇರುತ್ತಿದ್ದರೆ ನೀರು ಬೇಸಗೆ ಅಂತ್ಯದವರೆಗೆ ಸಾಕಾಗುತ್ತಿರಲಿಲ್ಲ. ಬಳಿಕ ರೇಷನಿಂಗ್ ಮೂಲಕ ವಿತರಿಸುವ ವ್ಯವಸ್ಥೆಯನ್ನು ಪಾಲಿಕೆ ಮಾಡುತ್ತಿತ್ತು. ಆದರೆ ಈ ಬಾರಿ ಮೇ ಮಧ್ಯಭಾಗದಲ್ಲೇ ಗರಿಷ್ಠ ನೀರಿನ ಸಂಗ್ರಹ ಇರುವುದು ಮಹಾನಗರದ ನೀರಿನ ಕೊರತೆಗೆ ಪರಿಹಾರ ದೊರೆತಂತಾಗಿದೆ.
ಒಳ ಹರಿವು ಹೆಚ್ಚಳ
ಫೆಬ್ರವರಿ ತಿಂಗಳ ಅಂತ್ಯದಲ್ಲಿ ಹಾಗೂ ಮಾರ್ಚ್ ಆರಂಭದಲ್ಲಿ ತುಂಬೆ ಡ್ಯಾಂನಲ್ಲಿ ಒಳ ಹರಿವು ಬಹುತೇಕ ಕಡಿಮೆಯಾಗಿ ನಿಲ್ಲುವ ಹಂತಕ್ಕೆ ತಲುಪಿತ್ತು. ಈ ವೇಳೆ ರೇಷನಿಂಗ್ ಕುರಿತಾದ ಮಾತುಕತೆಯೂ ಜಿಲ್ಲಾಡಳಿತ ಹಾಗೂ ಪಾಲಿಕೆ ವತಿಯಿಂದ ನಡೆದಿತ್ತು. ಆದರೆ ಮಾರ್ಚ್ ಮಧ್ಯ ಭಾಗದಲ್ಲೇ ನೇತ್ರಾವತಿ ನದಿ ಪರಿಸರದಲ್ಲಿ ವಾರಕ್ಕೆ ಒಂದೆರಡರಂತೆ ಉತ್ತಮ ಬೇಸಗೆ ಮಳೆ ಸುರಿದಿದ್ದರಿಂದ ಒಳ ಹರಿವು ಮತ್ತೆ ಹೆಚ್ಚಳವಾಗಿತ್ತು. ಇದೀಗ ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಒಳಹರಿವು ಹೆಚ್ಚಳವಾಗಿದೆ.