ಬೆಂಗಳೂರು: ಸಾಲದ ಹಣ ಹಿಂದಿರುಗಿಸಲು ವಿಳಂಬ ಮಾಡಿದ ಸ್ನೇಹಿತನನ್ನೇ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿದ ಆರೋಪಿಯನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಗೇಂದ್ರ(26) ಬಂಧಿತ. ಜುಲೈ 23ರಂದು ಆರೋಪಿ ನಾಗೇಂದ್ರ, ತನ್ನ ಸ್ನೇಹಿತ ರವಿಕುಮಾರ್ ಎಂಬಾತನನ್ನು ಕೊಲೆಗೈದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯವನಾದ ರವಿಕುಮಾರ್ ಮತ್ತು ಆರೋಪಿ ನಾಗೇಂದ್ರ ಆಟೋ ಚಾಲಕರಾಗಿದ್ದು, ಕಳೆದ ಐದಾರು ವರ್ಷಗಳಿಂದ ಸ್ನೇಹಿತರಾಗಿದ್ದಾರೆ. ಈ ಮಧ್ಯೆ ನಾಲ್ಕು ವರ್ಷಗಳ ಹಿಂದೆ ರವಿಕುಮಾರ್ ನಾಗೇಂದ್ರನಿಂದ 4.5 ಲಕ್ಷ ರೂ. ಸಾಲ ಪಡೆದಿದ್ದ. ಆದರೆ, ಇದುವರೆಗೂ ಹಣ ವಾಪಸ್ ನೀಡಿರಲಿಲ್ಲ. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗ ಜಗಳ ನಡೆಯುತ್ತಿತ್ತು. ಬಳಿಕ ಸಮಾಧಾನವಾಗುತ್ತಿದ್ದರು ಎಂದು ಪೊಲೀಸರು ತಿಳಿದ್ದಾರೆ.
ಈ ನಡುವೆ ಭಾನುವಾರ ರಾತ್ರಿ ಮಾಳಗಾಳದ ಸ್ನೇಹಿತ ಶಿವರಾಜಕುಮಾರ ಮನೆಗೆ ರವಿಕುಮಾರ್ ತನ್ನ ಸ್ನೇಹಿತರಾದ ನಾಗೇಂದ್ರ ಮತ್ತು ಪ್ರವೀಣ್‌ಕುಮಾರ್ ಜತೆ ಬಂದಿದ್ದು, ಮೂವರು ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ಆಗ ಪ್ರವೀಣ್‌ಕುಮಾರ್ ಸಿಗರೇಟ್ ಸೇದಲು ಮನೆಯಿಂದ ಹೊರಬಂದಿದ್ದ.
ಇದೇ ವೇಳೆ ನಾಗೇಂದ್ರ ರವಿಕುಮಾರ್‌ಗೆ ತಾನು ಕೊಟ್ಟಿರುವ ಹಣ ಕೊಡುವಂತೆ ಒತ್ತಾಯಿಸಿದ. ಇದಕ್ಕೆ ರವಿಕುಮಾರ್, ನೀನು ಹಣ ಕೊಟ್ಟಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದಿದ್ದಾನೆ. ಇದಕ್ಕೆ ಆಕ್ರೋಶಗೊಂಡ ನಾಗೇಂದ್ರ ಅಲ್ಲೇ ಇದ್ದ ಬ್ಯಾಟ್‌ನಲ್ಲಿ ಹಲ್ಲೆ ನಡೆಸಿ ರವಿಕುಮಾರ್‌ನನ್ನು ಕೊಲೆಗೈದು ಪರಾರಿಯಾಗಿದ್ದ.
ಮರು ದಿನ ಬೆಳಗ್ಗೆ 10 ಗಂಟೆಗೆ ಅದೇ ಕಟ್ಟಡದಲ್ಲಿ ನೆಲೆಸಿದ್ದ ಮಹಿಳೆ ಬಟ್ಟೆ ಒಣ ಹಾಕಲು ಮಹಡಿ ಮೇಲೆ ತೆರಳಿದಾಗ ಮನೆ ಬಾಗಿಲನಲ್ಲಿ ರಕ್ತದ ಕಲೆಗಳು ಕಂಡಿದೆ. ಅನುಮಾನಗೊಂಡು ಬಾಗಿಲು ತಳ್ಳಿ ಇಣುಕಿದಾಗ ರಕ್ತದ ಮಡುವಿನಲ್ಲಿ ರವಿಕುಮಾರ್ ಮೃತದೇಹ ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.